ಬೆಂಗಳೂರಿನ ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆಯಲ್ಲಿ ಎ.ಎಂ.ಇಸ್ಮಾಯೀಲ್ ಸಂಪಾದನೆಯ‘ಆರು ದಶಕದ ಆಯ್ದ ಕೃತಿಗಳು’ಮತ್ತು ‘ಅಂದಿನಿಂದ ಇಂದಿಗೆ’ಕೃತಿಗಳನ್ನು ರವಿವಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ,ಹಿರಿಯ ಸಾಹಿತಿ ದೇವನೂರು ಮಹಾದೇವ,ಎ.ಎಂ.ಇಸ್ಮಾಯೀಲ್,ಎಸ್.ಆರ್.ವಿಜಯಶಂಕರ್ ಹಾಗೂ ನಟರಾಜ ಹುಳಿಯಾರ್ ಬಿಡುಗಡೆಗೊಳಿಸಿದರು.
ಬೆಂಗಳೂರು,ಎ.1:ಸಮಾಜದಲ್ಲಿ ಆಧ್ಯಾತ್ಮಿಕ ಗುರುಗಳು ಎಂದು ಗುರುತಿಸಿಕೊಂಡಿರುವವರ ಹೇಳಿಕೆಗಳನ್ನು ವಿಮರ್ಶೆಗೆ ಒಳಪಡಿಸಿದ ನಂತರವಷ್ಟೇ ಒಪ್ಪಿಕೊಳ್ಳಬೇಕು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಅಂಕಿತ ಪುಸ್ತಕ ಪ್ರಕಾಶನದ ವತಿ ಯಿಂದ ನಡೆದ ತನ್ನ ಲೇಖನಗಳನ್ನಾಧರಿಸಿ ಎ.ಎಂ.ಇಸ್ಮಾಯೀಲ್ ಸಂಪಾದನೆಯ ‘ಆರು ದಶಕದ ಆಯ್ದ ಕೃತಿಗಳು’ಮತ್ತು ‘ಅಂದಿನಿಂದ ಇಂದಿಗೆ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡುತ್ತೇವೆ.ಆದರೆ,ಧಾರ್ಮಿಕ ಗುರುಗಳು ಹೇಳುವುದನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವ ವೌಢ್ಯ ಹಿಂದಿನಿಂದಲೂ ನಮ್ಮಲ್ಲಿ ಬೆಳೆದು ಕೊಂಡು ಬಂದಿದೆ.ಆ ಪರಂಪರೆಯನ್ನು ಮುರಿದು ಇನ್ನಾದರೂ ನಾವು ಧಾರ್ಮಿಕ ಗುರುಗಳ ಅಸಂಬದ್ಧ ಮತ್ತು ಸ್ವಾರ್ಥಪರ ಹೇಳಿಕೆಗಳನ್ನು ಖಂಡಿಸಬೇಕಾಗಿದೆ ಎಂದು ಅನಂತಮೂರ್ತಿ ಹೇಳಿದರು.
ಸರಕಾರಿ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳು ನಕ್ಸಲೀಯರಾಗುತ್ತಾರೆ ಎಂದು ಮೊನ್ನೆ ತಾನೆ ರವಿಶಂಕರ ಗುರೂಜಿ ಅಸಂಬದ್ಧ ಹೇಳಿಕೆ ನೀಡಿದ್ದಾರೆ.ದೀನ-ದಲಿತರ,ಬಡವರ ಶಿಕ್ಷಣದ ಅವಕಾಶವನ್ನು ಕಿತ್ತುಕೊಳ್ಳುವ ಹುನ್ನಾರ ಶ್ರೀಗಳ ಮಾತಲ್ಲಿ ಅಡಕವಾಗಿದೆ.ಅವರು ಸಂತರೂ ಅಲ್ಲ,ದಾರ್ಶನಿಕರೂ ಅಲ್ಲ.ಅವರ ಹೇಳಿಕೆಯನ್ನು ಗಂಭೀರವಾಗಿ ಪರೀಗಣಿಸುವ ಅಗತ್ಯವಿಲ್ಲ ಎಂದು ಅನಂತಮೂರ್ತಿ ಟೀಕಿಸಿದರು.
