PLEASE LOGIN TO KANNADANET.COM FOR REGULAR NEWS-UPDATES


ಎಲ್ಲಕ್ಕೂ ಅನಂತಕುಮಾರ್ ಕಾರಣ: ಸಿಡಿದ ಬಿ.ಎಸ್. ಯಡಿಯೂರಪ್ಪ
 ಜೇಟ್ಲಿ ನಡೆಸಿದ ಸಂಧಾನ ಭಾಗಶಃ ಯಶಸ್ವಿ - ಬೂದಿ ಮುಚ್ಚಿದ ಕೆಂಡದಂತಿರುವ ಬಿಜೆಪಿ

ಬೆಂಗಳೂರು, ಮೇ : ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಬಿಜೆಪಿಯೊಳಗೆ ನಡೆಯುತ್ತಿರುವ ಶೀತಲ ಸಮರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಸರಕಾರವನ್ನು ಉರುಳಿಸಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾತ್ಕಾಲಿಕವಾಗಿ ತನ್ನ ನಿರ್ಧಾರವನ್ನು ಮುಂದೂಡಿರುವುದಾಗಿ ಹೇಳಿದ್ದು, ಇದರಿಂದ ಬಿಜಿಪಿಯ ಆಂತರಿಕ ಬಿಕ್ಕಟ್ಟು ಬೂದಿ ಮುಚ್ಚಿದ ಕೆಂಡದಂತಾಗಿದೆ.  ಇಂದು ಮಧ್ಯಾಹ್ನ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಕೆಲವು ಮಠಾಧೀಶರು, ಹಿತೈಷಿಗಳ ಮಾತಿಗೆ ಮನ್ನಣೆ ನೀಡಿ ತಾತ್ಕಾಲಿಕವಾಗಿ ನಿರ್ಧಾರವನ್ನು ಮುಂದೂಡಿರುವುದಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ತನ್ನ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಕರೆದ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಪಕ್ಷದ ಶಾಸಕಾಂಗ ಸಭೆ ಕರೆದು, ಸದಾನಂದ ಗೌಡರನ್ನು ಕೆಳಗಿಳಿಸ ಬೇಕು ಎಂಬ ಒಂದಂಶದ ಬೇಡಿಕೆ ಮುಂದಿಟ್ಟು ಕೊಂಡು ಸಮರಕ್ಕಿಳಿದಿರುವ ಯಡಿಯೂ ರಪ್ಪ ಬಣ, ಮತ್ತೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ತನ್ನ ಬಣದೊಂದಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದ ಯಡಿಯೂರಪ್ಪನವ ರೊಂದಿಗೆ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಲವು ಷರತ್ತುಗಳನ್ನು ಮುಂದಿಟ್ಟಿ ರುವ ಅವರು, ಕೆಲವು ದಿನ ಕಾದು ನೋಡಿ ಮುಂದೆ ತಾನು ರಾಜೀನಾಮೆ ನೀಡಿ, ಪಕ್ಷ ತೊರೆದು ಬೇರೆ ಮಾರ್ಗ ಹಿಡಿಯುತ್ತೇನೆ ಎಂಬ ಬೆದರಿಕೆ ಬೇಡವೆಂದು ಎಚ್ಚರಿಕೆಯನ್ನು ನೀಡಿದ್ದಾರೆನ್ನಲಾಗಿದೆ.
ಅನಂತ್ ವಿರುದ್ಧ ಆಕ್ರೋಶ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಎಲ್ಲಕ್ಕೂ ಅನಂತ ಕುಮಾರ್‌ರೇ ಕಾರಣ. ಸಂದರ್ಭವನ್ನು ಬಳಸಿಕೊಂಡು ಮುಖ್ಯಮಂತ್ರಿಯಾಗಲು ಅನಂತಕುಮಾರ್ ಸಂಚು ಹೂಡುತ್ತಾ ಬಂದಿದ್ದಾರೆ. ಈ ಕಾರಣಕ್ಕಾಗಿ ಅವರು ತನ್ನನ್ನು ರಾಜಕೀಯವಾಗಿ ಮುಗಿಸಲು ಹಲವುಬಾರಿ ಯತ್ನಿಸಿದ್ದಾರೆ. ಸಿಎಂ ಆಗಿದ್ದ ವೇಳೆ ಮೂರು ಬಾರಿ ಹೈಕಮಾಂಡ್ ಮುಂದೆ ತನ್ನನು ಕೆಳಗಿಳಿಸಲು ಯತ್ನ ಮಾಡಿದ್ದಾರೆ. ಜೊತೆಗೆ ಅವರು ಸಿಎಂ ಹಾಗೂ ಈಶ್ವರಪ್ಪನವರೊಂದಿಗೆ ಸೇರಿ ಕೊಂಡು ರಾಜಕೀಯವಾಗಿ ತನ್ನನ್ನು ಕೊನೆ ಗಾಣಿಸಲು ಈಗಲೂ ಯತ್ನ ಮುಂದುವರಿ ಸಿದ್ದಾರೆ ಎಂದು ಆಕ್ರೋಶ ಭರಿತ ಮಾತುಗಳಿಂದ ಆರೋಪವನ್ನು ಮಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಂಡಿದ್ದ ಅನಂತ ಕುಮಾರ್, ತನ್ನನ್ನು ರಾಜಕೀಯವಾಗಿ ಮುಗಿಸಲು ಹಲವು ಬಾರಿ ಯತ್ನಿಸಿದ್ದಾರೆ.
ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದುದು ರಾಜ್ಯದ ಚುಕ್ಕಾಣಿ ಹಿಡಿಯುವಂತೆ ಮಾಡಿದುದು ತಾನೇ. ಆದರೆ ಪಕ್ಷಕ್ಕೆ ಯಡಿಯೂರಪ್ಪನವರ ಅಗತ್ಯವಿಯೇ, ಇಲ್ಲವೋ ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿ ಎಂದ ಅವರು, ತಾನು ಸನ್ಯಾಸಿ ಅಲ್ಲ, ಜನರ ಆದೇಶ ಪಡೆಯುವುದಕ್ಕಾಗಿ ರಾಜ್ಯ ಪ್ರವಾಸ ಮಾಡಿ, ತನ್ನ ವಿರುದ್ಧ ಪಕ್ಷದೊಳಗೆ ನಡೆದಿರುವ ಎಲ್ಲ ಹುನ್ನಾರ, ಷಡ್ಯಂತ್ರವನ್ನು ಎಳೆಎಳೆಯಾಗಿ ಬಿಡಿಸಿಡುತ್ತೇನೆ. ರಾಜ್ಯದ ಜನ ಯಾವ ಆದೇಶ ನೀಡುತ್ತಾರೋ ಅದಕ್ಕೆ ತಾನು ತಲೆಬಾಗುತ್ತೇನೆ ಎಂದರು.
ಹಲವು ಬಾರಿ ತನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ಮಾಡಿರುವ ಅನಂತ್, 16 ವರ್ಷಗಳಿಂದ ಪಿತೂರಿ ಮಾಡುತ್ತಲೇ ಇದ್ದಾರೆ. ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಮಧ್ಯೆ ತಾನು ಮುಖ್ಯಮಂತ್ರಿ ಆಗುವ ತಂತ್ರಗಾರಿಕೆ ನಡೆಸಿ ವಿಫಲರಾಗಿರುವ ಅವರು, ಈಗ ಸೇಡನ್ನು ತೀರಿಸಿಕೊಳ್ಳಲು ನಿರಂತರ ಪಿತೂರಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
  ತಾನು ಮುಖ್ಯಮಂತ್ರಿ ಆದಾಗಿನಿಂದ ಅನಂತ ಕುಮಾರ್ ತನ್ನನ್ನು ಕೆಳಗಿಳಿಸಿ, ಮುಖ್ಯಮಂತ್ರಿ ಆಗಬೇಕೆಂಬ ಹಗಲುಗನಸು ಕಂಡವರು. ತನ್ನ ವಿರುದ್ಧ ಪಕ್ಷದ ವರಿಷ್ಠರಾದ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವರಿಗೆ ದೂರು ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನ ನಡೆಸಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ದೂರವಾಣಿಯ ಮೂಲಕ ಯಡಿಯೂರಪ್ಪನವರನ್ನು ಸಂಪರ್ಕಿಸಿ ಸಮಾಧಾನ ಪಡಿಸುವ ಕಾರ್ಯ ನಡೆಸಿದ್ದು, ಇದರಿಂದ ಯಡಿಯೂರಪ್ಪ ಸದ್ಯಕ್ಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಒಂದು ವೇಳೆ ಎರಡು-ಮೂರು ದಿನಗಳೊಳಗೆ ನಾಯಕತ್ವ ಬದಲಾವಣೆ ಹಾಗೂ ಇನ್ನಿತರ ತನ್ನ ಬೇಡಿಕೆಗಳನ್ನು ವರಿಷ್ಠರು ಈಡೇರಿಸದಿದ್ದರೆ ಕೊನೆಗೆ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ತನಗೆ ಬೆಂಬಲವಾಗಿ 70ಕ್ಕೂ ಅಧಿಕ ಶಾಸಕರು ನಿಂತಿದ್ದಾರೆ. 15ಕ್ಕೂ ಹೆಚ್ಚು ಮಂದಿ ಸಂಸದರು ಇದ್ದಾರೆ. ಒಂಬತ್ತು ಮಂದಿ ಸಚಿವರು ಹಾಗೂ 40ಕ್ಕೂ ಹೆಚ್ಚು ಮಂದಿ ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ತಮಗೆ ನೀಡಿದ್ದಾರೆ. ಜೊತೆಗೆ ಕೆಲವು ಶಾಸಕರು ದೂರವಾಣಿಯ ಮೂಲಕ ತಾವು ಕೂಡಾ ನಿಮ್ಮಾಂದಿಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ರಾಜೀನಾಮೆ ಸೇರಿದಂತೆ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಭರವಸೆ ಕೂಡಾ ನೀಡಿದ್ದಾರೆ.
