ಉಡುಪಿ-ಚಿಕ್ಕಮಗಳೂರು ಉಪಚುನಾವಣೆ ಪ್ರಚಾರಕ್ಕೆ ಬರಲಾರೆ ♦ ರಕ್ಷಣೆಯೂ ಗೊತ್ತು, ಆಕ್ರಮಣವೂ ಗೊತ್ತು ♦ ಗೌಡರ ಕುಟುಂಬದ ವಿರುದ್ಧ ಕಿಡಿ ಬಿಎಸ್‌ವೈಗೆ ಅಧಿಕಾರ ನೀಡುವಂತೆ ಬೆಂಬಲಿಗರ ಆಗ್ರಹ
ರಾಜಕೀಯ ಷಡ್ಯಂತ್ರದ ಚಕ್ರವ್ಯೆಹವನ್ನು ಭೇದಿಸುವುದು ತನಗೆ ಗೊತ್ತು, ಭೇದಿಸಿ ಹೊರಬರುವುದು ಗೊತ್ತು. ಆದಷ್ಟು ಬೇಗ ಭೇದಿಸಿ ಹೊರ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ರವಿವಾರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉತ್ತರ
ಕರ್ನಾಟಕ ಭಾಗದ ಸಚಿವರು ಹಾಗೂ ಶಾಸಕರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ ತನ್ನ ವಿರೋಧಿಗಳ ವಿರುದ್ಧ ಅವರು ಹರಿಹಾಯ್ದಿದ್ದಾರೆ. ತನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದರೆ ಅದನ್ನು ಭೇದಿಸಿ ಹೊರ ಬರಲು ತನಗೆ ಗೊತ್ತಿದೆ ಎಂದು ಅಬ್ಬರದಿಂದ ಗುಡುಗುವ ಮೂಲಕ ಪ್ರತಿಪಕ್ಷಗಳು ಹಾಗೂ ಪರೋಕ್ಷವಾಗಿ ತಮ್ಮ ಪಕ್ಷದೊಳಗಿರುವ ನಾಯಕರ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು.
ಚಕ್ರವ್ಯೆಹವನ್ನು ಭೇದಿಸಿ ಒಳಗೆ ಹೋಗುವುದು, ಅದರಿಂದ ಹೊರಬರಲು ಗೊತ್ತಿದ್ದಿದ್ದು ಅರ್ಜುನನಿಗೆ ಮಾತ್ರ, ಅಭಿಮನ್ಯುಗೆ ಚಕ್ರವ್ಯೆಹ ಭೇದಿಸುವುದು ಗೊತ್ತಿತ್ತು, ಅದರಿಂದ ಹೊರಬರಲು ಗೊತ್ತಿರಲಿಲ್ಲ. ಅದೇ ರೀತಿ 40 ವರ್ಷಗಳ ರಾಜಕೀಯ ಅನುಭವದಲ್ಲಿ ತನಗೆ ರಾಜಕೀಯ ಷಡ್ಯಂತ್ರದ ಚಕ್ರವ್ಯೆಹವನ್ನು ಭೇದಿಸುವುದು ಗೊತ್ತು, ಅದರಿಂದ ಹೊರ ಬರುವುದೂ ಗೊತ್ತು ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಚಾಟಿಬೀಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿಚಿನ್ ಗಡ್ಕರಿ ಸೇರಿದಂತೆ ಹಲವು ನಾಯಕರು ಗೈರಾಗಿರುವುದಕ್ಕೆ ತಮಗೆ ಬೇಸರವಾಗಿಲ್ಲ ಎಂದ ಯಡಿಯೂರಪ್ಪ ಜಾತಿ ನೋಡಿ ರಾಜಕೀಯ ಮಾಡಿಲ್ಲ ಎಂದರು.
ವಿಶ್ವಾಸ ದ್ರೋಹಿಗಳಿಗೆ ಕಾಲವಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ತಾನು ಮಾತನಾಡಲ್ಲ, ಮಾತು ತಪ್ಪಿದ ನಾಯಕರ ವಿರುದ್ಧವೂ ದೂರುವುದಿಲ್ಲ. ಬಿಜೆಪಿ ಕಟ್ಟಿ ಬೆಳೆಸಿದ್ದರಿಂದ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ಇಂದಿನಿಂದಲೇ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡಿದ್ದೇನೆ ಎಂದರು. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಬೇಕು ಎಂದು ಬಯಸಿದ್ದೆ. ಆದರೆ ಅಧಿಕಾರದ ದಾಹದಿಂದ ಅಲ್ಲ, ಒಂದು ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿ ರಾಜ್ಯದ ಜನರ ಕಲ್ಯಾಣ ಮಾಡುವ ಉದ್ದೇಶದಿಂದ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಿಎಂ ಗಾದಿಗಾಗಿ ಅಂಗಲಾಚುವುದಿಲ್ಲ, ಯಾರಿಂದಲೂ ಒತ್ತಡವೇರುವುದಿಲ್ಲ ಎಂದರು.
