- ಯುವಕರು ದೇಶದ ಭವಿಷ್ಯಕ್ಕೆ ಜವಾಬ್ದಾರರಾಗಿದ್ದಾರೆ. ಅದಕ್ಕೆ ಅನುಗುಣವಾಗಿ ನಡೆದುಕೊಂಡು ಬದುಕು, ಸಮಾಜ ಎರಡನ್ನೂ ಕಟ್ಟಬೇಕು ಎಂದು ಶಸ್ತ್ರಚಿಕಿತ್ಸಕ ಡಾ|| ಮಲ್ಲಿಕಾರ್ಜುನ ಬಿ. ರಾಂಪೂರ ಕರೆ ನೀಡಿದರು.
ಅವರು ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಆಕಾಶವಾಣಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಯುವಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಭಾರತ ದೊಡ್ಡ ರಾಷ್ಟ್ರ, ಜನಸಂಖ್ಯೆ ದೃಷ್ಠಿಯಿಂದಲೂ ಇಂದು ಎಲ್ಲ ರಂಗದಲ್ಲಿ ತೀವ್ರ ಸ್ಪರ್ಧೆ ಉಂಟಾಗಿದೆ. ಸರ್ಧಾತ್ಮಕ ಜಗತ್ತನ್ನು ಎದುರಿಸಲು ಯುವಕರು ತಯಾರಾಗಬೇಕು. ಯುವಕರು ಮತ್ತು ಮಠಾಧೀಶರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. ಕಲಿಕೆ ನಿರಂತರವಾದುದು. ಇಂದು ಪಾಲಕರು, ತಮ್ಮ ಮಕ್ಕಳು ಡಾಕ್ಟರ್, ಇಂಜನೀಯರ್, ಕೆಎಎಸ್, ಐಎಎಸ್ ಅಧಿಕಾರಿಗಳಾಗಬೇಕೆಂದು ಮಾತ್ರ ಬಯಸುತ್ತಾರೆ. ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸೇನಾಧಿಕಾರಿಯಾಗಿ, ಸೈನಿಕರನ್ನಾಗಿ ಮಕ್ಕಳನ್ನು ಕಳುಹಿಸಲು ಹೆಚ್ಚು ಜನ ಮನಸ್ಸು ಮಾಡದಿರವದು ವಿಷಾದದ ಸಂಗತಿ. ವೃತ್ತಿಗಿಂತ ನಾವೆಲ್ಲ ಮನಷ್ಯರಾಗುವದು ಮುಖ್ಯ, ರೈತ, ಅನ್ನದಾತರಾಗುವದು ಅವಶ್ಯ ಎಂದು ಹೇಳಿದರು.
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿ ಶ್ರೀನಿವಾಸ ಗದ್ದಿ ಭ್ರಷ್ಟಾಚಾರದ ಕುರಿತು, ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ನೇತ್ರಾ ಸಿವಿಎಸ್, ಮೊಬೈಲ್ ಬಳಕೆ ಕುರಿತು ಎಂಎಸ್‌ಬಡ್ಲು ವಿದ್ಯಾರ್ಥಿ ಉಮೇಶ ಲಮಾಣಿ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬ ವಿಷಯವಾಗಿ, ಎಂ.ಎಡ್ ವಿದ್ಯಾರ್ಥಿ ಆನಂದ ಗೊಂಡಬಾಳ ಜಾಹೀರಾತಿನಲ್ಲಿ ಮಹಿಳೆ ಬಗ್ಗೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಯಂಕಣ್ಣ ಎನ್. ಉಪ್ಪಾರ ಪರಿಸರ ಪ್ರಜ್ಞೆಯ ಕುರಿತು ಪರಿಣಾಮಕಾರಿಯಾಗಿ ವಿಷಯಗಳನ್ನು ಮಂಡಿಸಿದರು. ಭೀಮಾಂಭಿಕಾ ಹಿರೇಮಠ ಹಾಗೂ ಕೀರ್ತಿ ಕುಲಕರ್ಣಿ ಪ್ರಸ್ತುತ ಪಡಿಸಿದ ಸುಗಮ ಸಂಗೀತ ಮನ ಸೆಳೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ್ ಮಾತನಾಡಿ ಆಕಾಶವಾಣಿಯು ದೇಶದ ಎಲ್ಲ ಮಾಧ್ಯಮಗಳಿಗೆ ತಾಯಿ ಬೇರಿನಂತಿದೆ. ಭಾರತದಲ್ಲಿ ೮೫ ವರ್ಷಗಳ ಸುಧೀರ್ಘ ಇತಿಹಾಸವಿರುವ ಆಕಾಶವಾಣಿ ಇಲ್ಲಿನ ಮೊದಲ ಮಾಧ್ಯಮ, ಹಿಂದೆ ಸಾರಿಗೆ ಸಂಪರ್ಕದ ಕೊರತೆಯಿಂದಾಗಿ ವೃತ್ತ ಪತ್ರಿಕೆಗಳು ಎಲ್ಲರಿಗೂ ಮುಟ್ಟುತ್ತಿರಲಿಲ್ಲ. ೧೯೬೦ರ ದಶಕದಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಯುದ್ಧ ನಡೆದ ಸಂದರ್ಭದಲ್ಲಿ ನಾವೆಲ್ಲ ನಮ್ಮ ಗ್ರಾಮದ ಚಾವಡಿ ಎದುರಿನಲ್ಲಿದ್ದ ಒಂದೇ-ಒಂದು ರೇಡಿಯೋದ ಮೂಲಕ, ಆಕಾಶವಾಣಿಯ ವಾರ್ತೆಗಳನ್ನು ಕೇಳಿ ಯುದ್ಧದ ಸ್ಥಿತಿ-ಗತಿಯ ಮಾಹಿತಿ ಪಡೆಯುತ್ತಿದ್ದೇವು ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದರು.
ದೃಶ್ಯ, ಮೊಬೈಲ್, ಇಂಟರ್‌ನೆಟ್‌ನಂತಹ ಆಧುನಿಕ ಮಾಧ್ಯಮಗಳ ಪೈಪೋಟಿ ಎದುರಿಸಲು, ಆಕಾಶವಾಣಿಯೂ ಕೆಲವು ಮಾರ್ಪಾಡುಗಳೊಂದಿಗೆ ಹೊಸ ಕಾಲಕ್ಕೆ ಹೊಂದಿಕೊಳ್ಳಬೇಕು. ಟಿ.ವಿ. ಕೇವಲ ಶ್ರೀಮಂತರ ಹಾಗೂ ನಗರವಾಸಿಗಳಿಗೆ ಸುಲಭವಾಗಿ ಸಿಗುತ್ತಿದೆ. ಆದರೆ ರೇಡಿಯೋ ಹಳ್ಳಿಗಳು, ಬಡವರು ಸೇರಿದಂತೆ ಯಾವುದೇ ಮೂಲೆಯಲ್ಲಿರುವ ಪ್ರಜೆಗೂ ಯಾವುದೇ ಖರ್ಚಿಲ್ಲದೇ ದೊರೆಯುವ ಸಾಧನವಾಗಿದೆ. ಆಕಾಶವಾಣಿಯು ದೇಶದ ಸಂಸ್ಕೃತಿಯ ರಾಯಭಾರಿಯಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸಪೇಟೆ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕ ಡಾ. ಆನಂದ ವಿ. ಪಾಟೀಲ್, ಯುವಕರು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಎಲೆಮರೆ ಕಾಯಿಯಾಗಿ, ಅವಕಾಶಗಳಿಲ್ಲದೇ ಕಳೆದು ಹೋಗುತ್ತಿರುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಯುವ ಸ್ಪಂದನ ಆಯೋಜಿಸಲಾಗಿದೆ ಎಂದರು.
ಉಪನ್ಯಾಸಕರಾದ ಎ.ಆರ್. ಲೋಕಾಪುರ, ಡಾ. ಬಸವರಾಜ ಪೂಜಾರ, ಡಾ| ದಯಾನಂದ ಸಾಳುಂಕೆ, ಎಸ್.ಎಂ. ಕಂಬಾಳಿಮಠ, ಮಾರ್ಕಂಡೇಯ, ಆಕಾಶವಾಣಿಯ ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಿ. ಪ್ರಸಾದ ಕಾರ್ಯಕ್ರಮ ನಿರೂಪಿಸಿದರು, ಪ್ರೋ. ಎಂ.ಎಂ. ಕಂಬಾಳಿಮಠ ವಂದಿಸಿದರು.
0 comments:
Post a Comment