: ಪಟ್ಟು ಬಿಡದ ಯಡ್ಡಿ ಬಣ
ಬೆಂಗಳೂರು,ಮಾ,9: ರಾಜ್ಯ ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿ ಸ್ಧಾನ ಬೇಕೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಣ ಪಟ್ಟು ಹಿಡಿದಿದ್ದು, ಇದಕ್ಕೆ ತಿರುಗೇಟು ನೀಡಿರುವ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಸ್ಧಾನ ನೀಡಲು ಸಾಧ್ಯವೇ ಇಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಯಡಿ ಯೂರಪ್ಪ ಹಾಗೂ ವರಿಷ್ಠರ ನಡುವೆ ಮತ್ತೊಂದು ಸುತ್ತಿನ ನಿರ್ಣಾಯಕ ಹೋರಾಟಕ್ಕೆ ವೇದಿಕೆ ಅಣಿಯಾಗುತ್ತಿದೆ.
ಬೇಕಿದ್ದರೆ ಪಕ್ಷದಲ್ಲಿ ಸೂಕ್ತ ಸ್ಧಾನಮಾನ ನೀಡಬಹುದು. ಆದರೆ ಮುಖ್ಯಮಂತ್ರಿ ಮಾಡುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಹುದ್ದೆ ಪಡೆಯಲು ಇನ್ನಷ್ಟು ಸಮಯ ಕಾಯಬೇಕು ಎನ್ನುವ ಸಂದೇಶ ಯಡಿಯೂರಪ್ಪ ಪಾಳಯಕ್ಕೆ ಬಿತ್ತರಗೊಂಡಿದೆ. ಮುಖ್ಯಮಂತ್ರಿ ಹುದ್ದೆಗೆ ಗಡುವು ನೀಡಿದರೆ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ತಮ್ಮದು ರಾಷ್ಟ್ರೀಯ ಪಕ್ಷ. ತಮಗೆ ಗಡುವ ನೀಡುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಯಡಿಯೂರಪ್ಪ ಗುಂಪಿಗೆ ಕಟು ಎಚ್ಚರಿಕೆ ರವಾನೆಯಾಗಿದೆ. ಗೋವಾ ಮುಖ್ಯಮಂತ್ರಿಯಾಗಿ ಮನೋಹರ ಪಾರಿಕ್ಕರ್ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಣಜಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿಯವರು ಯಡಿಯೂರಪ್ಪ ಗುಂಪಿನ ಪ್ರಭಾಕರ ಕೋರೆ, ಉಮೇಶ್ ಕತ್ತಿ ಮತ್ತಿತರರನ್ನು ಕರೆಸಿಕೊಂಡು ಸದ್ಯಕ್ಕೆ ಸುಮ್ಮನಿರುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷ ತೊರೆಯುವ ಇಲ್ಲವೇ ಪರೋಕ್ಷವಾಗಿ ಹಾಕುವ ಬೆದರಿಕೆಗಳಿಗೆ ವರಿಷ್ಠರು ಮಣಿಯುವುದಿಲ್ಲ. ಮುಖ್ಯಮಂತ್ರಿ ಸ್ಧಾನ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವುದಾದರೆ ಯಡಿಯೂರಪ್ಪ ತನ್ನ ದಾರಿಯನ್ನು ನೋಡಿಕೊಳ್ಳಬಹುದು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆನ್ನಲಾಗಿದೆ.
ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ದಾಖಲಿಸಿದ್ದ ಎಫ್‌ಐಆರನ್ನು ಹೈಕೋರ್ಟ್ ರದ್ದುಗೊಳಿಸಿರಬಹುದು. ಹಾಗೆಂದು ಅವರ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇನ್ನೂ ಹಲವಾರು ಪ್ರಕರಣಗಳಿವೆ. ಹಾಗೊಂದು ವೇಳೆ ಅವರು ಮತ್ತೊಮ್ಮೆ ಜೈಲುಪಾಲಾದರೆ ತಾವು ಏನು ಮಾಡಬೇಕು ಎಂದು ವರಿಷ್ಠರು ಪ್ರಶ್ನಿಸಿದ್ದಾರೆ. ವಿಶ್ವಸನೀಯ ಮೂಲಗಳ ಪ್ರಕಾರ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಧಾನಕ್ಕಾಗಿ ತಿಪ್ಪರಲಾಗ ಹಾಕಿದರೂ ಸರಿಯೇ. ಅವರಿಗೆ ಆ ಹುದ್ದೆ ದೊರೆಯುವುದಿಲ್ಲ. ಇದಕ್ಕಾಗಿ ಸರಕಾರ ಪತನಗೊಂಡರೂ ಸರಿಯೇ ಅವರ ಬೇಡಿಕೆಗಳಿಗೆ ಮಣಿಯವುದಿಲ್ಲ ಎಂದು ನಾಯಕರು ಖಡಖ್ ಆಗಿ ಹೇಳಿದ್ದಾರೆನ್ನಲಾಗಿದೆ. ಸದಾನಂದಗೌಡರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ.