ತಾನು ಮುಖ್ಯಮಂತ್ರಿ ಅಲ್ಲದಿದ್ದರೂ, ಮುಖ್ಯಮಂತ್ರಿಗಿಂತಲೂ 10 ಪಟ್ಟು ಹೆಚ್ಚು ರಾಜ್ಯದ ಅಭಿವೃದ್ಧಿ ಕಡೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ 150 ವಿಧಾನಸಭಾ ಸ್ಥಾನವನ್ನು 23 ಲೋಕಸಭಾ ಸ್ಥಾನವನ್ನು ಗೆಲ್ಲಿಸಿಕೊಡುವ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕಾಗಿ 175 ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದರು. ನಮ್ಮ ಮಧ್ಯೆ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಬಿಜೆಪಿಯವರೇ. ನಮ್ಮದು ಅಟಲ್ ಬಿಹಾರಿ ವಾಜಪೇಯಿಯವರ ಬಿಜೆಪಿ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದಲೇ ಮುಂದೆ ಸಾಗುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ರಕ್ಷಣಾತ್ಮಕ ಆಟವೂ ಗೊತ್ತು, ಆಕ್ರಮಣಕಾರಿ ಆಟವೂ ಗೊತ್ತು. ವಿಪಕ್ಷದವರ ಕುತಂತ್ರದಿಂದ, ಅಪ್ಪ-ಮಕ್ಕಳ ಆಟದಿಂದ ತಾನು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ, ಆದರೂ ಬೆನ್ನು ತೋರಿಸಲಿಲ್ಲ, ಸಿಎಂ ಗಾದಿ ಬಿಟ್ಟು ಕೆಳಗಿಳಿದೆ ಎಂದ ಯಡಿಯೂರಪ್ಪ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರೂ ಅದರಿಂದ ಬೇಸರವಾಗಿರಲಿಲ್ಲ. ಆದರೆ ನಿರಪರಾಧಿಯಾಗಿ ತಾನು 24 ದಿನಗಳ ಕಾಲ ಜೈಲು ಅನುಭವಿಸಿದ್ದು ತನಗೆ ಅತೀವ ನೋವು ತಂದಿದೆ ಎಂದರು. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಗಾರಿದ ಯಡಿಯೂರಪ್ಪ, ಅಪ್ಪ-ಮಕ್ಕಳಿಂದಾಗಿ 20 ತಿಂಗಳು ಸಮ್ಮಿಶ್ರ ಸರಕಾರದ ಮೂಲಕ ಅಧಿಕಾರ ಮಾಡಿದ್ದೇನೆ. ಅವರು ಕೆಲವೊಂದು ಶರತ್ತುಗಳನ್ನು ತನ್ನ ಮುಂದಿಟ್ಟು ಸಿಎಂ ಸ್ಥಾನ ನೀಡುತ್ತೇನೆ ಎಂದರು. ಆದರೆ ರಾಜ್ಯದ ಜನರನ್ನು ಅಡವಿಟ್ಟು ತಾವು ಕುರ್ಚಿಗಾಗಿ ಒಪ್ಪುವುದು ತಮಗಿಷ್ಟವಿರಲಿಲ್ಲ. ಅದಕ್ಕಾಗಿಯೇ ಅವರ ಷರತ್ತು ಒಪ್ಪದೆ ಚುನಾವಣೆಗೆ ಹೋದೆ. ಜನ ಆಶೀರ್ವದಿಸಿದರು ಎಂದರು.
