PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಸಹಸ್ರಾಂಜನೇಯ ಪಿಕ್ಚರ್‍ಸ್ ವತಿಯಿಂದ ತಯಾರಾಗುತ್ತಿರುವ ನೀರಲಿದ್ದು ಬಾಯಾರಿದವನು ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕೆ ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಕ್ಲಾಪ್ ಮಾಡುವ ಮೂಲಕ ಐತಿಹಾಸಿಕ ಕ್ಷೇತ್ರ ಹುಲಿಗಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಸಾಕ್ಷ್ಯ ಚಿತ್ರಗಳು ಜನರ ಮನಸ್ಸಿಗೆ ನಾಟುತ್ತವೆ, ಅವುಗಳಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತದೆ, ಕೊಪ್ಪಳದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು. ಹುಲಿಗಿ ಮತ್ತು ಕೊಪ್ಪಳದ ಕೆಲ ಭಾಗಗಳಲ್ಲಿ ಸಾಕ್ಷ್ಯ ಚಿತ್ರವನ್ನು ಚಿತ್ರೀಕರಿಸಲಾಯಿತು. ನಗರದ ಖ್ಯಾತ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಮಗ ಅವಿನಾಶ ಚಿತ್ರದ ಮುಖ್ಯ ಪಾತ್ರದಾರಿಯಾಗಿದ್ದು, ಡಾ. ಮಹಾಂತೇಶ ಮಲ್ಲನಗೌಡರ ಸಹ ಗೌಡನ ಪಾತ್ರವನ್ನು ಮಾಡಿದ್ದಾರೆ. ನಾಯಕನ ತಾಯಿ ಪಾತ್ರವನ್ನು ಶ್ರೀಮತಿ ಸುಮಾ ಶಾಸ್ತ್ರೀ, ಪೂಜಾರಪ್ಪನ ಪಾತ್ರವನ್ನು ವೈ. ಬಿ. ಜೂಡಿ, ಇತರ ಪಾತ್ರದಲ್ಲಿ ಮನೋಜಕುಮಾರ ಇತರರು ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ವಿಜಯ ಅಮೃತ್‌ರಾಜ್ ಮಾಡಿದ್ದು, ನಿರ್ಮಾಣ ಮತ್ತು ನಿರ್ದೇಶನವನ್ನು ಬೆಳ್ಳಿ ಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾಡಿದ್ದಾರೆ. ವಸ್ತ್ರಾಲಂಕಾರ ವಿಠ್ಠಲ ಮಾಲಿಪಾಟೀಲ, ಛಾಯಾಗ್ರಹಣ ಮತ್ತು ಸಂಕಲನವನ್ನು ಶೇಖ್ ಇದಾಯತ್, ಪ್ರೊಡಕ್ಷನ್ ಮ್ಯಾನೇಜರ್ ರಾಗಿ ಶೇಖರಪ್ಪ ಹೆಚ್. ಬೆಟಗೇರಿ ಕಾರ್ಯನಿರ್ವಹಿಸಿದ್ದಾರೆ.
ಒಬ್ಬ ದೈಹಿಕ ಮತ್ತು ಮಾನಸಿಕ ಅಸ್ವಸ್ಥ ಹುಡುಗನ್ನು ಇಟ್ಟುಕೊಂಡು, ಸಮಾಜ ಆತನನ್ನು ಹೇಗೆ ಕಾಣುತ್ತದೆ, ಬಡತನಕ್ಕೆ ಉಂಬುವ ಚಿಂತೆ ಎಂಬಂತೆ ಹಬ್ಬ ಹರಿದಿನಗಳಲ್ಲೂ ಸಹ ಒಬ್ಬ ಅಗಸನಿಗೆ ಸಂತೋಷವೇ ಇಲ್ಲ ಎನ್ನುವ ಕಥಾ ವಸ್ತುವಿನಿಂದ ಚಿತ್ರ ತಯಾರಾಗಿದೆ. ಈ ವಾರ ಸಾಹಿತಿ ಬಿ. ಶ್ರೀನಿವಾಸ ರವರ ಇಂದ್ರವ್ವ ಹಾಕಿದ ಕಲ್ಲು ಮತ್ತು ಮಂಜುನಾಥ ಜಿ. ಗೊಂಡಬಾಳರ ಮುಟ್ಟಿಸಿಕೊಳ್ಳದವರು ಎಂಬ ಸಾಕ್ಷ್ಯ ಚಿತ್ರಗಳನ್ನು ಚಿತ್ರೀಕರಿಸಲಾಗುತ್ತಿದೆ, ಇದರಲ್ಲಿ ಸ್ಥಳಿಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದು ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.


Advertisement

0 comments:

Post a Comment

 
Top