PLEASE LOGIN TO KANNADANET.COM FOR REGULAR NEWS-UPDATES


ಇಂದಿನ ಯುವ ಪೀಳಿಗೆಗೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ನಿರುದ್ಯೋಗ ಪಿಡುಗನ್ನು ನಿವಾರಿಸಲು ಕೌಶಲ್ಯಾಭಿವೃದ್ಧಿ ತರಬೇತಿ ಅತ್ಯಂತ ಸಹಾಯಕಾರಿಯಾಗಲಿದ್ದು, ಇದು ಬಹುತೇಕ ಯುವಜನತೆ ಇದಕ್ಕೆ ತಮ್ಮ ಒಲವು ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ರಾಜ್ಯ ಯುವನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಯುವಜನರ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಯುವ ಜನರಿಗೆ ವಿಶೇಷ ಆದ್ಯತೆ ನೀಡಿ, ೧೬ ರಿಂದ ೩೦ ವರ್ಷದೊಳಗಿನ ಯುವಕರನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಯುವನೀತಿಯನ್ನು ರೂಪಿಸಲು ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ೨೫ ಕೋಟಿ ರೂ.ಗಳ ಅನುದಾನ ಮೀಸಲಿರಿಸುವುದಾಗಿ ಪ್ರಕಟಿಸಿದ್ದು, ಈಗಾಗಲೆ ೧೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.  ನಮ್ಮ ದೇಶದ ಜನಸಂಖ್ಯೆಯ ಪೈಕಿ ಶೇ. ೩೫ ರಷ್ಟು ಯುವಜನರಿದ್ದು, ದೇಶದ ಭವಿಷ್ಯ ರೂಪಿಸುವಲ್ಲಿ ಯುವಶಕ್ತಿಯ ಪಾತ್ರ ಹೆಚ್ಚಿದೆ.  ಇತಿಹಾಸವನ್ನು ಗಮನಿಸಿದಾಗ ದೇಶದಲ್ಲಿ ನಡೆದುಹೋದ ಚಳುವಳಿಗಳ ಯಶಸ್ಸಿನ ಹಿಂದೆ ಯುವಶಕ್ತಿಯ ಪಾತ್ರ ಗಣನೀಯವಾಗಿರುವುದು ಸಾಬೀತಾಗಿದೆ.  ದೇಶದ ಯುವಜನತೆಯಲ್ಲಿ ಶೇ. ೬೦ ರಷ್ಟು ಯುವಕರು ಗ್ರಾಮೀಣ ಪ್ರದೇಶದಲ್ಲಿದ್ದಾರೆ.  ಕೃಷಿಯಲ್ಲಿ ನಿರಾಸಕ್ತಿ, ನಿರುದ್ಯೋಗ ಸಮಸ್ಯೆಯಿಂದಾಗಿ ಬೀಡಿ, ಸಿಗರೇಟ್, ಗುಟ್ಕಾ, ಮದ್ಯಪಾನ ಮುಂತಾದ ದುಶ್ಚಟಗಳಿಗೆ ಯುವಜನತೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ.  ಎಲ್ಲಾ ಕ್ಷೇತ್ರಗಳಿಗೂ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ರೀತಿಯಲ್ಲಿಯೇ ಈ ಬಾರಿ ಸರ್ಕಾರ ಯುವ ಪೀಳಿಗೆಯನ್ನು ಕ್ರಿಯಾಶೀಲರನ್ನಾಗಿಸಲು ಅನುದಾನ ಮೀಸಲಿಟ್ಟಿದೆ.  ದೇಶದ ಶಕ್ತಿಶಾಲಿ ಮಾನವ ಸಂಪನ್ಮೂಲವಾಗಿರುವ ಯುವಶಕ್ತಿಯನ್ನು ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ, ಯುವಶಕ್ತಿಯ ಬುದ್ದಿವಂತಿಕೆಯನ್ನು ಸಮರ್ಪಕ ರೀತಿಯಲ್ಲಿ ಬಳಸುವಂತೆ ಮಾಡಬೇಕು, ದೇಶಕ್ಕೆ ಇವರ ಸೇವೆಯನ್ನು ಯಾವ ರೀತಿ ಪಡೆಯಬೇಕು ಎನ್ನುವ ಸದುದ್ದೇಶ ಇದಾಗಿದೆ.  ಯುವಕರು ಉದ್ಯೋಗಿಗಳಾದಲ್ಲಿ, ಆ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ, ಅದೇ ರೀತಿ ಇಡೀ ದೇಶದ ಅಭಿವೃದ್ಧಿಗೂ ಇದೇ ದಾರಿದೀಪವಾಗಿದೆ.  ಕಳೆದ ತಿಂಗಳು ಜಿಲ್ಲೆಯಲ್ಲಿ ನಡೆದ ಸೇನಾ ಭರ್ತಿ ರ್‍ಯಾಲಿಯಲ್ಲಿ ಜಿಲ್ಲೆಯ ಬಹಳಷ್ಟು ಯುವಕರು ಪ್ರಾಥಮಿಕ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ವಿಫಲರಾಗಿದ್ದು ಕಂಡುಬಂದಿದೆ.  ಇದಕ್ಕೆ ಕಾರಣ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು, ಯುವಕರು ತಮ್ಮಲ್ಲಿನ ದುಶ್ಚಟಗಳನ್ನು ತೊರೆದು, ತಮ್ಮ ತಮ್ಮ ಕುಟುಂಬಕ್ಕೆ ನೆರವಾಗಲು ಉದ್ಯೋಗಿಗಳಾಗಬೇಕು.  ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ.  ಗ್ರಾಮೀಣ ಪ್ರದೇಶದಲ್ಲಿನ ಯುವಜನತೆ ವೃತ್ತಿ ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ಪಡೆಯಲು ಮುಂದಾಗಬೇಕು,  ಈ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು ಎಂದರು.
