ವಿವಾದಕ್ಕೆ ಎಡೆಮಾಡಿದ ಪಕ್ಷಾಧ್ಯಕ್ಷರ ಹೇಳಿಕೆ
ಬೆಂಗಳೂರು, ಜೂ.6:‘ಸರಕಾರ ರಚಿಸಲು ಹಾದಿ ಬೀದಿಯಲ್ಲಿ ಹೋಗೋರನ್ನೆಲ್ಲ ಜಾತಿ, ಹಣ ಬಳಸಿ ಕರೆತಂದೆವು’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿಕೆ ಬಿಜೆಪಿಯೊಳಗೆ ಆಕ್ರೋಶಕ್ಕೆ ಕಾರಣವಾಗಿದೆ.ಜಾತಿ ಹಣದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದೂ ಈಶ್ವರಪ್ಪ ಹೇಳಿದ್ದು, ಭಿನ್ನ ಗುಂಪಿನ ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ.ಸಚಿವರಾದ ಉಮೇಶ್ ಕತ್ತಿ, ವಿ.ಸೋಮಣ್ಣ ಹಾಗೂ ಬಿ.ಎನ್.ಬಚ್ಚೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರು ವವರು ಈ ರೀತಿಯ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಟೀಕಿಸಿದ್ದಾರೆ.ಈಶ್ವರಪ್ಪರ ಹೇಳಿಕೆ ಬಿಜೆಪಿಯ ಉಳಿದ ಶಾಸಕರಿಗೂ ಮುಜುಗರ ತಂದಿದೆ.ಬುಧವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಆವೇಶದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.ಯಾರಿಗೆ ಎಷ್ಟು ಹಣ ನೀಡಿದ್ದಾರೆಂಬ ಮಾಹಿತಿಯನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ತಾನು ಕಳೆದ 25 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿದ್ದು, ಒಟ್ಟು ಏಳು ಬಾರಿ ಆರು ಚಿನ್ಹೆ ಅಡಿಯಲ್ಲಿ ಆರಿಸಿ ಬಂದಿದ್ದು, ಗೆಲ್ಲುವ ಯೋಗ್ಯತೆ ತನಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಉಮೇಶ್ ಕತ್ತಿ, ತನಗೆ ಯಾವುದೇ ಪಕ್ಷದ ಚಿನ್ಹೆ ಮುಖ್ಯವಲ್ಲ. ಜನತೆಯ ಆಶೀರ್ವಾದ ಇದ್ದರೆ ಯಾರನ್ನು ಯಾರು ಕೂಡ ಹೊರಗೆ ಹಾಕಲು ಸಾಧ್ಯವಿಲ್ಲ ಎಂದು ಗುಡುಗಿದರು.ನನ್ನದೆ ಸಿದ್ಧಾಂತದ ಮೇಲೆ ನಾನು ನಿಂತಿದ್ದು, ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ನಾನು ಯಾವುದೇ ಕಾರಣಕ್ಕೂ ನನ್ನ ಜಾತಿ ಬದಲಾಯಿಸಲು ಸಾಧ್ಯವಿಲ್ಲ ಎಂದ ಉಮೇಶ್ ಕತ್ತಿ, ಜನತಾ ಪರಿವಾರದಿಂದ ಬಂದವರು ಎಲ್ಲ ಪಕ್ಷಗಳಲ್ಲಿ ಇದ್ದಾರೆ.
ರಾಜ್ಯದಲ್ಲಿ ಅಸ್ಥಿರ ಸರಕಾರ ಆಡಳಿತಕ್ಕೆ ಬರಬಾರದು ಎಂಬ ಉದ್ದೇಶದಿಂದ ಬಿಜೆಪಿಗೆ ಬಂದಿರುವೆ ಎಂದು ಸ್ಪಷ್ಟಪಡಿಸಿದರು. ಹುಲಿ.. ಹುಲಿಯೇ.. ‘ಮಾಜಿ ಸಿಎಂ ಯಡಿಯೂರಪ್ಪರ ಬಲ ಕುಗ್ಗುತ್ತಿದೆಯಲ್ಲ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ‘ಹುಲಿ ಎಲ್ಲಿದ್ದರೂ, ಹೇಗಿದ್ದರೂ ಹುಲಿಯೇ. ಹೊಟ್ಟೆಗೆ ಕೂಳಿಲ್ಲ ಎಂದು ಹುಲಿ ಇಲಿಯಾಗಿ ಬದಲಾಗುವುದಿಲ್ಲ. ಯಾರಿಂದಲೂ ಹುಲಿಯನ್ನು ಇಲಿ ಮಾಡಲು ಆಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
ಸ್ವಾಭಿಮಾನ ದೊಡ್ಡದು:
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ವಿ.ಸೋಮಣ್ಣ, ಎಲ್ಲಕ್ಕಿಂತಲೂ ವ್ಯಕ್ತಿಗೆ ಸ್ವಾಭಿಮಾನ ದೊಡ್ಡದು.ಯಾವ ಉದ್ದೇಶವಿಟ್ಟುಕೊಂಡು ಈಶ್ವರಪ್ಪ ಈ ರೀತಿ ಹೇಳಿಕೆ ನೀಡಿದ್ದಾರೆಂಬುದು ತಿಳಿಯದು. ಈ ಬಗ್ಗೆ ಅವರೊಂದಿಗೆ ಚರ್ಚಿಸುವೆ ಎಂದರು.ಅಧಿಕಾರ ಒಂದು ರೀತಿಯಲ್ಲಿ ಮುಳ್ಳಿನ ಹಾಸಿಗೆ ಇದ್ದಂತೆ.ನಾಯಕರಾದವರು ಮಾತನಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದ ಸೋಮಣ್ಣ, ನನಗೂ ವರ್ಚಸ್ಸು ಇದೆ.ಎಲ್ಲಕ್ಕೂ ಕಾಲವೇ ಉತ್ತರ ನೀಡುತ್ತದೆ.ಜನತೆಯ ಆಶೀರ್ವಾದ ಎಲ್ಲಕ್ಕೂ ಪರಿಹಾರ ಕಲ್ಪಿಸಲಿದೆ ಎಂದು ನುಡಿದರು.
ಸ್ವಂತ ಬಲದಿಂದ ಗೆಲುವು:ಈಶ್ವರಪ್ಪ ಹೇಳಿಕೆಯ ಬಗ್ಗೆ ತನಗೆ ಮಾಹಿತಿ ಇಲ್ಲ.ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿಯ ಹೇಳಿಕೆ ನೀಡಿರಲಾರರು ಎಂಬುದು ನನ್ನ ಭಾವನೆ.ಜನತೆಯ ಆಶೀರ್ವಾದ ಹಾಗೂ ಸ್ವಂತ ಬಲದಿಂದ ಗೆದ್ದು ಬಂದಿರುವೆ. ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಬಚ್ಚೇಗೌಡರು ಪ್ರತಿಕ್ರಿಯಿಸಿದರು
0 comments:
Post a Comment