: ಬೆಂಗಳೂರು, ಶಿವಮೊಗ್ಗ, ಬಳ್ಳಾರಿಯ 12ಕ್ಕೂ ಅಧಿಕ ಕಡೆ ಕಾರ್ಯಾಚರಣೆ
ನಿವಾಸ, ಕುಟುಂಬ, ಆಪ್ತರ ನಿವಾಸ, ಕಚೇರಿಗಳಲ್ಲಿ ಪರಿಶೀಲನೆ
ಬೆಂಗಳೂರು, ಮೇ 16: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿಗಳು, ಗುರುವಾರ ಬೆಳಗ್ಗೆ ಏಕಾಏಕಿ ಅವರ ನಿವಾಸ, ಕಚೇರಿ, ಕುಟುಂಬದವರ, ಆಪ್ತರ ನಿವಾಸಗಳು, ಒಡೆತನದ ಸಂಸ್ಥೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರರಹಿತ ಯಡಿಯೂರಪ್ಪನವರಿಗೆ ಸಿಬಿಐ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಹಲವೆಡೆ ದಾಳಿ ನಡೆಸಿರುವುದು ದಿಕ್ಕು ತೋಚದಂತೆ ಮಾಡಿದೆ.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸ, ಡಾಲರ್ಸ್ ಕಾಲನಿಯಲ್ಲಿರುವ ‘ಧವಳಗಿರಿ’ ನಿವಾಸ, ಶಿವಮೊಗ್ಗದ ವಿನೋಬಾನಗರ ದಲ್ಲಿರುವ ‘ಮೈತ್ರಿ’ ನಿವಾಸ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ.
ಯಡಿಯೂರಪ್ಪನವರ ಪುತ್ರರಿಗೆ ಸೇರಿದ ಕಚೇರಿ, ಸಂಸ್ಥೆಗಳ ಮೇಲೆಯೂ ದಾಳಿ ನಡೆಸಲಾಗಿದೆ. ಆರ್.ಪಿ.ಸಿ.ಲೇಔಟ್‌ನಲ್ಲಿರುವ ಯಡಿಯೂರಪ್ಪನವರ ಅಳಿಯ ಸೋಹನ್ ಕುಮಾರ್‌ರ ನಿವಾಸ, ರಾಜಾಜಿನಗರದಲ್ಲಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಸೇರಿದ ನಿವಾಸ, ಬಳ್ಳಾರಿಯ ಸಂಡೂರಿನ ತೋರಣಗಲ್‌ನಲ್ಲಿರುವ ಜಿಂದಾಲ್ ಮೈನಿಂಗ್ ಕಂಪೆನಿಯ ಕಚೇರಿ, ಸಂಸ್ಥೆಯ ಸಿಇಓ ವಿನೋದ್ ಪಾಂಡೆಯವರ ನಿವಾಸಗಳ ಮೇಲೆಯೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯ ಮುಖ್ಯಸ್ಥ ಪ್ರವೀಣ್‌ಚಂದ್ರರ ನಿವಾಸ, ಕಚೇರಿ, ಮೈಸೂರಿನ ಆಲಹಳ್ಳಿಯಲ್ಲಿರುವ ಯಡಿಯೂರಪ್ಪನವರ ಸಹೋದರಿಯ ನಿವಾಸದ ಮೇಲೆಯೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ ಯಡಿಯೂರಪ್ಪ, ಅವರ ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ, ಪುತ್ರಿಯರಾದ ಉಮಾದೇವಿ, ಅರುಣಾದೇವಿ, ಅಳಿಯಂದಿರಾದ ಸೋಹನ್ ಕುಮಾರ್, ಉದಯ ಕುಮಾರ್, ಸಹೋದರಿ ಅಕ್ಕಮಹಾದೇವಿ, ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ, ಜಿಂದಾಲ್, ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯ ಮುಖ್ಯಸ್ಥರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಸಿಬಿಐ ತಂಡ ಏಕಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದೆ.