  ಈ ಹಿನ್ನೆಲೆಯಲ್ಲಿ ತಾನೊಬ್ಬನೇ ಮಧ್ಯಾಹ್ನ 12 ಗಂಟೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಕೂಡಾ ನಡೆಸಿದ್ದೆ. ಸ್ಪೀಕರ್‌ಗೂ ದೂರವಾಣಿ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದೆ. ಆದರೆ ರಾಜ್ಯದ ಕೆಲವು ಮಠಾಧೀಶರು, ಹಿತೈಷಿಗಳು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಪಕ್ಷ ಕಟ್ಟಿ ಹೊಸ ಆಯಾಮವನ್ನು ನೀಡಿದ್ದೀರಿ, ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿದ್ದು, ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿಗೆ ಗೌರವ ನೀಡಿ, ತಾತ್ಕಾಲಿಕವಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದರು.
ಡೀವಿ ವಿರುದ್ಧ ಗರಂ
ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, ತನ್ನ ಹಾಗೂ ತಮ್ಮ ಆಪ್ತರ ವಿರುದ್ಧ ರಹಸ್ಯವಾಗಿ ಪತ್ರ ಬರೆದು ಗೊಂದಲ ಸೃಷ್ಟಿಸಿದ್ದಾರೆ. ಈ ಹಿನ್ನೆಲೆೆಯಲ್ಲಿ ಚರ್ಚಿಸಲು ಪಕ್ಷದ ಶಾಸಕಾಂಗ ಸಭೆ ಕರೆಯಲು ಒತ್ತಾಯಿಸಿದರೂ ಅದಕ್ಕೆ ಸಿಎಂ ಒಪ್ಪಿಗೆ ನೀಡಲಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಒಮ್ಮೆಯೂ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ ಎಂದರು.
ಸದಾನಂದ ಗೌಡರಿಗೆ ರಾಜ್ಯದ ಅಭಿವೃದ್ಧಿ ಮುಖ್ಯವಲ್ಲ. ಸರಕಾರ ಸುಸೂತ್ರವಾಗಿ ಮುಂದುವರಿದುಕೊಂಡು ಹೋಗುವುದು ಮುಖ್ಯವಲ್ಲ. ಕೇವಲ ಸಿಎಂ ಆಗಿ ಮುಂದುವರಿಯಬೇಕು ಎಂಬ ಕುರ್ಚಿಯ ಆಸೆಯೇ ಅವರಿಗೆ ಮುಖ್ಯವಾಗಿದೆ ಎಂದವರು ಖಾರವಾಗಿ ನುಡಿದರು.
