PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,ಮಾ.26:2ಜಿ ತರಂಗಗುಚ್ಛ ಹಗರಣ(1.76ಲಕ್ಷ ಕೋಟಿ ರು.)ವನ್ನು ನಿವಾಳಿಸಿ ಬಿಸಾಕುವಂತಹ ಭಾರೀ ಹಗರಣ ಕರ್ನಾಟಕದಲ್ಲಿ ಬಯಲಾಗಿದೆ.ಭಾರತದ ಸ್ವಾತಂತ್ರ್ಯದ ನಂತರ ರಚಿಸಲಾಗಿರುವ ಕರ್ನಾಟಕ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಲ್ಲಿ 2ಲಕ್ಷ ಕೋಟಿ ರು.ಗೂ ಹೆಚ್ಚಿನ ಸ್ತಿಯನ್ನು ಕಬಳಿಸಿ ಹಾಕಲಾಗಿದೆ ಎಂಬ ವರದಿ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿಯ ದುರುಪಯೋಗದ ಅಧ್ಯಯನ ನಡೆಸಲು ರಚಿಸಲಾಗಿದ್ದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರು ತನಿಖೆ ನಡೆಸಿ,8ಸಾವಿರ ಪುಟಗಳ ವಿಶೇಷ ವರದಿಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸೋಮವಾರ ನೀಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ವರದಿಯಲ್ಲಿ ರೋಷನ್ ಬೇಗ್,ಖಮರುಲ್ ಇಸ್ಲಾಂ,ಸಿಎಂ ಇಬ್ರಾಹಿಂ,ಎಎಂ ಹಿಂಡಸಗೇರಿ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖ ನಾಯಕರ ಹೆಸರುಗಳು ಪ್ರಸ್ತಾಪವಾಗಿದ್ದು,ವಿರೋಧ ಪಕ್ಷಗಳನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ.ಭೂ ಹಗರಣಗಳಲ್ಲಿ ಕಳಂಕ ಅಂಟಿಸಿಕೊಂಡಿದ್ದ ಬಿಜೆಪಿಗೆ ವಿರೋಧ ಪಕ್ಷಗಳ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.

ಭೂ ಕಬಳಿಕೆ ಕುರಿತಂತೆ 1,800ದೂರುಗಳ ಬಂದಿದ್ದ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಸಮಿತಿ ರಚಿಸಲಾಗಿತ್ತು.ಅಧ್ಯಯನದ ಪ್ರಕಾರ,ಶೇ.50ರಷ್ಟು ಭೂಮಿಯನ್ನು ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.ಸುಮಾರು 54ಸಾವಿರ ಎಕರೆಗಳಲ್ಲಿ ಇರುವ 4.10ಲಕ್ಷ ಕೋಟಿ ರು.ನಷ್ಟಿರುವ ಆಸ್ತಿಯ ಅರ್ಧಕ್ಕೂ ಹೆಚ್ಚು ಭಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಕೆಲವರು ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ತಮ್ಮ ವಶ ಮಾಡಿಕೊಂಡಿದ್ದರೆ,ಕೆಲವರು ತಮ್ಮದೇ ಆಸ್ತಿ ಎಂದುಕೊಂಡು ಮಾರಿಹಾಕಿದ್ದಾರೆ.ಕೆಲವಡೆ ಕಡಿಮೆ ಬಾಡಿಗೆ, ಹಲವೆಡೆ ಸರಿಯಾದ ಬಾಡಿಗೆಯನ್ನೇ ಕೊಡುತ್ತಿಲ್ಲ ಎಂದು ಅನ್ವರ್ ಅವರು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ತನಿಖೆ ಶುರುವಾದ ನಂತರ ಆರೋಪ ಎದುರಿಸುವ ಹೆದರಿಕೆಯಿಂದ ಕೆಲವರು ತಲೆಮರೆಸಿಕೊಂಡಿದ್ದಾರೆ.

ಈ ವರದಿಯನ್ನು ಸ್ವೀಕರಿಸಿದ ಸದಾನಂದ ಗೌಡರು,ಅಲ್ಪಸಂಖ್ಯಾತರಿಗೆ ಸೇರಿದ ಈ ಆಸ್ತಿಯನ್ನು ಕಬಳಿಸಿದ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ,ಅವರ ವಿರುದ್ಧ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಆಶ್ವಾಸನೆ ನೀಡಿದರು.ವಕ್ಫ್‌ಗೆ ಸೇರಿದ ಆಸ್ತಿಯಲ್ಲಿ ಒಂದು ಇಂಚು ಕೂಡ ದುರುಪಯೋಗವಾಗದಂತೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಸ್ತಿ ಒತ್ತುವರಿಯನ್ನು ಪತ್ತೆಹಚ್ಚಿ ಮರುವಶಪಡಿಸಿಕೊಳ್ಳಲಾಗವುದು ಎಂದು ಅವರು ನುಡಿದರು

Advertisement

0 comments:

Post a Comment

 
Top