PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ :  ಪೌರಾಯುಕ್ತರಿಗಾಗಿ ಮೀಸಲಾಗಿದ್ದ ಆಸನದಲ್ಲಿ ಎಇಇ ಆಸೀನರಾಗಿದ್ದಕ್ಕೆ ನಗರಸಭೆಯ ಕೆಲ ಸದಸ್ಯರು ಗರಂ ಆಗಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದರು. ಸದಸ್ಯರ ಸಭಾತ್ಯಾಗವನ್ನು ಗಂಭೀರವಾಗಿ ಪರಿಗಣಿಸದ ಅಧ್ಯಕ್ಷ ಸುರೇಶ ದೇಸಾಯಿ ಸಭೆಯಲ್ಲಿ ಚರ್ಚಿತವಾಗುವ ವಿಷಯ ಮಂಡನೆಗೆ ಅವಕಾಶ ನೀಡಿದರು.
      ಕೊಪ್ಪಳದ ನಗರಸಭೆಯಲ್ಲಿ ಮಂಗಳವಾರ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಇತ್ತಿಚೆಗೆ ನಿಧನರಾದ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಗೌರವ ಸೂಚಕವಾಗಿ ಮೌನ ಆಚರಿಸಲಾಯಿತು. ಬಳಿಕ ಸಭೆಯ ನಡಾವಳಿಗಳು ಆರಂಭವಾಗುತ್ತಿದ್ದಂತೆ ಪೌರಾಯುಕ್ತರ ಆಸನದಲ್ಲಿ ನಗರಸಭೆಯ ಎಇಇ ಆಸೀನರಾಗಿದ್ದು, ಕೆಲ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
      ಪೌರಾಯುಕ್ತರು ಗೈರಾಗಿದ್ದೇಕೆ, ನಿಮಗೆ ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪರವಾನಿಗೆ ಕೊಟ್ಟವರ‍್ಯಾರು ಹಾಗಾದರೆ ನೀವೆ ಟೆಂಡರ್ ಸಂಬಂಽಸಿದ, ಇತರೆ ಆಡಳಿತಕ್ಕೆ ಸಂಬಂಽಸಿದ ವಿಷಯಗಳಿಗೆ ಸಹಿ ಮಾಡುತ್ತೀರಾ ಎಂದು ಸದಸ್ಯರಾದ ಮಾನ್ವಿ ಪಾಷಾ, ಚಂದ್ರಶೇಖರ ಕವಲೂರು, ನಾಲ್ವಾಡ ತರಾಟೆಗೆ ತೆಗೆದುಕೊಂಡರು. ಸದಸ್ಯರ ಆರೋಪಕ್ಕೆ ಉತ್ತರಿಸಲು ತಡಬಡಾಯಿಸಿದ ಎಇಇ ಪೌರಾಯುಕ್ತರ ಆದೇಶದ ಪ್ರಕಾರ ಸಭೆಯಲ್ಲಿ ಪಾಲ್ಗೊಂಡಿರುವುದಾಗಿ ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ.
     ಎಇಇ ವರ್ತನೆಯಿಂದ ಬೇಸತ್ತಿದ್ದ ನಗರಸಭೆಯ ಸದಸ್ಯ ಮಾನ್ವಿ ಪಾಷಾ ಇಂದು ರಾಜ್ಯಾದ್ಯಂತ ಬಂದ್ ಆಚರಿಸಲಾಗುತ್ತಿದ್ದರೂ ಸಭೆ ಕರೆದಿರುವುದು ಸರಿಯಲ್ಲ. ಬಂದ್ ಆಚರಿಸಲು ಸಹಕರಿಸಿ ನಾವೇ ಸಭೆ ನಡೆಸಿದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಇಂದಿನ ಸಭೆಯನ್ನು ಮುಂದೂಡಲು ಆಗ್ರಹಿಸಿ ವಿರೋಧ ಪಕ್ಷದ ಕೆಲ ಸದಸ್ಯರು ಸಭಾತ್ಯಾಗ ಮಾಡಿದರು.
      ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗಕ್ಕೆ ತಲೆ ಕೆಡಿಸಿಕೊಳ್ಳದೇ ವಿಷಯ ಸೂಚಿ ಓದುವಂತೆ ಸಿಬ್ಬಂದಿಗೆ ಸೂಚಿಸಿದರು. ಸಭೆಯಲ್ಲಿ ಮುಖ್ಯವಾಗಿ ೩ ವಿಷಯಗಳನ್ನು ಚರ್ಚಿಸಲು ಸಭೆ ಕರೆಯಲಾಗಿತ್ತು. ಮೊದಲನೇ ವಿಷಯವಾದ ೨೦೧೦-೧೧ ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಕಾಯ್ದಿರಿಸಿದ ೩೪ ಲಕ್ಷ  ರು. ಹಾಗೂ ೨೦೧೧-೧೨ ನೇ ಸಾಲಿನ ೧೩ ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ವಿಲೇವಾರಿಗಾಗಿ ಕಾಯ್ದಿರಿಸಿದ ೯ ಲಕ್ಷ ರು., ಒಟ್ಟು ೪೩ ಲಕ್ಷ ರು.ಗಳಲ್ಲಿ ನಗರಕ್ಕೆ ಸೆಲ ಪ್ರೊಪೆಲ್ಡ ಸ್ಟ್ರೀಟ್ ಸ್ವಿಪಿಂಗ್ ಮಷಿನ್ ಖರೀದಿಸುವ ವಿಷಯ ಚರ್ಚೆಯಾಗದೇ ಸದಸ್ಯರ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿಹೋಯಿತು.
