PLEASE LOGIN TO KANNADANET.COM FOR REGULAR NEWS-UPDATES


ಹೊಸದಿಲ್ಲಿ, ಜೂ.27:ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಕೈದಿ ಸರಬ್ಜೀತ್ ಸಿಂಗ್‌ಗೆ ಅಲ್ಲಿನ ಅಧ್ಯಕ್ಷರು ಕ್ಷಮಾದಾನ ನೀಡಿದ್ದು, ಆತ ಶೀಘ್ರವೇ ಬಿಡುಗಡೆ ಯಾಗಲಿರುವನೆಂದು ಘೋಷಿಸಿದ್ದ ಪಾಕಿಸ್ತಾನ ಏಕಾಏಕಿ ತಿಪ್ಪರಲಾಗ ಹೊಡೆದು ಬಿಡುಗಡೆಯಾಗಲಿರುವುದು ಸರಬ್ಜೀತ್ ಅಲ್ಲ.30 ವರ್ಷಗಳಿಂದ ಬಂಧನದಲ್ಲಿರುವ ಇನ್ನೊಬ್ಬ ಭಾರತೀಯ ಕೈದಿ ಸುರ್ಜೀತ್ ಸಿಂಗ್ ಎಂದು ಹೇಳಿಕೆ ನೀಡಿರುವುದಕ್ಕೆ ಅಲ್ಲಿನ ಅಧಿಕಾರಿಗಳ ನಡುವಿನ ದುರ್ಬಲ ಸಂವಹನ ಕಾರಣವೆಂದು ಈಗ ಆರೋಪಿಸಲಾಗಿದೆ. ಪಾಕಿಸ್ತಾನದ ಅಧ್ಯಕ್ಷೀಯ ವಕ್ತಾರ ಫರ್ಹತ್ತುಲ್ಲಾ ಬಾಬರ್ ಮಂಗಳವಾರ ಸಂಜೆ 7:30ರ ವೇಳೆ ಬಿಡುಗಡೆ ಮಾಡಲಾಗುವುದೆಂದು ಹೆಸರಿಸಿದ್ದ ವ್ಯಕ್ತಿ ಸುರ್ಜೀತ್ ಸಿಂಗ್ ಎಂದು ಸಿಎನ್‌ಎನ್-ಐಬಿಎನ್ ಖಚಿತ ಪಡಿಸಿದೆ.ಆದಾಗ್ಯೂ,ಮಾಧ್ಯಮಗಳಲ್ಲಿ ಬಂದಿದ್ದ ವರದಿಯನ್ನು ತಕ್ಷಣ ಸರಿಪಡಿಸುವ ಯಾವುದೇ ಪ್ರಯತ್ನವನ್ನು ಬಾಬರ್ ಅಥವಾ ಪಾಕ್ ಸರಕಾರ ಮಾಡಿಲ್ಲ.ವಾಸ್ತವವಾಗಿ ಪಾಕ್ ಸರಕಾರ ವರದಿಯ ಅಧಿಕೃತ ನಿರಾಕರಣೆಗೆ ತಾಸುಗಳನ್ನೇ ತೆಗೆದುಕೊಂಡಿದೆ.ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ತಾವು ಸರಬ್ಜೀತ್‌ನ ಬಿಡುಗಡೆಗಾಗಿ ಒತ್ತಾಯವನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ.
ಸರಬ್ಜೀತ್‌ನನ್ನು ಬಿಡುಗಡೆ ಮಾಡಲಾಗುವುದೆಂಬ ವರದಿಯ ನಿರಾಕರಣೆ ಆತನ ಹಾಗೂ ಆತನ ಕುಟುಂಬದ ಅದೃಷ್ಟಕ್ಕೆ ಕ್ರೂರ ತಿರುವನ್ನು ನೀಡಿದೆ.ಆದರೆ, ಪಾಕಿಸ್ತಾನದಿಂದಾದ ಈ ತಪ್ಪು ಪ್ರಮಾದವೇ ಅಥವಾ ಕುಚೇಷ್ಠೆಯೇ ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಏಕೆಂದರೆ,ಸುರ್ಜೀತ್ ಈಗಾಗಲೇ ತನ್ನ ಆಜೀವ ಸೆರೆವಾಸದ ಅವಧಿ ಪೂರೈಸಿದ್ದು,ಆತನ ಬಿಡುಗಡೆಗೆ ಅಧ್ಯಕ್ಷರ ಸಹಿ ಅಗತ್ಯವಿಲ್ಲ.