ಹಾಗೊಂದು ವೇಳೆ ಏಕಾಏಕಿ ಅವರನ್ನು ಪದಚ್ಯುತಗೊಳಿಸಿದರೆ ಪಕ್ಷದ ಕಾರ್ಯಕರ್ತರು ಏನೆಂದುಕೊಳ್ಳುತ್ತಾ? ತಾವು ಯಾವ ರೀತಿ ಸಮಜಾಯಿಷಿ ನೀಡಲು ಸಾಧ್ಯ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಬೇಕಿದ್ದರೆ ಪಕ್ಷ ಸಂಘಟಿಸಲು ಬೇಕಾದ ಸೂಕ್ತ ವ್ಯವಸ್ಧೆಯನ್ನು ಕಲ್ಪಿಸಲಾಗುವುದು. ಪಕ್ಷ ಕಟ್ಟಲು ಯಡಿಯೂರಪ್ಪ ಮುಂದಾಗಲಿ. ಅವರಿಂದಾಗಿ ಸಾಕಷ್ಟು ಸಮಸ್ಯೆಗಳು, ಮುಜುಗರಗಳನ್ನು ನಾವು ಎದುರಿಸಬೇಕಾಯಿತು ಎಂದು ಹೇಳಿರುವುದಾಗಿ ಇದೇ ಮೂಲಗಳು ಹೇಳಿವೆ. ಈ ಮಧ್ಯೆ ಮುಖ್ಯಮಂತ್ರಿ ಸದಾನಂದಗೌಡರಿಗೆ ಪಕ್ಷದ ವರಿಷ್ಠರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದ್ದು, ಮಾರ್ಚ್ 21ರಂದು ನಿವೇ ಬಜೆಟ್ ಮಂಡಿಸಬೇಕು. ಹಿಂದೆ ಅವರ ತಾವಿದ್ದೇವೆ. ಸೂಕ್ತ ಸಿದ್ಧತೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದಾಗಿ ಯಾರು ಮುಂಗಡಪತ್ರ ಮಂಡಿಸುತ್ತಾರೆ ಎನ್ನುವ ಗೊಂದಲ ಸಧ್ಯಕ್ಕೆ ಬಗೆಹರಿದಿದ್ದು, ಇದು ಯಡ್ಡಿ ಪಾಳಯಕ್ಕೆ ಮರ್ಮಾಘಾತವಾಗಿ ಪರಿಣಮಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಸದಾನಂದ ಗೌಡರಿಗೆ ಈ ಸಂದೇಶ ರವಾನಿಸಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಬಣ ವರಿಷ್ಠರ ಮೇಲೆ ಒತ್ತಡ ತಂತ್ರ ಮುಂದುವರಿಸಿದ್ದು, ಹುಬ್ಬಳ್ಳಿ ಸಮಾವೇಶಕ್ಕೆ ಹೆಚ್ಚಿನ ಒತ್ತು ನೀಡಿದೆ. ಹುಬ್ಬಳ್ಳಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಅದು ಮುಂದಾಗಿದೆ. ಇದರ ಜೊತೆಗೆ ಮಾರ್ಚ್ 13ರ ನಂತರ ಆಕ್ರಮಣಕಾರಿ ಹೋರಾಟಕ್ಕೆ ಚಾಲನೆ ನೀಡಲು ಯಡಿಯೂರಪ್ಪ ಗುಂಪು ನಿರ್ಧರಿಸಿದ್ದು ಇದಕ್ಕಾಗಿ ಶಾಸಕರ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ಮಗ್ನವಾಗಿದೆ
0 comments:
Post a Comment