ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಸೋಮವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭವು ಕನ್ನಡ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಕೆ ಅಥವಾ ಬೇಡವೇ ಎಂಬ ವಿಷಯದ ಕುರಿತು ಸಾಹಿತಿಗಳ ಪರ-ವಿರೋಧ ಚರ್ಚೆಗೆ ವೇದಿಕೆಯಾಯಿತು.
`ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವುದಕ್ಕೆ ಸರ್ಕಾರ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂದಾಳತ್ವ ವಹಿಸಬೇಕು` ಎಂದು ವಿಮರ್ಶಕ ಡಾ.ಕೆ.ಮರುಳ ಸಿದ್ದಪ್ಪ ಅವರು ಕರೆ ನೀಡಿದರು.
`ಪುಂಡಲೀಕ ಹಾಲಂಬಿ ಅವರು ಕನ್ನಡ ಕಟ್ಟುವುದಕ್ಕಾಗಿ ಬಲಿದಾನಕ್ಕೂ ಸಿದ್ದ ಎಂದು ಹೇಳಿಕೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಲಿದಾನ ಬೇಡ. ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳಿಗೆ ಒದಗಿರುವ ದುಸ್ಥಿತಿಯ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು` ಎಂದು ವೇದಿಕೆಯಲ್ಲಿದ್ದ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಕುರಿತು ಹೇಳಿದರು.
`ರಾಜ್ಯದಲ್ಲಿ ಶೇ 75ರಷ್ಟು ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳಿವೆ. ಸರ್ಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದರೆ, ಕನ್ನಡ ಭಾಷೆಯೂ ಸುಸ್ಥಿತಿಯಲ್ಲಿರುತ್ತದೆ. ಈ ವಿವೇಕವನ್ನು ಸರ್ಕಾರ ಮರೆತಿದೆ. ಇಂಗ್ಲಿಷನ್ನು ಭಾಷೆಯಾಗಿ ಒಂದನೇ ತರಗತಿಯಿಂದ ಕಲಿಸೋಣ. ಆದರೆ ಮಾಧ್ಯಮವಾಗಿ ಬೇಡ` ಎಂದರು.
ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, `ಕೇವಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ತಡೆ ಹಿಡಿಯುವ ಬದಲು ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಗ್ರಾಮೀಣ ಭಾಗದಲ್ಲಿರುವ ರೈತನ ಮಗ ಇಂಗ್ಲಿಷ್ ಭಾಷೆ ಕಲಿಯಬಾರದು ಎನ್ನಲು ನಾವ್ಯಾರು?` ಎಂದು ವಿರೋಧ ವ್ಯಕ್ತಪಡಿಸಿದರು.
`ಖಾಸಗಿ ಶಾಲೆಯಲ್ಲಿ ಕಲಿತ ನನ್ನ ಮಗಳು ಅಚ್ಚ ಕನ್ನಡ ಮರೆತಿದ್ದಾಳೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವುದಾದರೆ ಮಾತ್ರ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಎಂಬ ಒಪ್ಪಂದಕ್ಕೆ ಅವಕಾಶ ಮಾಡಿಕೊಡಬೇಕು` ಎಂದು ಪ್ರತಿಪಾದಿಸಿದರು.
ಮರುಳ ಸಿದ್ದಪ್ಪ ಬೆಂಬಲಕ್ಕೆ ನಿಂತ ಬರಗೂರು ರಾಮಚಂದ್ರಪ್ಪ, `ಇಂಗ್ಲಿಷ್ ಭಾಷೆಯಾಗಿ ಕಲಿಸಲು ಯಾರ ಅಡ್ಡಿಯಿಲ್ಲ. ಆದರೆ, ಮಾಧ್ಯಮವಾಗಿ ಇಂಗ್ಲಿಷ್ ಬೇಡ. ಸದ್ಯಕ್ಕೆ ಸರ್ಕಾರವು ಇಂಗ್ಲಿಷ್ ಮಾಧ್ಯಮ ಆರಂಭಕ್ಕೆ ನೀಡಿರುವ ಅನುಮತಿಯನ್ನು ವಿರೋಧಿಸೋಣ. ಮುಂದಿನ ದಿನಗಳಲ್ಲಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಏಕರೂಪವಾಗುವ ಕುರಿತು ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚೆನಡೆಸೋಣ` ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪುಂಡಲೀಕ ಹಾಲಂಬಿ, `ಸರ್ಕಾರ ಪರಿಷತ್‌ಗೆ ಅನುದಾನ ನೀಡಿದೆ ಎಂದ ಮಾತ್ರಕ್ಕೆ ಕನ್ನಡ ವಿರೋಧಿ ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ನಿರ್ಧಾರ ಕೈಗೊಳ್ಳುವಾಗ ಪ್ರಾಥಮಿಕ ಶಿಕ್ಷಣ ಸಚಿವರು ಕನ್ನಡಪರ ಚಿಂತಕರೊಂದಿಗೆ ಚರ್ಚಿಸಬೇಕೆಂಬ ಕನಿಷ್ಠ ಸೌಜನ್ಯವನ್ನೂ ಹೊಂದಿಲ್ಲದೇ ಇರುವುದು ವಿಷಾದನೀಯ` ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪ್ರತಿಪಾದಕ `ಒಡೆಯ`ರ್
`ಶ್ರೇಣೀಕೃತ ಸಮಾಜ ವ್ಯವಸ್ಥೆ ಇದ್ದಾಗಲೂ ದಲಿತ ಹಾಗೂ ಬುಡಕಟ್ಟು ಜನಾಂಗದವರಿಗೆ ಅರಮನೆಯೊಳಗೆ ನಿಂತು ದಸರಾ ದರ್ಬಾರ್ ನೋಡಲು ಅವಕಾಶ ನೀಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಪ್ರತಿ ಚಿಂತನೆಯೂ ಸಾಮಾಜಿಕ ನ್ಯಾಯ ಪ್ರತಿಪಾದಿಸುತ್ತದೆ` ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನೀಡಿದ `ನಾಲ್ವಡಿ ಕೃಷ್ಣರಾಜ ಒಡೆಯರ್` ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
`ಸಂವಿಧಾನದ ಆಶಯಗಳನ್ನು ಹತ್ತಿಕ್ಕಿ ಬೆಳೆಯುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಮುಂದೆ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವ ಮಂಡಿಯೂರಿದೆ. ಇಂತಹ ಸಂದರ್ಭದಲ್ಲಿ ಕೃಷ್ಣರಾಜ ಒಡೆಯರ್ ಅಂತಹ ದಕ್ಷ ಹಾಗೂ ಸಾಮಾಜಿಕ ಹರಿಕಾರರ ಅಗತ್ಯವಿದೆ` ಎಂದು ಹೇಳಿದರು.
ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, `ಬಂಡಾಯ ಸಾಹಿತ್ಯದ ಪ್ರವರ್ತಕನಾಗಿರುವ ಬರಗೂರು ರಾಮಚಂಧ್ರಪ್ಪ ದಂತಗೋಪುರದ ಸಾಹಿತಿಯಲ್ಲ. ಪ್ರಾಧ್ಯಾಪಕ, ಸಿನಿಮಾ ನಿರ್ದೇಶಕ, ಸಾಹಿತಿ ಹೀಗೆ.. ಬಹುಮುಖಿ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ್ದಾರೆ` ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. : ಪ್ರಜಾವಾಣಿ ವರದಿ
0 comments:
Post a Comment