ಆದರೆ,ಈ ಘೋಷಣೆ ಅಧ್ಯಕ್ಷೀಯ ವಕ್ತಾರರಿಂದಲೇ ಬಂದಿತ್ತು.ಇದಾಗಿ 5ತಾಸುಗಳ ಬಳಿಕ ಬಾಬರ್, ಬಿಡುಗಡೆಯಾಗಲಿರುವುದು ಸುರ್ಜೀತ್,ಸರಬ್ಜೀತ್ ಅಲ್ಲ ಎಂಬ ಸ್ಪಷ್ಟೀಕರಣ ನೀಡಿದ್ದು,ಆತನ ಹುಟ್ಟೂರು ಜಲಂಧರ್‌ನಲ್ಲಿ ಉತ್ಸವದ ವಾತಾವರಣ ನಿರ್ಮಿಸಿದೆ.‘‘ಇದರಲ್ಲೇನೋ ಗೊಂದಲ ವಾಗಿದೆಯೆಂಬುದು ನನ್ನ ಅಭಿಪ್ರಾಯ.
ಮೊದಲನೆಯದಾಗಿ ಇದು ಕ್ಷಮಾದಾನದ ಪ್ರಕರಣವಲ್ಲ. ಇನ್ನೂ ಮುಖ್ಯವಾಗಿ ಅದು ಸರಬ್ಜೀತ್ ಅಲ್ಲ. ಆತ ಸುಚಾ ಸಿಂಗ್ ಎಂಬವರ ಮಗ ಸರ್ಜೀತ್ ಸಿಂಗ್.ಅವನ ಮರಣ ದಂಡನೆಯನ್ನು 1989ರಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ಬೇನಝೀರ್ ಭುಟ್ಟೊರ ಶಿಫಾರಸಿನ ಮೇರೆಗೆ ಅಂದಿನ ಅಧ್ಯಕ್ಷ ಗುಲಾಂ ಇಶಾಕ್ ಖಾನ್ ಜೀವಾವಧಿಗೆ ಬದಲಾಯಿಸಿದ್ದರು’’ ಎಂದು ಬಾಬರ್ ಹೇಳಿದ್ದಾರೆ.ಈ ವಿಷಯದಲ್ಲಿ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿಯವರ ಯಾವುದೇ ಉಲ್ಲೇಖ ‘ತಪ್ಪು ನಮೂದು’ ಎಂದವರು ಸ್ಪಷ್ಟಪಡಿಸಿದರು.ಈ ತಿಪ್ಪರಲಾಗಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಸರಬ್ಜೀತ್‌ನ ಬಿಡುಗಡೆಗೆ ಭಾರತದ ಆಗ್ರಹವನ್ನು ನವೀಕರಿಸಿದ್ದಾರೆ.
ಪಾಕಿಸ್ತಾನದಲ್ಲಿ ನಿನ್ನೆ ಸಂಜೆ ಏನಾಯಿತು ಎಂಬುದನ್ನು ತಾನು ಊಹಿಸಲಾರೆ.ತಾವು ಸರಬ್ಜೀತ್‌ನ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ ಒತ್ತಾಯವನ್ನು ನವೀಕರಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.ಪಾಕಿಸ್ತಾನದ ಈ ತಪ್ಪು ತಮ್ಮ ಸಂತೋಷವನ್ನು ಕಸಿದುಕೊಂಡಿದೆ. ಆದಾಗ್ಯೂ,ಸರಬ್ಜೀತ್‌ನ ಬಿಡುಗಡೆಯ ತಮ್ಮ ಹೋರಾಟವನ್ನು ತಾವು ಮುಂದುವರಿಸಲಿದ್ದೇವೆಂದು ಸರಬ್ಜೀತ್‌ನ ಕುಟುಂಬ ಹೇಳಿದೆ.

Advertisement

0 comments:

Post a Comment

 
Top