ಬಿಜೆಪಿನೊಳಗಿನ ಆಂತರಿಕ ಕಲಹದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನೊಳಗೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ನಾಯಕತ್ವಕ್ಕಾಗಿ ನಡೆಯುತ್ತಿರುವ ಕಾದಾಟ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿಯೊಳಗಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವುದನ್ನು ಗಮನಿಸುತ್ತಿರುವ ಪಕ್ಷದ ಕೆಲವು ವರಿಷ್ಠರು, ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಒಲವು ತೋರಿದ್ದರೆ, ಇನ್ನೂ ಕೆಲವು ಹಿರಿಯ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ತಲೆದಂಡಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ರಾಜನಾಥ ಸಿಂಗ್ ಸೇರಿದಂತೆ ಕೆಲವರು ಒಲವು ತೋರಿದ್ದು, ಸದಾನಂದ ಗೌಡರ ಬೆನ್ನಿಗೆ ಎಲ್.ಕೆ. ಅಡ್ವಾಣಿ, ಸುಶ್ಮಾ ಸ್ವರಾಜ್ ನಿಂತಿರುವುದು ಹೈಕಮಾಂಡನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಅಡ್ವಾಣಿ ಹಾಗೂ ಸುಶ್ಮಾರನ್ನು ಒಪ್ಪಿಸಲು ನಾಯಕರು ಹರಸಾಹಸ ಪಡುತ್ತಿದೆ.
ಅವರ ಮನವೊಲಿಕೆಗೆ ಯತ್ನ ಮುಂದುವರಿದಿದ್ದು, ಅವರು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ವಿಷಯವನ್ನು ಅರಿತಿರುವ ಸದಾನಂದ ಗೌಡ ಇಂದು ಬೆಳಗ್ಗೆಯಿಂದ ಸಂಜೆಯ ವರೆಗೆ ನಾಯಕರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಮುರಳಿ ಮನೋಹರ ಜೋಷಿ, ಸುಶ್ಮಾ ಸ್ವರಾಜ್ ಹಾಗೂ ಅನಂತ ಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವೀರಶೈವರನ್ನು ಕಡೆಗಣಿಸಿದರೆ ಇದರಿಂದ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಪರಿಣಾಮ ಬೀರುವ ಸಾಧ್ಯತೆ ವರಿಷ್ಠರು ಅರಿತಿದ್ದಾರೆ.
ಜೊತೆಗೆ ಒಕ್ಕಲಿಗರನ್ನು ಕೂಡಾ ಜೊತೆ ಕರೆದೊಯ್ಯುವ ಉದ್ದೇಶದಿಂದ ರಾಜ್ಯ ನಾಯಕರ ಮುಂದೆ ಕೆಲವು ಪರಿಹಾರ ಸೂತ್ರಗಳಿನ್ನಿಟ್ಟಿದ್ದಾರೆ ಎನ್ನಲಾಗಿದೆ. ಜಗದೀಶ್ ಶೆಟ್ಟರ್‌ರನ್ನು ಮುಖ್ಯಮಂತ್ರಿ ಮಾಡಿ, ಈಶ್ವರಪ್ಪರನ್ನು ಉಪ ಮುಖ್ಯಮಂತ್ರಿಯನ್ನಾಗಿ, ಸದಾನಂದ ಗೌಡರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು,. ಇನ್ನೊಂದು ಸದಾನಂದ ಗೌಡರನ್ನು ಸಿಎಂ ಆಗಿ ಮುಂದುವರಿಸಿ, ಶೆಟ್ಟರ್‌ಗೆ ಉಪ ಮುಖ್ಯಮಂತ್ರಿಯ ಸ್ಥಾನ ನೀಡುವುದು. ಮತ್ತೊಂದು ಶೆಟ್ಟರ್‌ಗೆ ಸಿಎಂ ಸ್ಥಾನ ನೀಡಿ, ಅಶೋಕ್‌ರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಹಾಗೂ ಸದಾನಂದ ಗೌಡರಿಗೆ ರಾಷ್ಟ್ರಮಟ್ಟದಲ್ಲಿ ಸ್ಥಾನ ನೀಡುವ ಪರಿಹಾರ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದೆ.
ಹೈಕಮಾಂಡ್ ಮುಂದೇನು ಮಾಡಬಹುದು...
