ಇಂದು 10 ಮಂದಿ ಸಂಸದರು ದಿಲ್ಲಿಗೆ ♦ ಸಂಜೆಯೊಳಗೆ ರಾಜಕೀಯ ಚಿತ್ರಣವೇ ಬದಲಾಗುವ ಮುನ್ಸೂಚನೆ ♦ಸ್ಥಾನ ನೀಡಿ ಇಲ್ಲವೇ ಪರಿಣಾಮ ಎದುರಿಸಿ ಎಂದ ಯಡಿಯೂರಪ್ಪ ಬೆಂಬಲಿಗರು ♦ ಕೊನೆಯ ಕ್ಷಣದ ಸರ್ಕಸ್‌ಗೆ ಸಿದ್ಧತೆ
ಬೆಂಗಳೂರು, ಮಾ.18: ಸೋಮವಾರ ಸಂಜೆಯೊಳಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ರಾಜ್ಯದಲ್ಲಿ ಮುಂದೆ ನಡೆಯುವ ಎಲ್ಲ ಅನಾಹುತಗಳಿಗೆ ಬಿಜೆಪಿ ಹೈಕಮಾಂಡ್ ನೇರ ಹೊಣೆಯಾಗಲಿದೆ ಎಂದು ತುಮಕೂರಿನ ಸಂಸದ ಹಾಗೂ ಯಡಿಯೂರಪ್ಪರ ಆಪ್ತರೂ ಆಗಿರುವ ಬಸವರಾಜ್ ಎಚ್ಚರಿಸಿದ್ದಾರೆ.
ಯಡಿಯೂರಪ್ಪರ ರೇಸ್‌ಕೋರ್ಸ್‌ನಲ್ಲಿರುವ ನಿವಾಸದಲ್ಲಿ ಇಂದು ಹಲವು ಸುತ್ತಿನ ಸಮಾಲೋಚನೆ ಸಭೆ ನಡೆದಿದ್ದು, ಸಂಜೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ನಾಳೆ ಬೆಳಗ್ಗೆ ರಾಜ್ಯದ 10 ಮಂದಿ ಸಂಸದರು ದಿಲ್ಲಿಗೆ ತೆರಳಲಿದ್ದೇವೆ. ಸಂಜೆಯೊಳಗೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಲಿದೆ, ನೀವು ಕಾದು ನೋಡಿ ಎಂದರು.
ಯಡಿಯೂರಪ್ಪರಿಗೆ ಅಧಿಕಾರ ನೀಡಬೇಕು, ಅವರಿಂದಲೇ ಬಜೆಟ್ ಮಂಡನೆಯಾಗಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ತಾವಿಡಲಿದ್ದೇವೆ. ಕೇವಲ ಸಂಸದರು ಮಾತ್ರ ದಿಲ್ಲಿಗೆ ಹೋಗಲಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ರಾಜ್ಯದಲ್ಲಿ ನಡೆಯಲಿರುವ ಎಲ್ಲ ಅನಾಹುತಗಳಿಗೆ ಹೈಕಮಾಂಡ್ ನೇರ ಹೊಣೆಯಾಗಲಿದೆ ಎಂದು ಕಟ್ಟೆಚ್ಚರದ ಮಾತುಗಳನ್ನಾಡಿದರು.
ನಾವು 10 ಮಂದಿ ಸಂಸದರು ಯಡಿ ಯೂರಪ್ಪರೊಂದಿಗಿದ್ದೇವೆ. ಅವರ ಪರವಾಗಿಯೇ ನಾವು ಒತ್ತಡಹೇರುತ್ತೇವೆ. ಒಂದು ವೇಳೆ ಸಂಜೆ ಯೊಳಗೆ ಸದಾನಂದ ಗೌಡರನ್ನು ಪದಚ್ಯುತಿಗೊಳಿಸಿ ಯಡಿಯೂರಪ್ಪರಿಗೆ ಅಧಿಕಾರ ನೀಡದಿದ್ದರೆ ಮುಂದೆ ಪಕ್ಷಕ್ಕಾಗುವ ತೊಂದರೆ, ರಾಜ್ಯ ಸರಕಾರಕ್ಕಾಗುವ ಸಮಸ್ಯೆ, ಪಕ್ಷ ಇಬ್ಭಾಗವಾಗಿ ಅನಾಹುತ ಸಂಭವಿಸಿದರೆ ಅದಕ್ಕೆ ಬಿಜೆಪಿಯ ಹೈಕಮಾಂಡೇ ನೇರ ಹೊಣೆಯಾಗಲಿದೆ ಎಂಬ ಎಚ್ಚರಿಕೆಯನ್ನು ರವಾನಿಸಿದರು.
ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ಯಡಿಯೂರಪ್ಪ. ಈಗ ಅವರು ತಮ್ಮ ಮಾತು ತಪ್ಪಿದ್ದಾರೆ. ಜೊತೆಗೆ ಹೈಕಮಾಂಡ್ ಕೂಡಾ ತಮ್ಮ ಭರವಸೆಯನ್ನು ಈಡೇರಿಸಿಲ್ಲ. ಯಡಿಯೂರಪ್ಪರ ಪರ ಒಲವು ತೋರದಿದ್ದರೆ ಮುಂದಿನ ರಾಜಕೀಯ ಆಗುಹೋಗುಗಳಿಗೆ, ರಾಜ್ಯದಲ್ಲಿ ಪಕ್ಷದ ಮೇಲಾಗುವ ಎಲ್ಲ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಎಲ್ಲ ವಿಷಯಗಳನ್ನು ನಾವು ಹೈಕಮಾಂಡ್ ಮುಂದಿಡುತ್ತೇವೆ ಎಂದು ಹೇಳುವ ಮೂಲಕ ಬಸವರಾಜ್, ಬೇಡಿಕೆ ಈಡೇರದಿದ್ದರೆ ತಾವು ಪಕ್ಷವನ್ನು ಒಡೆಯುವ ಮುನ್ಸೂಚನೆಯನ್ನು ನೀಡಿದರು.
ರಾಜ್ಯ ಬಿಜೆಪಿಯೊಳಗೆ ಒಂದು ವಾರದಿಂದ ನಡೆಯುತ್ತಿರುವ ಗೊಂದಲ, ಬಿಕ್ಕಟ್ಟನ್ನು ಹೈಕಮಾಂಡ್ ವರಿಷ್ಠರಾದ ನಿತಿನ್ ಗಡ್ಕರಿ, ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್‌ರನ್ನು ಭೇಟಿಯಾಗಿ ಒತ್ತಡ ಹೇರಲು ಯಡಿಯೂರಪ್ಪ ಪರವಿರುವ ಎಲ್ಲ ಸಂಸದರು ನಿರ್ಧರಿಸಿದ್ದು, ಬೆಳಗ್ಗೆ ದಿಲ್ಲಿಗೆ ಹೋಗುತ್ತೇವೆ. ಅವರೊಂದಿಗೆ ಚರ್ಚೆ ಮಾಡಿ ನಮ್ಮ ಬೇಡಿಕೆಗಳನ್ನು ಅವರ ಮುಂದಿಡುತ್ತೇವೆ. ಸಂಜೆಯೊಳಗೆ ಈ ಸಂಬಂಧ ಬೇಡಿಕೆ ಈಡೇರದಿದ್ದರೆ ಮುಂದೆ ರಾಜ್ಯದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ಹೈಕಮಾಂಡ್ ಹೊಣೆಯಾಗಲಿದೆ ಎಂದರು.
ಯಡಿಯೂರಪ್ಪರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಣತಂತ್ರ ರೂಪಿಸುವುದಕ್ಕಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪರ ನಿವಾಸದಲ್ಲಿ ಇಂದು ಬೆಳಗ್ಗೆಯಿಂದಲೇ ಕಾರ್ಯಚಟುವಟಿಕೆ ಭರದಿಂದ ನಡೆದಿದೆ.
ಯಡಿಯೂರಪ್ಪ ತಮ್ಮ ಆಪ್ತ ಸಚಿವ, ಶಾಸಕರು, ನಾಯಕರೊಂದಿಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದು, ಬಳಿಕ ಬೆಂಬಲಿಗ ಶಾಸಕರೊಂದಿಗೆ ನಾಳೆ ದಿಲ್ಲಿಗೆ ಹೋಗಲು ನಿರ್ಧರಿಸಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಿ, ಕೇವಲ ಸಂಸದರು ಮಾತ್ರ ದಿಲ್ಲಿಗೆ ತೆರಳಿ ಹೈಕಮಾಂಡ್ ಮುಂದೆ ಒತ್ತಡ ಹೇರಲು ನಿರ್ಧರಿಸಲಾಯಿತು
0 comments:
Post a Comment