ಹೊಸದಿಲ್ಲಿ,ಜೂ.4:ಭಾರತೀಯ ಕ್ರಿಕೆಟ್‌ರಂಗದ ಜೀವಂತ ದಂತಕತೆಯೆನಿಸಿರುವ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡುಲ್ಕರ್ ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಸದಸ್ಯನಾದ ಬಳಿಕವೂ ತಾನು ಕ್ರಿಕೆಟ್‌ನಲ್ಲಿಯೇ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವೆ ಎಂದು ಸಚಿನ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಕ್ರಿಕೆಟ್ ರಂಗದಿಂದ ನಿವೃತ್ತಿಯಾದ ಬಳಿಕವಷ್ಟೇ ಸಂಸತ್ ಚಟುವಟಿಕೆಗಳಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.39 ವರ್ಷ ವಯಸ್ಸಿನ ತೆಂಡುಲ್ಕರ್‌ಗೆ ರಾಜ್ಯಸಭಾಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ ಪ್ರಮಾಣವಚನ ಬೋಧಿಸಿದರು. ತೆಂಡುಲ್ಕರ್ ಪತ್ನಿ ಅಂಜಲಿ, ಕೇಂದ್ರ ಕ್ರೀಡಾ ಸಚಿವ ರಾಜೀವ್ ಶುಕ್ಲಾ, ಹರೀಶ್ ರಾವತ್ ಹಾಗೂ ವಿ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಾಷ್ಟ್ರಾಧ್ಯಕ್ಷೆ ಪ್ರತಿಭಾಪಾಟೀಲ್ ಎಪ್ರಿಲ್ 26ರಂದು ತೆಂಡುಲ್ಕರ್ ಜೊತೆಗೆ ಬಾಲಿವುಡ್‌ನ ಹಿರಿಯ ನಟಿ ರೇಖಾ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಅನು ಆಗಾ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮಕರಣ ಮಾಡಿದ್ದರು.
ಪ್ರಮಾಣವಚನ ಸ್ವೀಕಾರದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ತೆಂಡುಲ್ಕರ್, ‘ಕ್ರಿಕೆಟ್‌ಗೆ ನನ್ನ ಮೊದಲ ಆದ್ಯತೆ’ ಎಂದು ಸಾರಿದರು. ರಾಜ್ಯಸಭಾ ಸದಸ್ಯನಾಗಿ ನಾಮಕರಣಗೊಂಡಿರುವುದು ತನಗೆ ಸಂದ ಮಹಾನ್ ಗೌರವವೆಂದು ಸಚಿನ್ ಭಾವುಕರಾಗಿ ಹೇಳಿದರು. ರಾಜ್ಯಸಭೆಗೆ ನಾಮಕರಣಗೊಂಡಿರುವುದರಿಂದ ತನಗೆ ಕ್ರಿಕೆಟ್‌ಗೆ ಮಾತ್ರವಲ್ಲ ಇತರ ಎಲ್ಲ ಕ್ರೀಡೆಗಳ ಹಾಗೂ ಕ್ರೀಡಾಪಟುಗಳ ಉನ್ನತಿಗಾಗಿ ದುಡಿಯಲು ಸಾಧ್ಯವಾಗಲಿದೆಯೆಂದು ಅವರು ಆಶಾವಾದ ವ್ಯಕ್ತಪಡಿಸಿದರು. ಬಿಡುವಿರದ ಕ್ರಿಕೆಟ್ ವೃತ್ತಿಯಿಂದಾಗಿ ತನಗೆ ಸಂಸದೀಯ ಕಲಾಪಗಳಲ್ಲಿ ಹೆಚ್ಚಿನ ಸಮಯವನ್ನು ಕೇಂದ್ರೀಕರಿಸಲು ಸಾಧ್ಯವಾಗದೆಂಬ ಬಗ್ಗೆ ವ್ಯಕ್ತವಾದ ಆತಂಕಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್, ತಾನು ರಾಜ್ಯಸಭೆಯ ನಾಮಕರಣ ಸದಸ್ಯ ನಾಗಿದ್ದೇನೆಯೇ ಹೊರತು ಸ್ವಇಚ್ಛೆಯಿಂದ ಸದಸ್ಯತ್ವ ಕೋರಿದವನಲ್ಲವೆಂದು ಸ್ಪಷ್ಟಪಡಿಸಿದರು.
‘‘ನಾನೋರ್ವ ನಾಮಕರಣಗೊಂಡ ಸದಸ್ಯ. ರಾಜ್ಯಸಭಾ ಸದಸ್ಯನಾಗಬೇಕೆಂದು ನಾನು ಯಾರ ಬಳಿಯೂ ಯಾಚಿಸಿಲ್ಲ. ಈ ಸ್ಥಾನವನ್ನು ಸ್ವೀಕರಿಸುವುದು ಒಂದು ಗೌರವದ ವಿಷಯ. ಆದರೆ ನನ್ನ ಕ್ರಿಕೆಟ್ ವೃತ್ತಿಯ ಕಾರಣದಿಂದಾಗಿಯೇ ನಾನು ಇಲ್ಲಿದ್ದೇನೆ’’ ಎಂದು ತೆಂಡುಲ್ಕರ್ ತಿಳಿಸಿದರು.ಇದಕ್ಕೂ ಪ್ರಮಾಣವಚನ ಸ್ವೀಕಾರಕ್ಕಾಗಿ ತೆಂಡುಲ್ಕರ್ ಅವರನ್ನು ಸಚಿವ ರಾಜೀವ್ ಶುಕ್ಲಾ ಅವರು ಹಾಮಿದ್ ಅನ್ಸಾರಿಯವರ ಕೊಠಡಿಗೆ ಕರೆದೊಯ್ಯುತ್ತಿದ್ದಾಗ ಸಂಸತ್‌ನಲ್ಲಿ ಹಬ್ಬದ ವಾತಾವರಣ ಮೂಡಿತ್ತು.ಸಂಸತ್‌ಭವನದ ಸಿಬ್ಬಂದಿ ತಮ್ಮ ಮೊಬೈಲ್‌ಪೋನ್‌ಗಳ ಮೂಲಕ ಈ ಮಹಾನ್ ಕ್ರಿಕೆಟಿಗನ ಫೋಟೋ ತೆಗೆಯುತ್ತಿರುವುದು ಕಂಡುಬಂದಿತು.
0 comments:
Post a Comment