ಬೆಂಗಳೂರು, ಮಾ.26: ರಾಜ್ಯದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ, ಪ್ರತಿಭಾವಂತರಿರುವ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನೂರಾರು ವರ್ಷಗಳಿಂದ ಪಂಕ್ತಿಭೇದ ಹಾಗೂ ಮಡೆಸ್ನಾನದಂತಹ ಅಸಹ್ಯಕರ ಪದ್ಧತಿಗಳನ್ನು ಮುಂದುವರಿಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಎಡೆಯೂರು ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಸ್ವಾಂತತ್ರ ಉದ್ಯಾನವನದಲ್ಲಿ ನಿಡುಮಾಮಿಡಿ ಮಹಾಸಂಸ್ಥಾನ ಮಠ ಹಾಗೂ ಮಾನವಧರ್ಮ ಪೀಠಗಳ ವತಿಯಿಂದ ಏರ್ಪಡಿಸಿದ್ದ ಜನರ ವಿಮೋಚನೆಗಾಗಿ ‘ಮಡೆಸ್ನಾನ ಮತ್ತು ಪಂಕ್ತಿಭೇದದ ನಿಷೇಧಕ್ಕೆ ಒತ್ತಾಯ’ ಎಂಬ ಚಿಂತನಶೀಲ ಮಠಾಧೀಶರ ಮತ್ತು ಸಾಧಕರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ವಿದ್ಯಾವಂತರಿದ್ದಲ್ಲಿ ವೌಢ್ಯ, ಮೂಢನಂಬಿಕೆಗಳಿಗೆ ಅವಕಾಶಗಳಿರಬಾರದು. ಆದರೆ ಅದೇ ಜಿಲ್ಲೆಯ ಮುಖ್ಯಮಂತ್ರಿಗಳು ತಮ್ಮ ಹುಟ್ಟೂರಲ್ಲಿ ಭೂತಕ್ಕೆ ಕೋಳಿಯನ್ನು ಬಲಿ ಕೊಡುವ ಮೂಲಕ ವೌಢ್ಯವನ್ನು ಬೆಂಬಲಿಸಿದ್ದಕ್ಕೆ ಅವರು ವಿಷಾದ ವ್ಯಕ್ತ ಪಡಿಸಿದರು.
ಭಾರತ ಬಹು ಭಾಷೆ, ಬಹು ಜಾತಿ, ಬಹು ಸಂಸ್ಕೃತಿಗಳ ನಾಡಾಗಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಭಾರತದ ಘನತೆಯನ್ನು ಎತ್ತಿ ಹಿಡಿಯಲಾಗಿದೆ. ಆದರೂ ಕೂಡ ಅದರಲ್ಲಿ ಕೆಲವು ವೈರುಧ್ಯಗಳಿದ್ದು, ಒಂದೆಡೆ ಹೆಣ್ಣನ್ನು ಮಾತೆ, ದೇವತೆ ಎಂದೆಲ್ಲಾ ಪೂಜಿಸಿ ಮತ್ತೊಂದೆಡೆ ಅದೇ ಹೆಣ್ಣಿಗೆ ಸ್ವಾತಂತ್ರವಿಲ್ಲ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳುವ ಮೂಲಕ ಮಹಿಳೆಯರನ್ನು ಶೋಷಿಸಲಾಗುತ್ತಿದೆ. ಇಂದಿಗೂ ಕೂಡ ಶಿಶು ಹತ್ಯೆ, ನರಬಲಿ, ದೇವದಾಸಿ ಪದ್ಧತಿ ಮುಂತಾದ ವೌಢ್ಯಾಚಾರಣೆಗಳನ್ನು ನಿಷೇಧಿಸಿದ್ದರೂ ಇಂದೂ ಕೂಡ ಅವು ಮುಂದುವರಿದಿವೆ. ಅಸ್ಪಶತೆಯಂತಹ ಕ್ರೂರ ಆಚರಣೆಯು ನಮ್ಮಲ್ಲಿ ಇಂದಿಗೂ ಚಾಲ್ತಿಯಲ್ಲಿದ್ದು, ವರ್ಣಭೇದ ನೀತಿಗಿಂತ ಕ್ರೂರ ಆಚರಣೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮಲ್ಲಿ ಶ್ರೇಷ್ಠ ಸಂವಿಧಾನ ವ್ಯವಸ್ಥೆ ಜಾರಿಯಲ್ಲಿದ್ದು, ಸಮಾಜದ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ದೇಶ ಪ್ರಗತಿಯತ್ತ ಸಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಮಡೆಸ್ನಾನ ಹಾಗೂ ಪಂಕ್ತಿಭೇದದ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥರ ದ್ವಿಮುಖ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಜನರ ತೆರಿಗೆಯ ಹಣವನ್ನು ಪಡೆದ ಮಠಗಳು ಪಂಕ್ತಿಭೇದ, ಮಡೆಸ್ನಾನ ಮುಂತಾದ ನೀಚ ಪದ್ಧತಿಗಳನ್ನು ಪೋಷಿಸುತ್ತಿರುವುದನ್ನು ಖಂಡಿಸಿದರು. ಪಂಕ್ತಿ ಭೋಜನವು ಜನರ ಹಕ್ಕಾಗಿದ್ದು, ಅದಕ್ಕೆ ಎಲ್ಲಾ ವರ್ಗದವರಿಗೂ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು. ನಾವೆಲ್ಲಾ ಸ್ವಾಮೀಜಿಗಳಾದರೂ ನಮ್ಮೆಲ್ಲರ ಧೋರಣೆಗಳು ಎಡಪಂಥೀಯವೇ ಆಗಿವೆ. ಉತ್ತರ ಧೃವದಿಂದ ದಕ್ಷಿಣ ಧೃವಕ್ಕೆ ಬದಲಾವಣೆಯ ಚುಂಬಕ ಗಾಳಿಯು ಬೀಸುತ್ತಿದೆ.