ಹೋಬಳಿ ಮಟ್ಟದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಈಗಾಗಲೆ ಕೇಂದ್ರ ಸರ್ಕಾರದ ಯೋಜನೆಯಡಿ, ಪ್ರತಿಯೊಬ್ಬ ನಿರುದ್ಯೋಗಿ ಯುವಕ, ಯುವತಿಯರಿಗೆ ಕಂಪ್ಯೂಟರ್ ತರಬೇತಿ, ವಿವಿಧ ವಸ್ತುಗಳ ತಯಾರಿಕೆ ಸೇರಿದಂತೆ ಹಲವು ಬಗೆಯ ವೃತ್ತಿ ತರಬೇತಿ ನೀಡಿ, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲು ಪ್ರತಿ ಹೋಬಳಿ ಮಟ್ಟದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.  ಇನ್ನೆರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.  ಇದರ ಸದುಪಯೋಗವನ್ನು ಜಿಲ್ಲೆಯ ಯುವಜನತೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಸಮಾರಂಭದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಮಾತನಾಡಿ, ಸರ್ಕಾರ ಹಾಗೂ ಸಮಾಜ ನಮಗೇನು ಮಾಡಿದೆ ಎನ್ನುವ ಮುನ್ನ ಈ ಸಮಾಜಕ್ಕೆ ಹಾಗೂ ದೇಶಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎನ್ನುವುದನ್ನು ಯುವಜನತೆ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ.  ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯತಿ ಗ್ರಾಮೀಣ ಕ್ರೀಡಾಕೂಟಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಜಿಲ್ಲಾ ಪಂಚಾಯತಿ ಸದಸ್ಯ ಟಿ. ಜನಾರ್ಧನ ಹುಲಗಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
  ರಾಜ್ಯ ಯುವನೀತಿ ಕುರಿತಂತೆ ನಡೆದ ಯುವಜನಾಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಯುವಕ, ಯುವತಿಯರು, ವಿದ್ಯಾರ್ಥಿ ಪರಿಷತ್‌ಗಳ ಪದಾಧಿಕಾರಿಗಳು ಮಾತನಾಡಿ, ಯುವಜನರಿಗೆ ಉದ್ಯೋಗ ಕಲ್ಪಿಸುವ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಗ್ರಾಮ ಪಂಚಾಯತಿಗಳಲ್ಲಿನ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕು, ಯವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಬಲಪಡಿಸಬೇಕು, ಕ್ರೀಡಾಕೂಟಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು, ಯುವಕ, ಯುವತಿ ಮಂಡಳಿಗಳ ನೋಂದಣಿಯನ್ನು ಸರಳೀಕರಣಗೊಳಿಸಬೇಕು, ಜಿಲ್ಲೆಯ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ತರಬೇತಿ ನೀಡುವ ವ್ಯವಸ್ಥೆಯಾಗಬೇಕು, ಕ್ರೀಡಾ ವಸತಿ ಶಾಲೆಯನ್ನು ಪಿಯುಸಿ ವರೆಗೂ ವಿಸ್ತರಿಸಬೇಕು ಮುಂತಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಮಟ್ಟದಲ್ಲಿ ಈಡೇರಿಸಬಹುದಾದ ವಿಷಯಗಳನ್ನು ಇಲ್ಲಯೇ ಇತ್ಯರ್ಥಪಡಿಸಲಾಗುವುದು, ಉಳಿದಂತೆ ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದಂತಹ ಯೋಜನೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
  ಪ್ರಾರಂಭದಲ್ಲಿ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಸ್ವಾಗತಿಸಿದರು, ಕುಷ್ಟಗಿಯ ಸಹಾಯಕ ಕ್ರೀಡಾಧಿಕಾರಿ ಧರ್ಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಲಕ್ಷ್ಮಿ ಪ್ರಾರ್ಥಿಸಿದರು.

Advertisement

0 comments:

Post a Comment

 
Top