ಸಿಬಿಐ ಬೆಂಗಳೂರು ಘಟಕದ ಮುಖ್ಯಸ್ಥ ಹಿತೇಂದ್ರರ ನೇತೃತ್ವದಲ್ಲಿ 16 ಅಧಿಕಾರಿಗಳ ತಂಡ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದೆ. ಮೊದಲು ಯಡಿಯೂರಪ್ಪನವರ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಈ ದಾಳಿ ನಡೆಯುತ್ತಿದ್ದಂತೆಯೇ ಯಡಿಯೂರಪ್ಪನವರ ಕುಟುಂಬ ಹಾಗೂ ಆಪ್ತರ ನಿವಾಸಗಳ ಮೇಲೆಯೂ ದಾಳಿ ನಡೆಸಲಾಗಿದೆ.
ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸದ ಮೇಲೆ ದಾಳಿ ನಡೆಸಿದ ನಾಲ್ಕು ಮಂದಿ ಸಿಬಿಐ ಅಧಿಕಾರಿಗಳೇ, ಡಾಲರ್ಸ್ ಕಾಲನಿಯಲ್ಲಿರುವ ಧವಳಗಿರಿ ನಿವಾಸದ ಮೇಲೆಯೂ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸರ್ಚ್ ವಾರಂಟ್ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡು ಬಂದಿದ್ದ ಸಿಬಿಐ ಅಧಿಕಾರಿಗಳು ಯಡಿಯೂರಪ್ಪ ಒಡೆತನಕ್ಕೆ ಸೇರಿದ ನಗರದಲ್ಲಿರುವ ಪ್ರೇರಣಾ ಶೈಕ್ಷಣಿಕ ಟ್ರಸ್ಟ್ ಕಚೇರಿ, ಧವಳಗಿರಿ ಪ್ರಾಪರ್ಟೀಸ್ ಪ್ರೈ.ಲಿ.ಕಚೇರಿ, ಭಗತ್ ಹೋಮ್ ಪ್ರೈ.ಲಿಮಿಟೆಡ್ ಕಚೇರಿಯ ಮೇಲೂ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಯಡಿಯೂರಪ್ಪ ನಿವಾಸದಲ್ಲಿಯೇ ಇದ್ದರು. ಈ ವೇಳೆ ನಿವಾಸದೊಳಗೆ ಪರಿಶೀಲನೆ ಕಾರ್ಯ ನಡೆಸಿದ ಸಿಬಿಐ ಅಧಿಕಾರಿಗಳು, ಹಲವು ದಾಖಲಾತಿಗಳನ್ನು ನಗರದಲ್ಲಿರುವ ಸಿಬಿಐನ ಕೇಂದ್ರ ಕಚೇರಿಗೆ ಕೊಂಡೊಯ್ದರು.ಯಡಿಯೂರಪ್ಪನವರನ್ನು ಅವರ ನಿವಾಸ ದಲ್ಲಿ ಸಿಬಿಐ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ವಿಚಾರಣೆಗೊಳಪಡಿಸಿದರೆ, ಇನ್ನೊಂದು ತಂಡ ವಶಪಡಿಸಿಕೊಂಡ ದಾಖಲೆಗಳನ್ನು ಸಿಬಿಐ ಕಚೇರಿಯಲ್ಲಿ ಪರಿಸೀಲನೆ ನಡೆಸಿದೆ.