ಆದ್ದರಿಂದ ಸಮಾಜದಲ್ಲಿರುವ ಎಲ್ಲಾ ಮೂಢನಂಬಿಕೆಗಳನ್ನು ಅಳಿಸಿ ಹಾಕಲು ಸರಕಾರ ಒಂದು ಆಯೋಗವನ್ನು ರಚಿಸಬೇಕು. ಆ ಮೂಲಕ ಮೂಢನಂಬಿಕೆಗಳ ಆಚರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸಾಣೆಹಳ್ಳಿ ಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, 12ನೇ ಶತಮಾನದಲ್ಲೇ ಶರಣರು ವೌಢ್ಯಗಳನ್ನು ವಿರೋಧಿಸಿದ್ದರು. ವೈದಿಕ ಪರಂಪರೆಯೇ ವೌಢ್ಯಗಳ ತಾಯಿ ಬೇರು. ಅಜ್ಞಾನ ಇರುವೆಡೆ ವೌಢ್ಯಗಳು ಬೆಳೆಯಬೇಕು. ಆದರೆ ಇಂದು ಜ್ಞಾನಿಗಳ ನಡುವೆಯೇ ವೌಢ್ಯಗಳು ಬೆಳೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಕೀಯದ ಉನ್ನತ ಸ್ಥಾನದಲ್ಲಿರುವವರೇ ವೌಢ್ಯದಲ್ಲಿದ್ದರೆ ಜನರ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದ ಶ್ರೀಗಳು, ಮೊದಲು ಮುಖ್ಯಮಂತ್ರಿಯವರು ವೌಢ್ಯಗಳ ವಿರುದ್ಧ ಬಂಡಾಯ ಏಳುವುದನ್ನು ಬೆಳೆಸಿಕೊಳ್ಳಬೇಕು. ಹೋಮ, ಹವನಗಳಿಂದ ಯಾರಿಗೂ ಒಳ್ಳೆಯದಾಗದು. ಜನರ ನೋವು, ಸಮಸ್ಯೆ ನಿವಾರಣೆಗಿಂತ ದೊಡ್ಡ ಹೋಮ ಮತ್ತೊಂದಿಲ್ಲ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಧರ್ಮಗಳ ತಳಹದಿಯ ಮೇಲೆ ರಾಜಕೀಯ ನಡೆಯಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಬೆರೆಯಬಾರದು. ವೌಢ್ಯ ಕಂದಾಚಾರಗಳ ವಿರುದ್ಧದ ಹೋರಾಟವೆಂದರೆ ಪ್ರವಾಹದ ವಿರುದ್ಧ ಈಜಿದಂತೆ. ಕಾನೂನು, ಜನಜಾಗೃತಿ ಹಾಗೂ ಹೋರಾಟಗಳ ಮೂಲಕ ಸಮಾಜದಲ್ಲಿರುವ ಕಂದಾಚಾರಗಳನ್ನು ತೊಡೆದು ಹಾಕಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಶರಣರು 12ನೇ ಶತಮಾನದಲ್ಲೇ ಪಂಕ್ತಿ ಭೇದವನ್ನು ವಿರೋಧಿಸಿದ್ದರು. ಇಂದಿಗೂ ಕೂಡ ಪಂಕ್ತಿ ಭೇದ, ಮಡೆಸ್ನಾನದಂತಹ ಅಮಾನುಷ ಪದ್ಧತಿಗಳು ಜಾರಿಯಲ್ಲರಿವುದು ಆತ್ಮ ವಂಚನೆ ಹಾಗೂ ದೈವ ದ್ರೋಹ ಎಂದು ಇದೇ ವೇಳೆ ಪಂಡಿತಾರಾಧ್ಯ ಶ್ರೀಗಳು ಕಿಡಿಗಾರಿದರು. ಸಮಾವೇಶದಲ್ಲಿ ಮಡೆಸ್ನಾನ ಮತ್ತು ಪಂಕ್ತಿಭೇದ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅಕ್ಕ ಅನ್ನಪೂರ್ಣರವರು, ಚಿಕ್ಕಂದಿನಲ್ಲಿ ಹೊಂಡದಲ್ಲಿ ಮುಳುಗುತ್ತಿದ್ದಾಗ ಹರಿಜನ ವ್ಯಕ್ತಿಯಿಂದ ಬದುಕಿದ ಪೇಜಾವರ ಶ್ರೀ ಮಡೆಸ್ನಾನ ನಿಷೇಧಕ್ಕೆ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಹರಿಜನರ ಋಣ ತೀರಿಸಲಿ ಎಂದು ಛೇಡಿಸಿದರು.
