PLEASE LOGIN TO KANNADANET.COM FOR REGULAR NEWS-UPDATES


ಬಳ್ಳಾರಿ: ಪುಸ್ತಕ ಪ್ರಕಟಣೆ ಒಂದು ಉದ್ದಿಮೆಯೇನೋ ಸರಿ, ಆದರೆ ಅದನ್ನು ಓದುವ, ಅನುಭವಿಸುವ, ಚರ್ಚೆಗೆ ಒಳಪಡಿಸುವ ಸಂಗತಿ ಬಹುಮುಖ್ಯವಾಗಿದೆ ಎಂದು ಸಮಾಜವಿಜ್ಞಾನಿ ಡಾ ಟಿ ಆರ್ ಚಂದ್ರಶೇಖರ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಘವ ಕಲಾಮಂದಿರದಲ್ಲಿ ರವಿವಾರ ಸಂಜೆ ನಡೆದ ಚನ್ನಪಟ್ಟಣದ ಪಲ್ಲವ ಪ್ರಕಾಶನದ ೧೨ ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ಪುಸ್ತಕ ಪ್ರಕಟಣೆ ಒಂದು ಉದ್ದಿಮೆಯಾಗಿದೆ. ಕೇವಲ ಪುಸ್ತಕ ಪ್ರಕಟಿಸಿ ಗ್ರಂಥಾಲಯದಲ್ಲಿದ್ದರೆ ಉಪಯೋಗವಾಗುವುದಿಲ್ಲ. ಅದನ್ನು ಓದುವ, ಅನುಭವಿಸಿ, ಚರ್ಚೆಗೆ ಒಳಪಡಿಸಬೇಕಾಗಿದೆ. ಬಿಡುಗಡೆಯಾಗಿರುವ ೧೨ ಪುಸ್ತಕಗಳಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳಾದ ಕತೆ, ಕವನ, ವಿಮರ್ಶೆ, ಅನುವಾದಗಳಿವೆ. ಈ ಎಲ್ಲ ಕೃತಿಗಳ ಲೇಖಕರು ವಿವಿಧ ವೃತ್ತಿ, ಪ್ರವೃತ್ತಿ ಬೇರೆ ಬೇರೆ ವಲಯದಿಂದ ಬಂದವರಾಗಿದ್ದಾರೆ. ಆದರೆ ಅವರ ದನಿ ಮಾತ್ರ ಒಂದೇ. ಪ್ರತಿದಿನದ ಬದುಕಿನ ಜಂಜಡಗಳನ್ನು ಸಹಿಸಿಕೊಂಡು ತನ್ನದೇ ಆದ ರೀತಿಯಲ್ಲಿ ಜೀವಿಸುವ ಕ್ರಿಯೆ ಬಹುಮುಖ್ಯ. ಅದರ ವಿವಿಧ ಆಯಾಮಗಳು ಈ ಕೃತಿಗಳಲ್ಲಿ ಕಾಣಸಿಗುತ್ತದೆ. ನಾಡಿನಲ್ಲಿ ಹಲವು ಹೋರಾಟ, ಚಳವಳಿಗಳು ನಡೆಯುತ್ತಿವೆ. ಎಲ್ಲದಕ್ಕೂ ನೇರವಾಗಿ ಪಾಲ್ಗೊಳ್ಳದವರು ತಮ್ಮ ತಮ್ಮ ಬರೆವಣಿಗೆಗಳ ಮೂಲಕ ಹೋರಾಟದ ದನಿಯನ್ನು ಎತ್ತಿ, ಓದುಗರನ್ನು ಸಹ ಚಿಂತನೆಗೆ ಎಳೆದೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಮರ್ಶಕ ಡಾ ನಟರಾಜ ಹುಳಿಯಾರ್ ಮಾತನಾಡುತ್ತ, ಬರೆಯುವ ಬರೆಹಗಾರನಿಗೆ ಯಾವುದರಲ್ಲಿ ಸೃಜನಶೀಲತೆ ಇರುತ್ತವೆಯೋ ಅದೇ ಸಂದರ್ಭದಲ್ಲಿ ವಿಮರ್ಶೆ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಇತ್ತೀಚಿನ ಹೊಸ ತಲೆಮಾರಿನ ಬರೆಹಗಾರರು ಸಿನಿಕತೆಗೆ ಒಳಗಾಗಬಾರದು. ಪ್ರತಿ ಬರೆಯುವ ಸಂದರ್ಭದಲ್ಲಿ ಯಾವುದನ್ನು ತೆಗೆಯಬೇಕು, ಯಾವುದನ್ನು ಬಿಡಬೇಕೋ ಎನ್ನುವಲ್ಲಿಯೇ ವಿಮರ್ಶೆಯೂ ಇರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡರೆ ಒಳಿತು ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ಸಮೂಹ ಮಾಧ್ಯಮದಲ್ಲಿ ಸುಳ್ಳು, ಅಸತ್ಯಗಳು ಪ್ರತ್ಯಕ್ಷವಾಗುತ್ತಿವೆ. ಸಾಕಷ್ಟು ಎಚ್ಚರಿಕೆಯಿಂದ ಶಬ್ದಗಳ ಬಳಕೆಯನ್ನು ಮಾಡಬೇಕಾಗಿದೆ. ಇದರ ಕುರಿತು ಸಮಕಾಲೀನ ಸಾಹಿತ್ಯದಲ್ಲಿ ಸಾಕಷ್ಟು ಚರ್ಚೆಯಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಆರಂಭದಲ್ಲಿ ಅಮೃತವರ್ಷಿಣಿ ಉಪ್ಪಾರ, ಹರ್ಷ ಉಪ್ಪಾರ, ಸಂದೀಪ ಉಪ್ಪಾರ ಭಾವಗೀತೆಗಳನ್ನು ಹಾಡಿದರು. ಬಿಡುಗಡೆಯಾದ ಪುಸ್ತಕಗಳ ಲೇಖಕರು, ಆರ್ಥಿಕ ತಜ್ಞ ಬಿ ಶೇಷಾದ್ರಿ, ಇನ್ನೊಬ್ಬ ಅತಿಥಿಯಾಗಿ ಕತೆಗಾರ ಡಾ ಅಮರೇಶ ನುಗಡೋಣಿ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಪ್ರಸ್ತಾವನೆಯನ್ನು ಪ್ರಕಾಶಕ ವೆಂಕಟೇಶ, ನಿರೂಪಣೆಯನ್ನು ಡಾ ಅರುಣ ಜೋಳದ ಕೂಡ್ಲಿಗಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಪುಸ್ತಕಗಳ ಹೆಸರು ಹಾಗು ಲೇಖಕರು
ಗಾಳಿ ಬೆಳಕು, ಮಾಯಾ ಕಿನ್ನರಿ - ನಟರಾಜ ಹುಳಿಯಾರ, ನುಡಿದಂದುಗ  ಅಮರೇಶ ನುಗಡೋಣಿ, ಭಾಷೆ ಸಮಾಜ ಶಿಕ್ಷಣ  ಅಶೋಕ ಕುಮಾರ ರಂಜೇರೆ, ಉಸ್ರುಬುಂಡೆ  ಜ ನಾ ತೇಜಶ್ರೀ, ಕತೆಯೆಂಬ ಇರಿವ ಈ ಅಲಗು  ಮಂಜುನಾಥ ಲತಾ, ಕವಿತೆಯ ಕನಸು  ಎಚ್ ಬಿ ರವೀಂದ್ರ ಸಾಗರ, ದಲಿತ ಹೋರಾಟಗಾರ ಅಯ್ಯನ್ ಕಾಳಿ - ಬಿ ಸುಜ್ಞಾನಮೂರ್ತಿ, ಆಡು ಕಾಯೋ ಹುಡುಗನ ದಿನಚರಿ  ಟಿ ಎಸ್ ಗೊರವರ, ಈ ಲೋಕದ ಇನ್ನೊಂದು ಗಿಡ - ಶಿವರಾಜ ಬೆಟ್ಟದೂರು, ಲೋಹಿಯಾ ಮುಟ್ಟಿದ ಚಿಗುರು  ಎನ್ ಡಿ ತಿಪ್ಪೇಸ್ವಾಮಿ, ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು - ಸೈಫ್ ಜಾನ್ಸೆ ಕೊಟ್ಟೂರು



Advertisement

0 comments:

Post a Comment

 
Top