ಒಂದು ವೇಳೆ ಬಿಜೆಪಿ ಹೈಕಮಾಂಡ್ ಏನಾದರೂ ಬದಲಾವಣೆ ಎಂಬುದನ್ನು ಮಾಡುವುದಿದ್ದರೆ, ಮುಖ್ಯಮಂತ್ರಿಯಾಗಿ ಡಿ.ವಿ. ಸದಾನಂದ ಗೌಡರನ್ನು ಮುಂದುವರಿಸಿ, ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಜಗದೀಶ್ ಶೆಟ್ಟರ್‌ರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಹೈಕಮಾಂಡ್ ಮುಂದಾಗಬಹುದು. ಆದರೆ ಬಿಜೆಪಿ ಆಡಳಿತ ಇರುವ ಯಾವುದೇ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸಷ್ಟಿಸಿಲ್ಲ. ಮೈತ್ರಿ ಸರಕಾರ ಇರುವ ಕಡೆಗಳಲ್ಲಿ ಮಾತ್ರ ಇಂತಹ ವ್ಯವಸ್ಧೆ ಇದೆ. ಈ ಬಗ್ಗೆ ಹೈಕಮಾಂಡ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಮಾತ್ರ ನಿಗೂಢ. ಇನ್ನು ಎರಡನೆ ಸೂತ್ರದ ಪ್ರಕಾರ, ಮುಖ್ಯಮಂತ್ರಿ ಸ್ಥಾನಕ್ಕೆ ಶೆಟ್ಟರ್ ಅವರನ್ನು ತಂದು, ಮುಖ್ಯಮಂತ್ರಿಯಾಗಿರುವ ಸದಾನಂದಗೌಡರಿಗೆ ಪಕ್ಷದ ಅಧ್ಯಕ್ಷ ಸ್ಧಾನ ನೀಡಿ, ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆಯೂ ಪರಿಶೀಲನೆ ನಡೆದಿದೆ. ಇನ್ನೊಂದು ಸೂತ್ರದ ಪ್ರಕಾರ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ, ಸದಾನಂದಗೌಡರನ್ನು ಪಕ್ಷದ ಅಧ್ಯಕ್ಷ ಸ್ಧಾನಕ್ಕೆ ತರುವುದು,. ಯಥಾ ಪ್ರಕಾರ ಶೆಟ್ಟರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಆಲೋಚನೆ ನಡೆಸುತ್ತಿದೆ. ಏನೇ ಬದಲಾವಣೆಯಾದರೂ ಈ ಮೂವರ ನಡುವೆಯೇ ಆಗಬೇಕು. ಇಲ್ಲವೆ ಯಥಾ ಸ್ಧಿತಿ ಕಾಯ್ದುಕೊಂಡು ಹೋಗಬೇಕೆಂಬ ನಿಲುವಿನಲ್ಲಿ ವರಿಷ್ಠರಿದ್ದಾರೆ. ಆದರೆ ಇದು ಯಾವಾಗ ಆಗಲಿದೆ ಎಂಬುದನ್ನು ಮಾತ್ರ ಹೇಳಲು ಯಾರೂ
ಸಿದ್ಧರಿಲ್ಲ. ಶೆಟ್ಟರ್ ಸಿಎಂ ಈಶ್ವರಪ್ಪ ಡಿಸಿಎಂ?
ಬೆಂಗಳೂರು, ಜು.3: ರಾಜ್ಯ ಬಿಜೆಪಿಯಲ್ಲೀಗ ಬದಲಾವಣೆಯ ಗಾಳಿ ಬೀಸಲಿದ್ದು, ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದೆರಡು ವಾರಗಳಿಂದ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನಕ್ಕೆ ಇಂದು ಬಿಜೆಪಿ ಹೈಕಮಾಂಡ್‌ನೊಂದಿಗೆ ರಾಜ್ಯ ಬಿಜೆಪಿ ಮುಖಂಡರು ನಡೆಸಿದ ಸಭೆಯು ಬಹುತೇಕ ಫಲಪ್ರದವಾಗಿದ್ದು, ಜಗದೀಶ ಶೆಟ್ಟರ್‌ರನ್ನು ಮುಖ್ಯಮಂತ್ರಿ ಯಾಗಿ ಮಾಡುವ ಬಿ.ಎಸ್. ಯಡಿಯೂರಪ್ಪ ಬಣದ ಬೇಡಿಕೆ ಈಡೇರುವುದು ಖಾತ್ರಿಯಾಗಿದೆ ಎಂದು ಬಿಜೆಪಿ ಹೈಕಮಾಂಡ್ ಮೂಲಗಳು ತಿಳಿಸಿವೆ.
ದಿಲ್ಲಿಯಲ್ಲಿಂದು ಬಿಜೆಪಿ ಸಂಸದೀಯ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜ್ಯ ಸರಕಾರದ ಇನ್ನುಳಿದ ಅವಧಿಗೆ ಜಗದೀಶ್ ಶೆಟ್ಟರ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮತ್ತು ಕೆೆ.ಎಸ್. ಈಶ್ವರಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿಸಲು ಒಲವು ತೋರಿದ್ದು, ಇನ್ನುಳಿದ ಮುಖಂಡರು ಸಹ ಸಮ್ಮತಿ ನೀಡುವ ಸಾಧ್ಯತೆ ಇದೆ. ಜು.16ರನಂತರ ಅಂತಿಮ ತೀರ್ಮಾನ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
0 comments:
Post a Comment