ರೋಟರಿ ಗವರ್ನರ್ ಆನಂದರಾವ್
ಕೊಪ್ಪಳ ಮಾ. ೨೦ (ಕ.ವಾ): ಆರೋಗ್ಯ ಕ್ಷೇತ್ರವೂ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರೋಟರಿ ಕ್ಲಬ್ ಸೇವೆ ಉತ್ತಮವಾಗಿದ್ದು, ರೋಟರಿಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಬಿ.ಎಲ್. ಆನಂದರಾವ್ ಅವರು ಹೇಳಿದರು.
ಕೊಪ್ಪಳದ ಭಾಗ್ಯನಗರ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಜಿಲ್ಲೆ ೩೧೬೦ದ ಜಿಲ್ಲಾ ಗವರ್ನರ್ ರಾದ ಬಿ.ಎಲ್.ಆನಂದರಾವ್ ರವರು ರೋಟರಿ ಸದಸ್ಯರರನ್ನುದ್ದೇಶಿಸಿ ಮಾತನಾಡಿ ಕೊಪ್ಪಳದಲ್ಲಿ ಸಂಸ್ಥೆಯ ಸದಸ್ಯತ್ವವನ್ನು ಹೆಚ್ಚಿಸಿ ಬಲಪಡಿಸಬೇಕೆಂದು ಕರೆ ನೀಡಿದರು. ಜಗತ್ತಿನ ೨೦೦ಕ್ಕಿಂತ ಹೆಚ್ಚು ದೇಶಗಳಲ್ಲಿ ರೋಟರಿ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಎಲ್ಲ ರಾಷ್ಡ್ರಗಳಿಂದ ಹಾಗೂ ಜಾಗತಿಕ ಸಂಸ್ಥೆಗಳಿಂದ ಮಾನ್ಯತೆ ಪಡೆದಿದೆ. ರೋಟರಿ ಫೌಂಡೇಷನ್ ಸಂಸ್ಥೆಯು ಅತಿ ದೊಡ್ಡ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ. ಹೀಗಾಗಿ ಜಗತ್ತಿನ ಶ್ರೀಮಂತರಾದ ಬಿಲ್ ಗೇಟ್ ರೋಟರಿ ಫೌಂಡೇಶನ್ನಿನ ಸೇವಾ ಕಾರ್ಯಗಳಿಗೆ ವಿಶೇಷವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಉದಾರವಾಗಿ ಹಣ ನೀಡಿದ್ದಾರೆ. ಹೀಗೆ ನೀಡಿದ ಹಣ ಎಲ್ಲಿಯೂ ದುರುಪಯೋಗವಾಗುವದಿಲ್ಲವೆಂದು ಅವರಿಗೆ ವಿಶ್ವಾಸವಿದೆ. ಇಂತಹ ವಿಶ್ವಾಸಾರ್ಹ ಸಂಸ್ಥೆಯ ಸದಸ್ಯರಾದ ನಾವು ಹೆಮ್ಮೆ ಪಡಬೇಕು ಹಾಗೂ ಈ ಸಂಸ್ಥೆಯನ್ನು ಬಲಪಡಿಸುವದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.
ಕೊಪ್ಪಳ ಕ್ಲಬ್ಬಿನ ಸದಸ್ಯರು ಹಾಗೂ ಮಾಜಿ ಜಿಲ್ಲಾ ಗವರ್ನರ್ ಡಾ. ಕೆ,ಜಿ.ಕುಲಕರ್ಣಿಯವರು ಮಾತನಾಡಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಾಗತಿಕ ಮಟ್ಟದಲ್ಲಿ ಯಶಸ್ಸನ್ನು ಕಂಡ ರೋಟರಿ ಸಂಸ್ಥೆಯು ಸಾಮಾಜಿಕ ಆರೋಗ್ಯದ ಇನ್ನೊಂದು ಬೃಹತ್ ಸಮಸ್ಯೆ ಆಗಿರುವ ಕ್ಷಯ ರೋಗ ನಿವಾರಣೆಗಾಗಿ ಯೋಜನೆ ರೂಪಿಸಿದೆ. ಈ ಯೋಜನೆಯ ಪ್ರಕಾರ ಎಲ್ಲಾ ರೋಟರಿ ಸದಸ್ಯರು ಆಯಾ ಪ್ರದೇಶದ ಸರ್ಕಾರಿ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳ ಸಂಗಡ ಚರ್ಚಿಸಿ ಯೋಜನೆಯ ರೂಪುರೇಷೆಗಳನ್ನು ತಿಳಿದುಕೊಂಡು ಅವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. "ಡಾಟ್" ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೋಟರಿ ಸದಸ್ಯರು ಕೆಲಸ ಮಾಡಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಇದಲ್ಲದೆ ಕ್ಷಯ ರೋಗಿಗಳಿಗೆ ಅವಶ್ಯವಿರುವ ಪೂರಕ ಔಷಧಗಳನ್ನು ನೀಡುವ ಪ್ರಯತ್ನ ಮಾಡಬೇಕು. ರೋಗಿಗಳ ಸಮಾಲೋಚನಾ ಕಾರ್ಯಕ್ರಮ ಹಾಗೂ ಜಾಗೃತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದೇ ತಿಂಗಳು ಮಾರ್ಚ ೨೪ ರಂದು ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬೃಹತ್ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಕ್ಲಬ್ ಅಧ್ಯಕ್ಷ ನೀಲಪ್ಪ ಭಾವಿಕಟ್ಟಿಯವರು ಸ್ವಾಗತ ಮಾಡಿ ೨೦೧೧-೧೨ನೇ ವರ್ಷದಲ್ಲಿ ಕ್ಲಬ್ಬಿನ ಪರವಾಗಿ ಕೈಗೊಂಡ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸರ್ಕಾರಿ ನೌಕರರ ಹಿರಿಯರ ಷಟಲ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಸತತವಾಗಿ ಎರಡು ವರ್ಷ ಪ್ರತಿನಿಧಿಸಿರುವ ಕ್ಲಬ್ಬಿನ ಸದಸ್ಯರಾದ ವೀರಣ್ಣ ಕಮತರ ಇವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿಗೆ ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಿದ ಡಾ.ಚಂದ್ರಯ್ಯ ವಿರಕ್ತಮಠರವರನ್ನು ಗೌರವಿಸಲಾಯಿತು. ನಗರದ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀ ಕೆ,ಎಮ್.ಸೈಯದ್ ಮತ್ತು ಖ್ಯಾತ ಮಕ್ಕಳ ತಜ್ಞರಾದ ಡಾ.ಮಹೇಶ ಭಗವತಿ ಅವರನ್ನು ಕ್ಲಬ್ಬಿನ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು.
ರೋಟರಿ ಜಿಲ್ಲೆಯ ಪ್ರಥಮ ಮಹಿಳೆ ರಮಾ ಆನಂದರಾವ್ , ಜಿಲ್ಲಾ ಪ್ರಧಾನಕಾರ್ಯದರ್ಶಿ ಮೈನುದ್ದೀನ್ ಹಾಗೂ ಕ್ಲಬ್ಬಿನ ಕಾರ್ಯದರ್ಶಿ ಪ್ರಶಾಂತ ಭಾಗವಹಿಸಿದ್ದರು.
0 comments:
Post a Comment