 ಈ ಹಿಂದೆ ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಉಪ ಚುನಾವಣೆಯಲ್ಲಿ ಸೋಲುಂಟಾದಾಗಲೇ ಸಿಎಂ ನೈತಿಕ ಹೊಣೆಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಕುರ್ಚಿಗೆ ಅಂಟಿಕೊಂಡಿರುವುದರಿಂದ ಆ ಕಾರ್ಯ ಮಾಡಿಲ್ಲ ಎಂದವರು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿರ ಬೇಕೆಂದಿದ್ದರೆ ಪಕ್ಷ ಕಟ್ಟಿ ಬೆಳೆಸಬೇಕಿತ್ತು. ಅವರ ನಾಯಕತ್ವದಲ್ಲಿ ಎಲ್ಲ ಚುನಾವಣೆಗಳನ್ನು ಎದುರಿಸಬೇಕಿತ್ತು. ಆದರೆ ಅದನ್ನು ಮಾಡದೆ ಕೇವಲ ಅಧಿಕಾರಕ್ಕೆ ಅಂಟಿಕೊಂಡಿರುವುದು ಎಷ್ಟು ಸರಿ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
 ತನ್ನೊಂದಿಗಿರುವ ಶಾಸಕರಿಗೆ ಸಿಗಬೇಕಿರುವ ಅನುದಾನವನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಅವರು ಒಂದು ಬಣದ ಸಿಎಂ ಅಲ್ಲ, ಎಲ್ಲರ ಸಿಎಂ ಎಂಬುದನ್ನು ಮರೆತಿದ್ದಾರೆ ಎಂದರು.
ಜೊತೆಗೆ ಸದಾನಂದ ಗೌಡ ಜೆಡಿಎಸ್‌ನವರೊಂದಿಗೆ ಸೇರಿಕೊಂಡಿದ್ದಾರೆ. ನಂಬಿಕೆ ದ್ರೋಹ ಮಾಡಿದ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಪುತ್ತೂರಿನಲ್ಲಿ ಕುಮಾರಸ್ವಾಮಿಯೊಂದಿಗೆ ವೇದಿಕೆ ಹಂಚಿಕೊಂಡು ತಮ್ಮನ್ನು ಒಟ್ಟಿಗೆ ಕಾಣಲು ಕೆಲವರಿಗೆ ಆಗುತ್ತಿಲ್ಲ ಎಂದು ಪರೋಕ್ಷವಾಗಿ ತನ್ನ ವಿರುದ್ಧ ಟೀಕೆ ಮಾಡಿದ್ದಾರೆ ಎಂದವರು ದೂರಿದರು.
ಈಶ್ವರಪ್ಪ ವಿರುದ್ಧ ಕಿಡಿ
ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇಡಿನ ರಾಜಕೀಯ ಆಡುತ್ತಿದ್ದಾರೆ. ನಿರಂತರವಾಗಿ ತನ್ನ ವಿರುದ್ಧ ಅನಂತ್ ಕುಮಾರ್ ಹಾಗೂ ಸದಾನಂದ ಗೌಡರ ಜೊತೆ ಸೇರಿ ಪಿತೂರಿ ಮಾಡುತ್ತಲೇ ಇದ್ದಾರೆ. ರಾಜಕೀಯವಾಗಿ ನನ್ನ ವಿರುದ್ಧ ಸಂಚು ಮಾಡುತ್ತಿರುವ ಈಶ್ವರಪ್ಪ, ಈ ಬಾರಿ ಸಿಎಂರೊಂದಿಗೆ ಸೇರಿ ರಹಸ್ಯ ಪತ್ರ ಬರೆದು ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ ಎಂದು ಯಡಿಯೂರಪ್ಪ ಕಿಡಿಗಾರಿದರು.
 ತನ್ನ ಬಲಿ 9 ಮಂದಿ ಸಚಿವರು ರಾಜೀನಾಮೆ ನೀಡಿದ್ದು, ಅವರೆಲ್ಲರೂ ಅದನ್ನು ಬಿಟ್ಟು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದ್ದೇನೆ. ತನ್ನ ಹಿಂದೆ ಯಾರೂ ಬರಬೇಡಿ ಎಂದು ಅವರಿಗೆ ಹೇಳಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಸಿ.ಎಂ.ಉದಾಸಿ, ಸೋಮಣ್ಣ ಸೇರಿದಂತೆ ಹಲವು ಶಾಸಕರು ಹಾಜರಿದ್ದರು
 ತನ್ನ ಬಲಿ 9 ಮಂದಿ ಸಚಿವರು ರಾಜೀನಾಮೆ ನೀಡಿದ್ದು, ಅವರೆಲ್ಲರೂ ಅದನ್ನು ಬಿಟ್ಟು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದ್ದೇನೆ. ತನ್ನ ಹಿಂದೆ ಯಾರೂ ಬರಬೇಡಿ ಎಂದು ಅವರಿಗೆ ಹೇಳಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಸಿ.ಎಂ.ಉದಾಸಿ, ಸೋಮಣ್ಣ ಸೇರಿದಂತೆ ಹಲವು ಶಾಸಕರು ಹಾಜರಿದ್ದರು

Advertisement

0 comments:

Post a Comment

 
Top