ಹೊಸದಿಲ್ಲಿ, ಮಾ. 21: ಸರಕಾರಿ ಶಾಲೆಗಳು ನಕ್ಸಲ್ ಸಿದ್ಧಾಂತ ಬೋದಿಸುವ ಕೇಂದ್ರಗಳಾಗಿವೆ ಎಂದು ಅಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಶಿಕ್ಷಣ ತಜ್ಞರು ಹಾಗೂ ಹಲವು ಸಚಿವರು ಇಂದು ಖಂಡಿಸಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಕಲಿತ ಬಾಲಕರು ನಕ್ಸಲ್ ಸಿದ್ಧಾಂತ ಮತ್ತು ಹಿಂಸಾಚಾರದ ಮಾರ್ಗದತ್ತ ತೆರಳುತ್ತಿರುವುದರಿಂದ ಸರಕಾರ ಶಿಕ್ಷಣವನ್ನು ಖಾಸಗಿಕರಣಗೊಳಿಸಬೇಕು ಎಂದು ರವಿಶಂಕರ್ ಗುರೂಜಿ ನಿನ್ನೆ ಜೈಪುರ ಸಮೀಪದ ಶಾಲೆಯೊಂದರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತ ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದರಿಂದ ಅಂತಹ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಸರಕಾರ ನಡೆಸುತ್ತಿರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು ಎಂದು ಅವರು ಹೇಳಿದ್ದರು.
ರವಿಶಂಕರ್‌ರ ಈ ಹೇಳಿಕೆಯನ್ನು ವಿರೋಧಿಸಿ ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸ್ಥಳೀಯ ನಿವಾಸಿಗಳು ರವಿಶಂಕರ್‌ರ ಪ್ರತಿಕೃತಿಯನ್ನು ದಹಿಸಿ ಅವರ ಬೇಷರತ್ ಕ್ಷಮಾಪಣೆಗೆ ಆಗ್ರಹಿಸಿದರು.
ರಾಜಸ್ಥಾನದ ಶಿಕ್ಷಣ ಸಚಿವ ಬ್ರಿಜ್‌ಕಿಶೋರ್ ಶರ್ಮಾ ರವಿಶಂಕರ್‌ರ ಹೇಳಿಕೆ ದುರದೃಷ್ಟಕರ ಎಂದಿದ್ದರೆ, ಅವರ ಈ ಹೇಳಿಕೆಯನ್ನು ಖಂಡಿಸಿರುವ ಪಿಯುಸಿಎಲ್ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲು ಒತ್ತಾಯಿಸಿದೆ.
ಸರಕಾರದ ಒಳಗೆ ಮತ್ತು ಹೊರಗೆ ಉನ್ನತ ಸ್ಥಾನಗಳಲ್ಲಿರುವ ಮತ್ತು ಮಾಜಿ ರಾಷ್ಟ್ರಪತಿಗಳು ಸೇರಿದಂತೆ ಬಹಳಷ್ಟು ಜನರು ಸರಕಾರಿ ಶಾಲೆಗಳಲ್ಲಿ ಕಲಿತು ಬಂದವರಾಗಿದ್ದು, ಅವರನ್ನೆಲ್ಲಾ ನಕ್ಸಲೀಯರು ಎಂದು ಹೇಳಲು ಸಾಧ್ಯವೇ ಎಂದು ಕೇಂದ್ರದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ
0 comments:
Post a Comment