ಶಿಕಾರಿಪುರದಲ್ಲಿ ಪುರಸಭೆ ಅಧ್ಯಕ್ಷನಾಗಿ ಮನೆಯಿಂದ ಕಚೇರಿಗೆ ನಡೆದುಕೊಂಡು ಹೋಗುತ್ತಿರುವಾಗ ಪ್ರತಿಪಕ್ಷದವರು ನನ್ನ ಮೇಲೆ ದಾಳಿ ಮಾಡಿದ್ದರು. ದಾಳಿಯಿಂದಾಗಿ ನಾನು ಪ್ರಜ್ಞೆ ತಪ್ಪಿ ಕೆಳಗೆಬಿದ್ದಿದೆ. ಆಗ ದಾಳಿ ಮಾಡಿದ ದುಷ್ಕರ್ಮಿಗಳು ನಾನು ಸತ್ತಿದ್ದೇನೆ ಎಂದು ತಿಳಿದು ನನ್ನನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಈಘಟನೆ ನಡೆದದ್ದು ನನ್ನ ಮನೆಯ ಪಕ್ಕದಲ್ಲಿಯೇ. ನನಗೆ ಜ್ಞಾನ ಬಂದಾಗ, ‘ನಾನು ಬದುಕಿದ್ದರೆ ನನ್ನ ಜೀವನವನ್ನು ಜನರ ಋಣ ತೀರಿಸಲ ಮುಡುಪಾಗಿಡುತ್ತೇನೆ, ನೀನು ಮಕ್ಕಳನ್ನು ಸಾಕಿಕೊಂಡು ಬದುಕುವುದರ ಬಗ್ಗೆ ನೋಡಿಕೊ, ನನ್ನ ನಂಬ ಬೇಡ’ ಎಂದು ನಾನು ನನ್ನ ಪತ್ನಿಗೆ ಅಂದು ಹೇಳಿದ್ದೆ.
ಯಡಿಯೂರಪ್ಪರ ಗುಣಗಾನ ಮಾಡಿದ ಸಚಿವರಾದ ಶೋಭಾ ಕರಂದ್ಲಾಜೆ, ಅಶೋಕ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಹೈಕೋರ್ಟ್ ಇತ್ತೀಚೆಗೆ ಯಡಿಯೂರಪ್ಪರ ಮೇಲೆ ಲೋಕಾಯುಕ್ತರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಿರುವುದರಿಂದ ಅವರು ಆರೋಪ ಮುಕ್ತರಾಗಿದ್ದು, ಅವರಿಗೆ ಸ್ಥಾನ ನೀಡಬೇಕು ಎಂದು ವೇದಿಕೆಯಲ್ಲಿಯೇ ಒತ್ತಾಯಿಸಿದರು. ಉದ್ವೇಗಭರಿತವಾಗಿ ಮಾತನಾಡಿದ ಶೋಭಾ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ರಾಜ್ಯದ ಆಡಳಿತದಲ್ಲಿ ಬದಲಾವಣೆ ತಂದಿದ್ದಾರೆ. ಇಂಥ ನಾಯಕರಿಗೆ ಅಧಿಕಾರ ನೀಡಲೇಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಚಿವ, ಶಾಸಕರಾದ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ರಾಜೂಗೌಡ, ಉಮೇಶ್ ಕತ್ತಿ, ಸೋಮಣ್ಣ, ಹೇಮಚಂದ್ರ ಸಾಗರ್, ಹರೀಶ್, ಅರವಿಂದ ಲಿಂಬಾವಳಿ, ಸಿ.ಸಿ.ಪಾಟೀಲ್, ಲಕ್ಷ್ಮಣ ಸವದಿ, ಚಂದ್ರಕಾಂತ ಬೆಲ್ಲದ್, ಸಂಸದರಾದ ರಾಘವೇಂದ್ರ, ಪ್ರಹ್ಲಾದ ಜೋಷಿ ಸೇರಿದಂತೆ ಯಡಿಯೂರಪ್ಪ ಬಣದ ಬಹುತೇಕ ಸಚಿವ -ಶಾಸಕರು ಹಾಜರಿದ್ದರು. ಇದಕ್ಕೂ ಮುನ್ನ ನಗರದ ಬಸ್ ನಿಲ್ದಾಣದ ಇಂದಿರಾ ಗ್ಲಾಸ್ ಹೌಸ್‌ನಿಂದ ನೆಹರೂ ಮೈದಾನದ ವರೆಗೆ ತೆರೆದ ವಾಹನದಲ್ಲಿ ಯಡಿಯೂರಪ್ಪರನ್ನು ಕರೆ ತರಲಾಯಿತು. ಈ ಸಂದರ್ಭದಲ್ಲಿ ಅವರ ಆಪ್ತ ಸಚಿವ, ಶಾಸಕರು, ಬೆಂಬಗಲಿಗರು ಹಾಜರಿದ್ದರು.
0 comments:
Post a Comment