ಸಮಾವೇಶದ ಪ್ರಾಸ್ತಾವಿಕ ನಡಿಗಳನ್ನು ಆಡಿದ ನಿಡುಮಾಮಿಡಿ ಮಠ ಹಾಗೂ ಮಾನವಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೆಲವರು ಧರ್ಮದ ಹೆಸರಲ್ಲಿ ಅಧರ್ಮ ಮಾಡುತ್ತಾ, ಧರ್ಮ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುವ ಮೂಲಕ ಸಂವಿಧಾನಕ್ಕಿಂತ ಸಂಪ್ರದಾಯ ಶ್ರೇಷ್ಠ ಎಂಬುದನ್ನು ಸಾರಲು ಹೊರಟಿದ್ದಾರೆ . ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದುದಾಗಿದ್ದು, ಅದಕ್ಕಿಂತ ಮಿಗಲಾದ ಧರ್ಮ, ಸಂಪ್ರದಾಯ, ಶಾಸ್ತ್ರಗಳು ಯಾವೂದೂ ಇಲ್ಲ ಎಂದು ಗಂಟಾಘೋಷವಾಗಿ ಸಾರಿದರು. ಸರಕಾರಗಳೂ ಕೂಡ ಬಹುಜನರ ಆತ್ಮಗೌರವಕ್ಕೆ ಬೆಲೆ ಕೊಡದೆ, ಕೆಲವರ ಹೆಚ್ಚುಗಾರಿಕೆಯನ್ನು ಪ್ರತಿಷ್ಠಾಪಿಸಲು ಪ್ರೋತ್ಸಾಹ ನೀಡುತ್ತಿರುವುದನ್ನು ಖಂಡಿಸಬೇಕು. ಬಹುಜನರ ಆಶಯಕ್ಕೆ, ಸಂವಿಧಾನದ ಆಶಯಕ್ಕೆ ಚ್ಯುತಿ ತರುತ್ತಿರುವ ಮಡೆಸ್ನಾನ ಹಾಗೂ ಪಂಕ್ತಿಭೇದವನ್ನು ಕೂಡಲೇ ನಿಷೇಧಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಈ ಬಗ್ಗೆ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಜನ ಜಾಗೃತರಾಗಿದ್ದಾರೆ. ಪುರೋಹಿತಶಾಹಿಗಳು ಈಗಲೂ ಜನರನ್ನು ಆಳಲು ಹೊಸ ಸಂಚುಗಳನ್ನು ರೂಪಿಸುತ್ತಿವೆ. ಆದ್ದರಿಂದ ಇಂತಹ ವೌಢ್ಯಾಚರಣೆಗಳ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮಗುರುಗಳು ಸೇರಿ ಸರಕಾರದ ವಿರುದ್ಧ ಹೋರಾಡುವ ಕಾಲ ಬಂದೀತು ಎಂದು ಎಚ್ಚರಿಸಿದರು. ವೇದಿಕೆಯಲ್ಲಿ ಒಕ್ಕಲಿಗರ ಮಹಾಸಂಸ್ಥಾಮಠದ ಚಂದ್ರಶೇಖರನಾಥ ಸ್ವಾಮೀಜಿ, ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಸೇರಿದಂತೆ ನೂರಾರು ಧರ್ಮಗರುಗಳೂ, ಗುರು ಭದ್ರೇಶ್ವರ ಚೌಕಿಮಠದ ಮಾತೆ ಮೈತ್ರಾದೇವಿ, ಕದಳಿವನ ಮಠದ ಮಹಾದೇವಿ ಅಕ್ಕ ಸೇರಿದಂತೆ ಹಲವು ಮಹಿಳಾ ಧರ್ಮಗುರುಗಳು ಉಪಸ್ಥಿತರಿದ್ದರು.
ಎರಡು ತಿಂಗಳಲ್ಲಿ ಸಂಪೂರ್ಣ ನಿಷೇಧ
ಬೆಂಗಳೂರು, ಮಾ.26: ಮಡೆಸ್ನಾನ ಪದ್ಧತಿಯನ್ನು ಎರಡು ತಿಂಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಕುರಿತು ಕಾಯ್ದೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಠಾಧೀಶರಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮಡೆಸ್ನಾನದ ಪರವಾಗಿರುವವರ ಜೊತೆಯೂ ಚರ್ಚೆ ನಡೆಸಿ ಇನ್ನು ಎರಡು ತಿಂಗಳಲ್ಲಿ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಹೇಳಿದರು. ಸಿಎಂರೊಂದಿಗೆ ಕಾನೂನು ಸಚಿವ ಸುರೇಶ್ ಕುಮಾರ್ ಹಾಜರಿದ್ದರು.
0 comments:
Post a Comment