ಮಧ್ಯವಯಸ್ಕ ವಿದ್ಯಾರ್ಥಿಯ ಜೀವನಪಾಠ
ಕ್ರೇಜಿಲೋಕ ಹೆಸರು ಕೇಳಿದಾಕ್ಷಣ ರವಿಚಂದ್ರನ್ ಅಭಿಮಾನಿಗಳಿಗೆ ಮತ್ತೊಂದು ಪ್ರೇಮಲೋಕ ನೋಡಬಹುದು ಎಂಬ ನಿರೀಕ್ಷೆ ಸಹಜ. ಆದರೆ ನಿರೀಕ್ಷೆ ನಿರಾಸೆಯ ಮಡುವು ಗಟ್ಟಿಯಾಗುವಂತೆ ಮಾಡಿದೆ ಕ್ರೇಜಿಲೋಕ. ಕವಿತಾ ಲಂಕೇಶ್ ತಮ್ಮ ನಿರ್ದೇಶನದ ಪ್ರೀತಿ, ಪ್ರೇಮ, ಪ್ರಣಯ ಕಥೆಯಿಂದ ಹೊರಬಂದಂತೆ ಕಾಣುವುದಿಲ್ಲ. ಕ್ರೇಜಿಲೋಕದಲ್ಲೂ ಮಧ್ಯವಯಸ್ಕನೊಬ್ಬ ಕಾಲೇಜು ಜೀವನ ಆನುಭವಿಸಲೆಂದು ಕಾಲೇಜು ಸೇರಿ ಆಲ್ಲಿರುವ ಮಗ ಹಾಗೂ ಮಗನ ವಯಸ್ಸಿನ ಗೆಳೆಯರಿಗೆ ಜೀವನಪಾಠ ಹೇಳಿಕೊಡುವ ಮೇಷ್ಟ್ರ ಕೆಲಸ ಮಾಡುತ್ತಾನೆ. ಇದು ಒಮ್ಮೊಮ್ಮೇ ಫನ್ನಿಯಾಗಿ, ಮತ್ತೊಮ್ಮೆ ಫಿಲಾಸಫಿಯಾಗಿ ಕಾಣುತ್ತದೆ.
ರವಿಚಂದ್ರನ್ ತಮ್ಮ ವಯಸ್ಸಿಗೆ ಅನುಗುಣವಾದ ಪಾತ್ರ ಮಾಡಿದ್ದಾರೆ ಎಂದು ಅನಿಸುತ್ತಿದ್ದಂತೆ ರವಿ ಮತ್ತೇ ವಿದ್ಯಾರ್ಥಿ ಅಗುತ್ತಾರೆ. ಪ್ರೇಮಲೋಕದ ಕನಸು ಕಾಣುತ್ತಾರೆ. ಚಿತ್ರದ ಓಟ ಹೆಚ್ಚಿಸಲಿಕ್ಕಾಗಿ ಮೋಹಕ ತಾರೆ ರಮ್ಯಾ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಎಂಬ ಹಾಡಿನಲ್ಲಿ ಕುಣಿದು ಮಾಯವಾಗುತ್ತಾರೆ. ಅವಿನಾಶ್ ವಿಚಿತ್ರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಭಾರತಿ ಇಷ್ಟವಾಗುತ್ತಾರೆ. ಡೈಸಿ ಬೋಪಣ್ಣ ಬಹಳ ಗ್ಯಾಪ್‌ನ ನಂತರ ಆಭಿನಯಿಸಿದರೂ ಮೈಮಾಟದಿಂದ ಇಷ್ಟವಾಗುತ್ತಾರೆ. ಮಣಿಕಾಂತ್ ಕದ್ರಿಯವರ ಸಂಗೀತದಲ್ಲಿ ಮೂಡಿ ಬಂದಿರುವ ಎರಡು ಹಾಡುಗಳು ಇಷ್ಟವಾಗುತ್ತವೆ.