     ಬೇಸಿಗೆ ಸಮೀಪಿಸುತ್ತಿರುವುದರಿಂದ ಕಾತರಕಿ ಜಾಕ್‌ವೆಲ್ ಹತ್ತಿರ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಕಾರಣ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪರ್ಯಾಯ ವ್ಯವಸ್ಥೆಗಳಾದ ಟ್ಯಾಂಕರ್, ನೂತನ ಕೊಳವೆ ಬಾವಿಗಳು, ಜಾಕ್‌ವೆಲ್ ಹತ್ತಿರ ರಿಂಗ್‌ಬಂಡಿ ಅಳವಡಿಸುವ ಬಗ್ಗೆ ಚರ್ಚೆ ನಡೆದಾಗ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲ ಇರುವ ಜಾಕ್‌ವೆಲ್‌ಗಳನ್ನು ದುರಸ್ತಿಗೊಳಿಸುವ ಹಾಗೂ ಇಲ್ಲದಿದ್ದಲ್ಲಿ ಹೊಸ ಜಾಕ್‌ವೆಲ್ ನಿರ್ಮಿಸುವಂತೆ ಸದಸ್ಯರು ಒತ್ತಾಯಿಸಿದರು. ಒಟ್ಟಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಸಭೆಯು ನಿರ್ಧರಿಸಿತು.
      ಸಭೆಯ ೩ ನೇ ವಿಷಯ ಚರ್ಚಿಸುವ ಪೂರ್ವದಲ್ಲಿ ನಗರಸಭೆಯ ಸದಸ್ಯ ಡಾ.ಉಪೇಂದ್ರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಲು ಮಹಾರಾಷ್ಟ್ರದ ಶಿಲ್ಪಿಗೆ ೪೫ ಲಕ್ಷ ರು. ಕೊಟ್ಟು ೩ ವರ್ಷ ಕಳೆದರೂ ಆ ಮೂರ್ತಿ ಅಲ್ಲೇ ಇದೆ. ಅದನ್ನು ಇಲ್ಲಿಗೆ ತಂದು ಪ್ರತಿಷ್ಠಾಪಿಸುವ ಮನಸ್ಸು ನಗರಸಭೆಗೆ ಇಲ್ಲದಿರುವುದು ನಿಜಕ್ಕೂ ಶೋಚನೀಯ. ಸಂವಿಧಾನವನ್ನು ಬರೆದ ಶಿಲ್ಪಿಗೆ ಈ ಪರಿಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ಜನ ರೊಚ್ಚಿಗೆದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
      ಬಳಿಕ ಇನ್ನು ಹದಿನೈದು ದಿನಗಳ ಒಳಗಾಗಿ ಅಂಬೇಡ್ಕರ್ ಮೂರ್ತಿ ತರುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರೇಶ ದೇಸಾಯಿ ಭರವಸೆ ನೀಡಿದರು. ಬಳಿಕ ೨೦೧೦-೧೧ ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಶೇ.೨೨.೭೫ ರಲ್ಲಿ ನಿಗದಿಪಡಿಸಿದ ೧೬.೧೦ ಲಕ್ಷ ರು.ಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್‌ಗಳಿಗೆ ಸಾಮಾಗ್ರಿ ಪೂರೈಸಲು ಟೆಂಡರ್ ಕರೆದಿದ್ದು, ಈ ಸಿಂಗಲ್ ಟೆಂಡರ್ ಅನುಮೋದಿಸಲು ಜಿಲ್ಲಾಽಕಾರಿಗೆ ಪ್ರಸ್ತಾವನೆ ಸಲ್ಲಿಸಿದಾಗ, ಜಿಲ್ಲಾಽಕಾರಿಗಳು ಇದನ್ನು ರದ್ದುಪಡಿಸಿ, ಇದೇ ಹಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಆದೇಶಿಸಿರುವ ವಿಷಯ ಸಭೆಯಲ್ಲಿ ಚರ್ಚೆಯಾಯಿತು. ಆಗ ಕೆಲ ಸದಸ್ಯರು ಈ ಕುರಿತಂತೆ ನೂತನವಾಗಿ ಅಂಬೇಡ್ಕರ್ ಭವನ ನಿರ್ಮಿಸುವ ಬದಲು ಈಗಿರುವ ಅಂಬೇಡ್ಕರ್ ಭವನಗಳನ್ನು ದುರಸ್ತಿಗೊಳಿಸಲು ಸೂಚಿಸಿದರಾದರೂ ಈ ಬಗ್ಗೆ ಯಾವುದೇ ನಿರ್ಣಯಗಳನ್ನು ಕೈಗೊಳ್ಳದೇ ಸಭೆ ಕೊನೆಗೊಂಡಿತು.
      ಈ ಸಂದರ್ಭದಲ್ಲಿ ನಾಲ್ವಾಡ, ಡಾ.ಉಪೇಂದ್ರ, ಅಮ್ಜದ್ ಪಟೇಲ್, ಸಿದ್ದು ಮ್ಯಾಗೇರಿ ಸೇರಿದಂತೆ ಮತ್ತಿತರ ಸದಸ್ಯರು ಇದ್ದರು.

