http://ladaiprakashanabasu.blogspot.in/2012/03/2_24.html
೫. ಈ ರಾತ್ರಿ
ಈ ರಾತ್ರಿ
ಕಣ್ಣೆವೆ ಸುತ್ತ
ಚರಿತ್ರೆ ಚಕ್ರವ್ಯೂಹದ
ಕೋಟೆ ಕಟ್ಟಿದೆ
ಬೆಂಕಿಯಲ್ಲ ದೀಪವೂ
ದಹಿಸುವ ವಾಸ್ತವಕೆ
ಇಂದಿನ ಇರುಳು
ಪುರಾವೆ ಒದಗಿಸಿದೆ!
ಬೀಟ್ ಪೋಲೀಸರು
ಹೊರಗೋಡೆಯ ದಸ್ತಾವೇಜಿಗೆ
ರುಜು ಮಾಡಿ
ಸೀಟಿಯೂದುವ ಜಾವದಲಿ
ಖಾಲಿ ಕಂಗಳ ಹುಡುಗ
ಇರುಳ ತಿನ್ನುತ್ತಎಚ್ಚರದಲ್ಲಿದ್ದಾನೆ
ಮೂಲೆ ಸೇರಿದ ಪಲ್ಲಂಗದಲಿ
ನಿದ್ದೆಹೋಗಿದೆ
ಒದ್ದೆಗಣ್ಣಿನ ಯಾತನೆ!
ಕಣ್ಣೆವೆ ಸುತ್ತ
ಚರಿತ್ರೆ ಚಕ್ರವ್ಯೂಹದ
ಕೋಟೆ ಕಟ್ಟುವಾಗ
ಆ ಹುಡುಗ ಇರುಳ ತಿನ್ನುವುದ
ನೋಡಲಾರೆ
ನನ್ನ ಅಲ್ಲೇ ಹುಗಿದುಬಿಡು
ಎನ್ನುತ ರಾತ್ರಿ
ನೇಣುಗಂಬವನೇರಿತು!
ಮಳೆಗಾಲದ ಬಾನು ರೋದಿಸುವಾಗ
ರಾತ್ರಿಯ ಸಾವು ಭಯಾನಕ ಎನಿಸಿತು.
ರಾತ್ರಿಯ ಹೆಣ ಹೂಳುವುದೆಲ್ಲಿ?
ಪ್ರಶ್ನೆ ಬೆಳೆದ ಹಾಗೆ
ರಾತ್ರಿ ಹೆಣವೂ ಬೆಳೆದು
ರೋದಿಸುವ ಮಳೆಗಾಲದ ಬಾನಿನ ನೀರೂ ಬೆಳೆದು
ಗಾಬರಿಯ ಬೊಗಸೆ
ಹೆಣ ಹುಗಿಯದೆ
ಅಗ್ನಿಸ್ಪರ್ಶ ಮಾಡಿತು
ರಾತ್ರಿಯ ಹೆಣ ಉರಿಯುತ್ತಲೇ ಇದೆ ಇನ್ನೂ!
ದಣಿದ ಅಕಾಲ ಮುಪ್ಪಿನ ದೇಹ
ಉರಿವ ಕಿಚ್ಚಿನ ಎದುರು ಹಲಗೆ ಕಾಯಿಸುತ್ತಿದೆ
ತೊಗಲಿಗಂಟಿದ ಚಳಿ ಮಾತ್ರ ಬಿಡುತ್ತಿಲ್ಲ
ಕಿಚ್ಚ ಕಾಯಿಸುವ ಇರುಳ ತಿಂದವನ ಎದೆಯೀಗ
ಕಪ್ಪಾಗುತ್ತಿದೆ
ಇರುಳಿಗಿಂತಲೂ!
(ಉದಯ ವಾಣಿ
0 comments:
Post a Comment