ಕೊಪ್ಪಳ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಂದ ವಿತರಣೆಯಾಗುವ ಪಡಿತರ ಆಹಾರಧಾನ್ಯ ಎತ್ತುವಳಿ ಕುರಿತಂತೆ ಸಾರ್ವಜನಿಕರು ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ಯಾವ ದಿನ ಎಷ್ಟು ಪ್ರಮಾಣದ ಆಹಾರಧಾನ್ಯ, ಅಕ್ಕಿ, ಗೋಧಿ, ಸಕ್ಕರೆ ಎತ್ತುವಳಿಯಾಗಿದೆ ಎನ್ನುವ ಮಾಹಿತಿಯನ್ನು ಇನ್ನು ಮುಂದೆ ಪಡೆಯಲಿಚ್ಛಿಸುವ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕೆಲವು ಷರತ್ತಿಗೊಳಪಟ್ಟು ಪಡೆಯಬಹುದಾಗಿದೆ. ನ್ಯಾಯಬೆಲೆ ಅಂಗಡಿಯ ಆಹಾರಧಾನ್ಯ ಎತ್ತುವಳಿ ಮಾಹಿತಿಯನ್ನು ಪಡೆಯಲಿಚ್ಛಿಸುವವರು ಆಯಾ ಗ್ರಾಮದವರೇ ಆಗಿರಬೇಕು, ಅಲ್ಲದೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿ ಹೊಂದಿರಬೇಕು, ಹಾಗೂ ಮಾಹಿತಿಯನ್ನು ಪಡೆಯಲಿಚ್ಛಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಹೊಂದಿರಬೇಕು. ಅಂತಹ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯ ದೃಢೀಕೃತ ಜೆರಾಕ್ಸ್ ಪ್ರತಿ, ಮೊಬೈಲ್ ಸಂಖ್ಯೆ ಮತ್ತು ಮನವಿ ಪತ್ರದೊಂದಿಗೆ ಆಯಾ ತಾಲೂಕಿನ ತಹಸಿಲ್ದಾರರ ಕಚೇರಿಯ ಆಹಾರ ಶಾಖೆಯ ಆಹಾರ ಶಿರಸ್ತೆದಾರರನ್ನು ಅಥವಾ ಆಹಾರ ನಿರೀಕ್ಷಕರನ್ನು ಮಾ. ೨೫ ರ ಒಳಗಾಗಿ ಖುದ್ದಾಗಿ ಭೇಟಿಯಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
0 comments:
Post a Comment