ಚಿತ್ರಕ್ಕೆ ನೇರವಾದ ಕತೆಯಿಲ್ಲ. ಕವಿತಾ ಏನೋ ಹೇಳಲು ಹೋಗಿ ಇನ್ನೇನೋ ಹೇಳಿದ್ದಾರೆ ಎಂಬ ಭಾವನೆ ಚಿತ್ರ ಮುಗಿದ ಮೇಲೆ ಪ್ರೇಕ್ಷಕರಲ್ಲಿ ಮೂಡಿದರೆ ಕವಿತಾ ಬೇಸರಿಸಿಕೊಳ್ಳಬಾರದು. ಕತೆಯಲ್ಲಿ ಎಲ್ಲೂ ಲಾಜಿಕ್ ಇಲ್ಲ, ಯಾವುದೂ ಮ್ಯಾಜಿಕ್ ಇಲ್ಲ. ರವಿಚಂದ್ರನ್ ಎಂಬ ಕನಸುಗಾರನ ಮೂಲಕ ಕಾಲೇಜಿನ ಕ್ಯಾಂಪಸ್ ಪರಿಧಿಯಲ್ಲೇ ಇಂದಿನ ಯುವಜನರಿಗೆ ಜೀವನ ಪಾಠ ಹೇಳಲು ಹೊರಟಿರುವ ಕವಿತಾ ಎಡವಿದ್ದಾರೆ.
ನೀನಾಸಂ ಅಶ್ವತ್ಥ ರವಿಯ ಕಾರ್ಯದರ್ಶಿಯಾಗಿ ಕಚಗುಳಿ ಇಡುತ್ತಾರೆ. ಅಭಂಯ್ ಹಾಗೂ ಅರ್ಚನಾ ಜೋಡಿ ಕ್ಯೂಟ್. ಮಾಸ್ ಪ್ರಿಯರಿಗೆ ಒಂದಾದರೂ ಫೈಟ್ ಇದ್ದಿದ್ದರೆ ಚಿತ್ರಕ್ಕೆ ಒಂದಿಷ್ಟು ವೇಗ ಸಿಗಬಹುದಿತ್ತು. ಹಾಡಿನಲ್ಲೂ ಹೇಳಿಕೊಳ್ಳುವಂಥ ರಿದಂ ಇಲ್ಲ. ಕ್ರೇಜಿಲೋಕ ರವಿಚಂದ್ರನ್ ಆಭಿಮಾನಿಗಳಿಗೆ ನಿರಾಸೆ ಮೂಡಿಸುವ ಚಿತ್ರ. ಯಾಕೋ ಕತೆಯ ಆಯ್ಕೆಯಲ್ಲಿ ಕವಿತಾ ಎಚ್ಚರಿಕೆ ವಹಿಸಿಲ್ಲ. ಒಮ್ಮೆ ಕೊಟ್ಟ ಊಟ ಪದೇ ಪದೇ ಹಿಡಿಸುವುದಿಲ್ಲ. ಮತ್ತೊಂದಿಷ್ಟು ಮಸಾಲೆ ಹಾಕಿ ಬೇರೆ ರೀತಿಯ ಅಡುಗೆ ಕೊಟ್ಟರೆ ಬೇರೆ ರುಚಿ ಕೊಂಚಮಟ್ಟಿಗಾದರು ಹಿಡಿಸಬಹುದು. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಎಲ್ಲ ವಿಭಾಗಗಳ ಹೊಣೆ ಹೊತ್ತಿದ್ದರಿಂದ ಕವಿತಾ ಸುಸ್ತಾದವರಂತೆ ಕಾಣುತ್ತಾರೆ. ಕ್ರೇಜಿಲೋಕ ನಿಜಕ್ಕೂ ಕ್ರೇಜ್ ಹುಟ್ಟಿಸುವ ಕತೆ ಅಗಿಲ್ಲ. ಒಂಚೂರು ನಗುವ ಉದ್ದೇಶದಿಂದ ಮಧ್ಯವಯಸ್ಕರು ಥೇಟರ್ ಒಳಗೆ ಹೋಗಬಹುದಷ್ಟೇ.
-ಚಿತ್ರಪ್ರಿಯ ಸಂಭ್ರಮ್.
0 comments:
Post a Comment