ಜಿಲ್ಲಾ ಧಿಕಾರಿಗೆ ದೂರು :
      ಬೇಸಿಗೆಯ ದಿನಗಳು ಆರಂಭಗೊಳ್ಳುತ್ತಿವೆ. ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಈಗಲೇ ಕನಿಷ್ಠ ೬ ದಿನಗಳಿಗೊಮ್ಮೆ ನೀರು ಬರುತ್ತಿದೆ. ಜಾಕ್‌ವೆಲ್‌ನಲ್ಲಿ ಇನ್ನು ೮-೧೦ ದಿನಗಳಲ್ಲಿ ಒಡ್ಡು ಹಾಕದಿದ್ದರೆ ಏಪ್ರಿಲ್-ಮೇ ನಲ್ಲಿ ನಗರದ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡಬೇಕಾಗುತ್ತದೆ. ಈ ಕುರಿತು ಚರ್ಚೆ ನಡೆಸುವುದನ್ನು ಬಿಟ್ಟು ಯಾವುದೋ ಅನುದಾನ ಬಂತು. ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕರೆದಿರುವ ಈ ವಿಶೇಷ ಸಾಮಾನ್ಯ ಸಭೆ ಜನಪರ ಕಾಳಜಿಯಿಂದ ಕೂಡಿಲ್ಲ ಎಂದು ಸಭಾತ್ಯಾಗ ಮಾಡಿದ ನಗರಸಭೆಯ ಸದಸ್ಯ  ಚಂದ್ರಶೇಖರ ಕವಲೂರು ಅಸಮಾಧಾನ ವ್ಯಕ್ತಪಡಿಸಿದರು.
      ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ೧೫ ದಿನಗಳಲ್ಲಿ ನೀರಿನ ಸಮಸ್ಯೆ ನೀಗದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಮತ್ತೋರ್ವ ಸದಸ್ಯ ಮಾನ್ವಿ ಪಾಷಾ ಹೇಳಿದರು.
     ಈ ಸಂದರ್ಭದಲ್ಲಿ ಸಭಾತ್ಯಾಗ ಮಾಡಿದ ಸದಸ್ಯರಾದ ಕಾಟನ್ ಪಾಷಾ, ಜಾಕೀರ್‌ಹುಸೇನ್ ಕಿಲ್ಲೆದಾರ, ವೀರಭದ್ರಪ್ಪ ಗದಗಿನ್, ಅನಸೂಯಾ ಮಿಠಾಯಿ, ಮಹಾದೇವಪ್ಪ ಜವಳಿ, ಗಂಗಮ್ಮ ದೊಡ್ಡಮನಿ ಮತ್ತಿತರರು ಇದ್ದರು.

Advertisement

0 comments:

Post a Comment

 
Top