ಯಡಿಯೂರಪ್ಪನವರ ನಿವಾಸದೊಳಗೆ ಅವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ, ಯಾವುದೇ ಗಣ್ಯರನ್ನಾಗಲಿ, ಇತರರನ್ನಾಗಲಿ ಒಳಪ್ರವೇಶಿಸದಂತೆ ನಿಷೇಧಿಸಲಾಗಿತ್ತು. ಜೊತೆಗೆ ನಿವಾಸದಲ್ಲಿದ್ದ ದೂರವಾಣಿ, ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಮಧ್ಯಾಹ್ನದ ವರೆಗೆ ವಿಚಾರಣೆಯನ್ನು ತೀವ್ರಗೊಳಿಸಿದ ಸಿಬಿಐ ಅಧಿಕಾರಿಗಳ ತಂಡ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಬ್ಯಾಂಕ್ ಖಾತೆ, ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಕೂಡಾ ಪರಿಶೀಲಿಸಲಾಗಿದ್ದು, ಜೊತೆಗೆ ಯಡಿಯೂರಪ್ಪನವರ ಕುಟುಂಬದ ಸದಸ್ಯರಿಗೆ ಸೇರಿದ ಸಂಸ್ಥೆಗಳ ಬ್ಯಾಲೆನ್ಸ್‌ಶೀಟ್ ಇನ್ನಿತರ ಹಣಕಾಸಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಯಡಿಯೂರಪ್ಪನವರೊಂದಿಗೆ ಗುರುತಿಸಿ ಕೊಂಡಿರುವ ಕೆಲವು ಆಪ್ತ ಸಚಿವರ ಮೇಲೆಯೂ ಕಣ್ಣಿಟ್ಟಿರುವ ಸಿಬಿಐ ತಂಡ, ಮತ್ತೆ ತನಿಖೆಯನ್ನು ಚುರುಕುಗೊಳ್ಳಿಸುವ ನಿರ್ಧಾರಕ್ಕೆ ಬಂದಿದೆ.
ತನಿಖೆಗೆ ಸಹಕರಿಸಿದ ಯಡಿಯೂರಪ್ಪ
ಬೆಂಗಳೂರು, ಮೇ 16: ರೇಸ್‌ಕೋರ್ಸ್ ರಸ್ತೆಯಲ್ಲಿರುವ ತನ್ನ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಯಡಿಯೂರಪ್ಪ ಪರಿಶೀಲನೆಗೆ ಸಹಕರಿಸಿದ್ದಾರೆ.
ಯಾವುದೇ ರೀತಿಯ ಉದ್ವೇಗಕ್ಕೊಳಗಾಗದೆ ಅವರು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ್ದು, ಜೊತೆಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಎಲ್ಲ ಅಧಿಕಾರಿಗಳನ್ನು ಪರಿಚಯಿಸಿಕೊಂಡು, ತಪಾಸಣೆಯ ವೇಳೆ ಖುದ್ದು ನಿಂತು ತನಿಖೆಗೆ ಸಹಕರಿಸಿದರೆನ್ನಲಾಗಿದೆ.
ಗಣ್ಯರ ಪ್ರವೇಶಕ್ಕೆ ನಿರ್ಬಂಧ
ಯಡಿಯೂರಪ್ಪ ನಿವಾಸಕ್ಕೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಯಾವುದೇ ಗಣ್ಯರಿಗೆ ಹಾಗೂ ಸಚಿ ರಿಗೆ ಒಳ ಪ್ರವೇಶಿಸದಂತೆ ನಿರ್ಬಂಧ ವೇರಲಾಗಿತ್ತು. ಮಧ್ಯಾಹ್ನ 12 ಗಂಟೆಯ ನಂತರ ಸಿಬಿಐ ಅಧಿಕಾರಿಗಳು ಪರಿಶೀಲನೆ ಕೊನೆಗೊಳಿಸಿದ್ದು, ಬಳಿಕ ಯಡಿಯೂರಪ್ಪ ಬೆಂಬಲಿಗ ಸಚಿವರು, ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಸಿ.ಎಂ.ಉದಾಸಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಬಿಎಸ್‌ವೈಯನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಸಿಬಿಐ ದಾಳಿ: ಪ್ರತಿಕ್ರಿಯೆಗೆ ಮುಖ್ಯಮಂತ್ರಿ ನಕಾರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಸಿಬಿಐ ದಾಳಿ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಪತ್ರಕರ್ತರು ದಾಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸದಾನಂದ ಗೌಡ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.
0 comments:
Post a Comment