ಉಡುಪಿಗೆ ಪ್ರಥಮ; ವಿದ್ಯಾರ್ಥಿನಿಯರೇ ಮೇಲುಗೈ
ಬೆಂಗಳೂರು, ಮೇ 17: ಕಳೆದ ಎಪ್ರಿಲ್‌ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಶೇ.76.13 ಫಲಿತಾಂಶ ದಾಖಲಾಗಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಬಾರಿ ಒಟ್ಟು 8,25,131 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ ಶೇ.81.16ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಶೇ.76.73 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕಿಂತ(ಶೇ.73.90) ಶೇ.2.23ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 1878 ಹೈಸ್ಕೂಲ್‌ಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಈ ದಾಖಲೆಯ ಫಲಿತಾಂಶ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ ಎಂದ ಸಚಿವ ಕಾಗೇರಿ, ಇದಕ್ಕಾಗಿ ಶ್ರಮಿಸಿದ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಥಮ ಸ್ಥಾನ ಉಡುಪಿ ಜಿಲ್ಲೆ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸಚಿವ ಕಾಗೇರಿಯವರ ತವರು ಜಿಲ್ಲೆ ಶಿರಸಿ ಪಡೆದುಕೊಂಡಿದೆ ಹಾಗೂ ತೃತೀಯ ಸ್ಥಾನವನ್ನು ಹಾಸನ ಜಿಲ್ಲೆ ತನ್ನದಾಗಿಸಿಕೊಂಡಿದೆ. ಬೀದರ್ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
ಹಾಸನ ನಂತರದ ಸ್ಥಾನಗಳನ್ನು ತುಮಕೂರು, ಚಿಕ್ಕೋಡಿ, ಉತ್ತರ ಕನ್ನಡ, ಮಂಗಳೂರು ಪಡೆದುಕೊಂಡಿವೆ. 47 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಆದರೆ, ಶೂನ್ಯ ಫಲಿತಾಂಶ ಬಂದ ಶಾಲೆಗಳಲ್ಲಿ ಸರಕಾರಿ ಶಾಲೆಗಳಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9.43ರಷ್ಟು ಹೆಚ್ಚು ವಿದ್ಯಾರ್ಥಿನಿಯರು ಮತ್ತು ಶೇ.3ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಗೇರಿ ತಿಳಿಸಿದರು.
ಈ ಬಾರಿಯ ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿ 625 ಅಂಕಗಳಲ್ಲಿ 623 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನ ಪಡೆದಿದ್ದಾನೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯೇ ಮುಖ್ಯವಲ್ಲ. ಫಲಿತಾಂಶದಲ್ಲಿ ಕಡಿಮೆ ಅಂಕಗಳಿಸುವಂತಹ ವಿದ್ಯಾರ್ಥಿಗಳೊಂದಿಗೆ ಪಾಲಕರು ಹಾಗೂ ಶಿಕ್ಷಕರು ಸಹಾನುಭೂತಿಯಿಂದ ವರ್ತಿಸಬೇಕು. ಅಲ್ಲದೆ, ಮುಂದಿನ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನುಗಳಿಸುವಂತೆ ಪ್ರೋತ್ಸಾಹಿಸಿ. ಅನಗತ್ಯವಾಗಿ ವಿದ್ಯಾರ್ಥಿಗಳ ಮನಸ್ಸಿನ ಶಾಂತಿ ಕದಡುವಂತೆ ವರ್ತಿಸಬೇಡಿ ಎಂದು ಅವರು ಮನವಿ ಮಾಡಿದರು.
ಅಂಕಗಳ ಮರು ಎಣಿಕೆ, ಮರು ವೌಲ್ಯಮಾಪನ, ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯುವುದು ಸೇರಿದಂತೆ ಹಲವು ಅವಕಾಶಗಳನ್ನು ವಿದ್ಯಾರ್ಥಿಗಳು, ಪೋಷಕರಿಗೆ ಕಲ್ಪಿಸಲಾಗಿದೆ. ಆದುದರಿಂದ, ಕಡಿಮೆ ಅಂಕಗಳನ್ನು ಗಳಿಸಿರುವಂತಹ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಪಡೆದುಕೊಳ್ಳಬೇಕು. ನಿರೀಕ್ಷಿತ ಫಲಿತಾಂಶ ಬರದಿದ್ದಲ್ಲಿ ದುಡುಕದಂತೆ ಅವರು ಸಲಹೆ ನೀಡಿದರು. ಇಂದು ಮಧ್ಯಾಹ್ನ 1ಗಂಟೆಯ ಬಳಿಕ ಅಂತರ್ಜಾದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ನಾಳೆ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ಮಧ್ಯಾಹ್ನ 1ಗಂಟೆಯ ಬಳಿಕ ಫಲಿತಾಂಶ ವೀಕ್ಷಿಸಲು schools9.com, www.karresults.nic.in, www.sslc.kar. nic.in, www.indiaEducation.net, www.indiaEduNews. net, www.ExamResults.net ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
0 comments:
Post a Comment