ಕನ್ನಡದ ಶಾಲೆಗಳ ಮಕ್ಕಳು ನಕ್ಷಲೀಯ ತತ್ವದ ಬಗ್ಗೆ ತಿಳಿದುಕೊಂಡರೆ,ನಕ್ಷಲೀಯ ಸಿದ್ಧಾಂತದ ಹಿಂದಿನ ಕಾರಣಗಳನ್ನು ತಿಳಿದುಕೊಂಡರೆ ಅದರಲ್ಲಿ ತಪ್ಪೇನೂ ಇಲ್ಲ.ಅದು ನನಗೆ ಖುಷಿ ತರುವ ವಿಚಾರ ಎಂದು ಅವರು ಹೇಳಿದರು.
ಗೆಳೆಯ ಇಸ್ಮಾಯಿಲ್ ಅವರು ಸಮಕಾಲೀನ ತಲ್ಲಣಗಳ ಬಗ್ಗೆ ಆಗಾಗ ದೂರವಾಣಿ ಕರೆ ಮಾಡಿ ನನ್ನಿಂದ ಪ್ರತಿಕ್ರಿಯೆ ಹೊರಡಿಸುವುದಕ್ಕಾಗಿ ಈ ಲೇಖನಗಳನ್ನು ಬರೆಸಿದ್ದಾರೆ ಎಂದರು.
ಕೃತಿಗಳ ಕುರಿತು ಮಾತನಾಡಿದ ಹಿರಿಯ ವಿಮರ್ಶಕ ನಟರಾಜ್ ಹುಳಿಯಾರ್, ಅನಂತಮೂರ್ತಿಯವರು ಎಲ್ಲ ಪ್ರಕಾರದ ಸಾಹಿತ್ಯವನ್ನು ಬರೆಯುತ್ತಾ ಬಂದಿದ್ದಾರೆ.ಈ ಲೇಖನಗಳಲ್ಲಿ ನೂರು ವರ್ಷಗಳಲ್ಲಿ ಭಾರತದ ರಾಜಕಾರಣ ಮತ್ತು ಚಳವಳಿಗಳಲ್ಲಿ ಸ್ವರೂಪ ಹೇಗೆ ಬದಲಾಗುತ್ತ ಬಂದಿದೆ ಎಂಬುದನ್ನು ವಿವರಿಸಿದ್ದಾರೆ.ಐದಾರು ದಶಕಗಳ ಹಿಂದೆ ಬರಹದಲ್ಲಿ ಪ್ರತಿಪಾದಿಸುತ್ತ ಬಂದಿದ್ದನ್ನು ಇತ್ತೀಚೆಗಿನ ಲೇಖನಗಳಲ್ಲಿ ಪರಿಶೀಲನೆಗೆ ಒಡ್ಡುತ್ತಾ ಬಂದಿದ್ದಾರೆ ಎಂದರು.
ಭೈರಪ್ಪನಂಥ ಮೂಲಭೂತವಾದಿ ಸಾಹಿತಿಗಳಿಗೆ ತಮ್ಮ ಬರಹದ ಮೂಲಕವೇ ಪ್ರತಿಕ್ರಿಯಿಸುತ್ತಾ ಆ ಮೂಲಕ ಭೈರಪ್ಪನವರ ಜನಪ್ರಿಯತೆ ಕುಗ್ಗುವಂತೆ ಮಾಡಿದ್ದಾರೆ.ಸ್ವಧರ್ಮವನ್ನು ಸ್ವವಿಮರ್ಶಿಸುವ ಗುಣ ಇವರ ಬರಹದಲ್ಲಿದೆ ಎಂದರು.
ಹಿರಿಯ ಸಾಹಿತಿ ದೇವನೂರು ಮಹಾದೇವ ಮಾತನಾಡಿ,ಒಂದು ಕಾಲದಲ್ಲಿ ನಾವು ಪಠ್ಯಕ್ರಮಕ್ಕಿಂತಲೂ ಅನಂತಮೂರ್ತಿ,ಲಂಕೇಶ್,ತೇಜಸ್ವಿಯಂಥವರ ಸಾಹಿತ್ಯವನ್ನು ಹೆಚ್ಚು ಓದುತ್ತಿದ್ದೆವು.ಅನಂತಮೂರ್ತಿ ಮತ್ತು ಲಂಕೇಶ್ ಆ ದಿನಗಳಲ್ಲಿ ಕನ್ನಡದ ಸಾಹಿತ್ಯದ ಇಬ್ಬರು ಸವತಿಯರೆಂದೇ ನಾನು ತಿಳಿದುಕೊಂಡಿದ್ದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಮತ್ತು ಸಂಪಾದಕ ಎ.ಎನ್.ಇಸ್ಲಾಯೀಲ್ ಉಪಸ್ಥಿತರಿದ್ದರು.
0 comments:
Post a Comment