ಬೆಂಗಳೂರು, ರಾಜ್ಯ ಸರಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಒಲವು ತೋರಿರುವ ಬೆನ್ನಲ್ಲಿಯೇ ಬಿಜೆಪಿಯೊಳಗೆ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ. ಸಂಪುಟ ವಿಸ್ತರಣೆಯನ್ನು ಶೀಘ್ರವೇ ಮಾಡಿ ಹೊಸಬರಿಗೆ ಸ್ಥಾನ ನೀಡುವಂತೆ ಬಿಜೆಪಿಯ ಒಂದು ಗುಂಪು ಸಹಿ ಸಂಗ್ರಹಿ ಸುವ ಮೂಲಕ ಒತ್ತಡ ಹೇರುತ್ತಿರುವ ಮಧ್ಯೆ ಶುಕ್ರವಾರ ಸಂಜೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತನ್ನ ನಿವಾಸ ‘ಅನುಗ್ರಹ’ದಲ್ಲಿ ಹಿರಿಯ ನಾಯಕ ರೊಂದಿಗೆ ಸಮಾಲೋಚನೆ ನಡೆಸಿದರು. ಸಮಾಲೋಚನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಆರೆಸ್ಸೆಸ್ ಮುಖಂಡ ಸಂತೋಷ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಮಚಂದ್ರೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ಶೀಘ್ರವೇ ಸಂಪುಟ ವಿಸ್ತರಣೆ ಮಾಡಿ, ಈಗಾಗಲೇ ಇರುವ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವಂತೆ ಬಿಜೆಪಿಯ ಒಂದು ಗುಂಪು ಒತ್ತಡ ಹೇರುತ್ತಿ ರುವ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಮತ್ತೆ ಗೊಂದಲ ಮೂಡಿದೆ.
ಜೊತೆಗೆ ಸಂಪುಟ ವಿಸ್ತರಣೆ ನಡೆದರೆ ಮತ್ತೆ ಪಕ್ಷದೊಳಗೆ ಭಿನ್ನಮತ ತಲೆದೋರುವ ಸಾಧ್ಯತೆ ಇರುವುದರಿಂದ ಸದಾನಂದ ಗೌಡ ಆತಂಕಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಿರುಸಿನ ಚರ್ಚೆ ನಡೆದಿದೆ. ಯಾವುದೇ ರೀತಿಯ ಭಿನ್ನಮತ ವ್ಯಕ್ತವಾಗದ ರೀತಿಯಲ್ಲಿ ಸಂಪುಟ ವಿಸ್ತರಣೆ ಕಾರ್ಯ ನಡೆಸುವ ಕುರಿತು ಮಾತುಕತೆ ನಡೆದಿದೆ. ಅಲ್ಲದೆ ಸಚಿವ ಸ್ತಾನ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿರುವ ಸದಾನಂದ ಗೌಡ ಅದನ್ನು ನಾಳೆ ದಿಲ್ಲಿಯಲ್ಲಿರುವ ಪಕ್ಷದ ವರಿಷ್ಠರಿಗೆ ಸಲ್ಲಿಸುವ ಸಾಧ್ಯತೆ ಇದೆ.
ಸಭೆಯ ಬಳಿಕ ಮಾತನಾಡಿದ ಈಶ್ವರಪ್ಪ, ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿರುವುದರಿಂದ ಕೆಲವೇ ದಿನಗಳೊಳಗೆ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ. ಯಾರನ್ನು ಸೇರಿಸಬೇಕು, ಬಿಡಬೇಕು ಎಂಬುದನ್ನು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗುವುದು. ಇದರ ಹೊಣೆಗಾರಿಕೆ ಸದಾನಂದ ಗೌಡರ ಮೇಲಿದೆ ಎಂದರು. ಮುಂದಿನ ಒಂದು ವಾರದೊಳಗೆ ಸಂಪುಟ ವಿಸ್ತರಣೆ ಕಾರ್ಯ ನಡೆಯದಿದ್ದರೆ ಆರೇಳು ಮಂದಿ ಬಿಜೆಪಿ ಶಾಸಕರು ದಿಲ್ಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ವರಿಷ್ಠರನ್ನು ಭೇಟಿಯಾಗಿ ಒತ್ತಾಯ ಹೇರಲಿದ್ದಾರೆ ಎಂದು ಬಿಜಾಪುರ ಶಾಸಕ ಅಪ್ಪುಪಟ್ಟಣ ಶೆಟ್ಟಿ ಹೇಳಿದ್ದಾರೆ. ಬಿಜಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡುವಂತೆ ಈಗಾಗಲೇ 60 ಮಂದಿ ಶಾಸಕರ ಸಹಿ ಸಂಗ್ರಹಿಸಲಾಗಿದೆ. ಇನ್ನೂ ಕೆಲವು ಶಾಸಕರು ಸಹಿ ಹಾಕಲಿದ್ದಾರೆ. ಖಾಲಿ ಇರುವ ಎಲ್ಲ ಸ್ಥಾನಗಳನ್ನು ಸಂಪುಟ ವಿಸ್ತರಣೆಯ ವೇಳೆ ಭರ್ತಿ ಮಾಡಬೇಕೆಂಬುದು ತಮ್ಮ ಬೇಡಿಕೆಯಾಗಿದೆ. ಜೊತೆಗೆ ಹೊಸಬರಿಗೂ ಅವಕಾಶ ನೀಡಬೇಕು ಎಂದರು.
0 comments:
Post a Comment