ಕೊಪ್ಪಳ;ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಕನ್ನಡಪರ ಕೆಲಸಗಳು,ಸಂಘಟನಾ ಸಾಮರ್ಥ್ಯಗಳಿಗಿಂತಲೂ ಜಾತಿ ರಾಜಕಾರಣದ್ದೇ ಮೇಲುಗೈಯಾದುದರಿಂದ ನಾನು ಸೋಲಬೇಕಾಯಿತು ಎಂದು ಜಿಲ್ಲಾ ಕ.ಸಾ.ಪ.ಚುನಾವಣೆಯಲ್ಲಿ ಕೇವಲ ೬೧ ಮತಗಳ ಅಲ್ಪ ಅಂತರದಿಂದ ಪರಾಭವಗೊಂಡಿರುವ ರಾಜಶೇಖರ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಲಿನ ಆತ್ಮಾವಲೋಕನ ಮಾಡಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ನಮ್ಮ ಜೊತೆಗಿದ್ದವರೇ ಸಿಡಿದು ಹೋಗಿ ಚುನಾವಣೆಗೆ ನಿಂತಿದ್ದು ಸೋಲಿಗೆ ಒಂದು ಕಾರಣವಾದರೆ, ಜಾತಿ, ಉಪಜಾತಿಗಳ ನಡುವಿನ ಪ್ರತಿಷ್ಠೆ ಪಣಕ್ಕಿಟ್ಟು ಸಂಸದರು ಚುನಾವಣೆಯಲ್ಲಿ ಕೆಲಸ ಮಾಡಿದರು, ದೂರವಾಣಿ ಮೂಲಕ ಮತದಾರರಿಗೆ ಒತ್ತಡ ಹೇರಿದರು. ಜೊತೆಗೆ ಸ್ವಜಾತಿ ಶಾಸಕರೊಬ್ಬರು ಅನಗತ್ಯವಾಗಿ ಸಹಸ್ಪರ್ಧಿಯೊಬ್ಬರನ್ನು ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು.ನೌಕರರ ಮೇಲೆ ತೀವ್ರ ಒತ್ತಡ ಹೇರಿದ್ದರಿಂದ ಅನೇಕರಿಗೆ ಸ್ವತಂತ್ರವಾಗಿ ಮತ ಚಲಾಯಿಸಲು ಅಡ್ಡಿಯಾಯಿತು. ಇದ್ಯಾವುದನ್ನೂ ಲೆಕ್ಕಿಸದೇ ಗಂಗಾವತಿ ತಾಲ್ಲೂಕಿನ ಮತದಾರರು ನನಗೆ ಇತರ ಅಭ್ಯರ್ಥಿಗಳಿಗಿಂತಲೂ ಅತಿ ಹೆಚ್ಚು ಮತಗಳನ್ನು ನೀಡಿದರು.ಹಾಗೆಯೇ ಕೊಪ್ಪಳ ತಾಲ್ಲೂಕಿನಲ್ಲಿಯೂ ಅತಿ ಹೆಚ್ಚು ಮತಗಳ ಅಂತರ ದೊರೆಯಿತು.ಯಲಬುರ್ಗಾ ತಾಲ್ಲೂಕಿನಲ್ಲಿ ಮತಗಳು ತೃಪ್ತಿಕರವಾಗಿದ್ದರೂ ಕೂಡ ಕುಷ್ಟಗಿ ತಾಲ್ಲೂಕಿನಲ್ಲಿ ನಿರೀಕ್ಷಿತ ಮತಗಳ ಬರಲಿಲ್ಲ.ಅದಕ್ಕೆ ಸಕ್ರಿಯ ರಾಜಕಾರಣಿಗಳ ನೇರ ಭಾಗವಹಿಸುವಿಕೆ ಹಾಗೂ ಸಾರ್ವತ್ರಿಕ ಚುನಾವಣೆಯ ಕರಿನೆರಳು ಬಿದ್ದಿದ್ದು ಕಾರಣವೆನ್ನಬಹುದು. ನಮ್ಮ ಅತಿಯಾದ ಆತ್ಮ ವಿಶ್ವಾಸವೂ ಸೋಲಿಗೆ ಒಂದಷ್ಟು ಕಾರಣವಾಯಿತು.ಇಷ್ಟೆಲ್ಲ ಆದರೂ ಕೂಡ ಜಿಲ್ಲೆಯ ಕ.ಸಾ.ಪ.ಆಜೀವ ಸದಸ್ಯರು ನನಗೆ ೮೯೧ ರಷ್ಟು ಬೃಹತ್ ಪ್ರಮಾಣದ ಮತಗಳನ್ನು ನೀಡಿರುವದು ಸಮಾಧಾನ ತಂದಿದೆ.
ಕನ್ನಡದ ಕೆಲಸಗಳ ಮುಂದುವರಿಕೆ; ಕ.ಸಾ.ಪ.ಚುನಾವಣೆಯಲ್ಲಿನ ಸೋಲಿನಿಂದ ಧೃತಿಗೆಡದೇ ಕನ್ನಡದ ಕೆಲಸಗಳನ್ನು ಮುಂದುವರೆಸುತ್ತೇನೆ,ಈಗಾಗಲೇ ಸಕ್ರಿವಾಗಿರುವ ರಂಗಸೇತು ಸಂಘಟನೆಯ ಮೂಲಕ ಸಾಂಸ್ಕೃತಿಕ ಚಟುವಟಿಕೆ , ಹೋರಾಟಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವದು.ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಈ ಕಾರ್ಯಗಳನ್ನು ವಿಸ್ತರಿಸಲು ರೂಪುರೇಷೆ ಹಾಕಿಕೊಳ್ಳಲಾಗುತ್ತಿದೆ.ಜಿಲ್ಲಾ ಕ.ಸಾ.ಪ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀರಣ್ಣ ನಿಂಗೋಜಿಯವರನ್ನು ಅಭಿನಂದಿಸುತ್ತೇನೆ, ಅವರ ಎಲ್ಲ ರಚನಾತ್ಮಕ ಕಾರ್ಯಗಳಿಗೂ ಒಬ್ಬ ಆಜೀವ ಸದಸ್ಯನಾಗಿ ಬೆಂಬಲ ನೀಡುತ್ತೇನೆ.
ಕೃತಜ್ಞತೆಗಳು; ಕ.ಸಾ.ಪ.ಚುನಾವಣೆಯ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಆಜೀವ ಸದಸ್ಯರಿಗೂ ,ಪ್ರಚಾರದ ವೇಳೆ ಪ್ರೀತಿಯಿಂದ ಬರಮಾಡಿಕೊಂಡು ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳನ್ನು ರಾಜಶೇಖರ ಅಂಗಡಿ ತಿಳಿಸಿದ್ದಾರೆ.
0 comments:
Post a Comment