ಪ್ರಣವ್ ಮುಖರ್ಜಿ ಹಾಗೂ ಪಿ.ವಿ. ಸಂಗ್ಮಾ ನಾಳೆ ನಾಮ ಪತ್ರ ಸಲ್ಲಿಸಲಿದ್ದು, ಯುಪಿಎ ಹಾಗೂ ಬಿಜೆಪಿ ಬೆಂಬಲಿತ ವಿಪಕ್ಷ ಅಭ್ಯರ್ಥಿಗಳ ನಡುವೆ ರಾಷ್ಟ್ರಪತಿ ಚುನಾವಣಾ ಹೋರಾಟಕ್ಕೆ ವೇದಿಕೆ ಸಿದ್ಧವಾಗಲಿದೆ. ಆದಾಗ್ಯೂ, ಚುನಾವಣಾ ಲೆಕ್ಕಾಚಾರದ ಪ್ರಕಾರ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿಯವರ ಗೆಲುವು ನಿಚ್ಚಳವೆಂದೇ ಹೇಳಲಾಗುತ್ತಿದ್ದು, ಸಂಗ್ಮಾ ಪವಾಡವನ್ನು ಎದುರು ನೋಡುತ್ತಿದ್ದಾರೆ.ಮಿತ್ರ ಪಕ್ಷ ತೃಣಮೂಲ ಕಾಂಗ್ರೆಸ್‌ನ ಬಂಡಾಯದಿಂದ ಎದೆಗುಂದದ ಕಾಂಗ್ರೆಸ್, ಈ ಚುನಾವಣೆಯನ್ನು ಯುಪಿಎಯ ಒಗ್ಗಟ್ಟು ತೋರಿಸಲು ಹಾಗೂ ಎನ್‌ಡಿಎಯೊಳಗೆ ತೂರಲು ಸಿಕ್ಕಿದ ಸದವಕಾಶವೆಂದು ಅಭಿಪ್ರಾಯಿಸಿದೆ.ಮುಖರ್ಜಿ ನಾಳೆ ಪೂರ್ವಾಹ್ಣ 11 ಗಂಟೆಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಹಿತ ಯುಪಿಎಯ ಅಗ್ರ ನಾಯಕರೊಂದಿಗೆ ತೆರಳಿ ನಾಮಪತ್ರ ದಾಖಲಿಸಲಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಹೊರತಾಗಿ ಶರದ್ ಪವಾರ್ (ಎನ್‌ಸಿಪಿ) ಟಿ.ಆರ್.ಬಾಬು (ಡಿಎಂಕೆ), ಫಾರೂಕ್ ಅಬ್ದುಲ್ಲಾ (ಎನ್‌ಸಿ) ಹಾಗೂ ಇ ಅಹ್ಮದ್ ಸಹಿತ ಯುಪಿಎ ಅಂಗಪಕ್ಷಗಳ ನಾಯಕರು ಈ ವೇಳೆ ಹಾಜರಿದ್ದು, ಆಳುವ ಪಕ್ಷದ ಒಗ್ಗಟ್ಟನ್ನು ತೋರಿಸವ ಸಂಭವವಿದೆ.
ಎನ್‌ಡಿಎಯ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಶಿವಸೇನೆ ಮುಖರ್ಜಿಯವರಿಗೆ ಬೆಂಬಲ ಘೋಷಿಸಿವೆ.ಮುಖರ್ಜಿ ನಾಲ್ಕು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದ್ದು, ಎನ್‌ಡಿಎ ಸಂಚಾಲಕ ಹಾಗೂ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅಂತಹ ಒಂದು ನಾಮಪತ್ರಕ್ಕೆ ಸೂಚಕರಾಗಿ ಸಹಿಹಾಕಲಿದ್ದು,ರಕ್ಷಣಾ ಸಚಿವ ಎ.ಕೆ.ಆಂಟನಿ ಕೂಡ ಅದಕ್ಕೆ ಅಂಕಿತ ಹಾಕಲಿರುವರೆನ್ನಲಾಗಿದೆ.
77ರ ಹರೆಯದ ಮುಖರ್ಜಿಯವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಯುಪಿಎಯ ಚುನಾವಣಾ ವ್ಯವಸ್ಥಾಪಕರು ಅವರಿಗೆ ದಾಖಲೆ ಪತ್ರಗಳು ದೊರೆಯುವಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ.64ರ ಹರೆಯದ ಸಂಗ್ಮಾ ಎಷ್ಟು ಸಮಯಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆಂಬುದು ತಿಳಿದು ಬಂದಿಲ್ಲ. ಅವರು ನಾಮಾಂಕನ ದಾಖಲಿಸುವ ವೇಳೆ ಹಿರಿಯ ಬಿಜೆಪಿ ನಾಯಕರು, ಜನತಾ ಪಾರ್ಟಿಯ ಅಧ್ಯಕ್ಷ ಸುಬ್ರಹ್ಮಣ್ಯನ್ ಸ್ವಾಮಿ, ಎಡಿಎಂಕೆ ಹಾಗೂ ಬಿಜೆಡಿಯ ಹಿರಿಯ ಸಂಸದರು ಉಪಸ್ಥಿತರಿರುವ ನಿರೀಕ್ಷೆಯಿದೆ.
0 comments:
Post a Comment