11 ಮಂದಿ ಸಂಭವನೀಯರ ಪಟ್ಟಿ ಸಿದ್ಧ
ಬೆಂಗಳೂರು, ಮೇ 5: ರಾಜ್ಯ ಸಂಪುಟ ವಿಸ್ತರಣೆ ಅನಿವಾರ್ಯವಾಗಿದ್ದು, ಶೀಘ್ರವೇ ಈ ಕಾರ್ಯ ನೆರವೇರಲಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸದಾನಂದ ಗೌಡ, 11 ಮಂದಿ ಸಂಭವನೀಯ ಸಚಿವರ ಪಟ್ಟಿಯನ್ನು ವರಿಷ್ಠರಿಗೆ ಸಲ್ಲಿಸಿದ್ದಾರೆ. ದಿಲ್ಲಿಯಲ್ಲಿಂದು ನಡೆದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಯ ಸಂಬಂಧವಿಂದು ಪ್ರಧಾನಿ ಮನಮೋಹನ್ ಸಿಂಗ್ ಕರೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸಂಪುಟ ವಿಸ್ತರಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆಗಳಿ ರುವುದರಿಂದ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಅದನ್ನು ಹಂಚಿಕೆ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
11 ಮಂದಿ ಸಂಭವನೀಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ವರಿಷ್ಠರಿಗೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವಿಚಾರಣೆಯ ತೀರ್ಪು ಮುಂದಿನ ವಾರದೊಳಗೆ ಬರಲಿದ್ದು, ಈ ತೀರ್ಪಿನ ನಂತರ ಸಂಪುಟ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡುವ ಸುಳಿವನ್ನು ಸದಾನಂದ ಗೌಡ ನೀಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ದಿಲ್ಲಿಯಲ್ಲಿಲ್ಲದಿರುವುದರಿಂದ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಮಾತನಾಡಲಾಗದಿರುವುದರಿಂದ ಮುಂದಿನ ವಾರ ಮತ್ತೆ ದಿಲ್ಲಿಗೆ ಹೋಗಲು ಸಿಎಂ ನಿರ್ಧರಿಸಿದ್ದಾರೆ. ಮುಂದಿನ ವಾರ ದಿಲ್ಲಿಗೆ ತೆರಳಿ ಸಿದ್ಧ ಪಡಿಸಿರುವ 11 ಮಂದಿ ಸಚಿವರ ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸಿ, ಸಂಪುಟ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲು ಈಗಾಗಲೇ ಸಿದ್ಧತೆಯನ್ನು ಕೈಗೊಂಡಿದ್ದಾರೆ.
0 comments:
Post a Comment