: ರಾಜ್ಯದ ೭೨೫೪ ಕಿ.ಮೀ. ರಸ್ತೆಯನ್ನು ೨೦೯೭ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಯೋಜನೆಯಡಿ ಮುದಗಲ್-ತಾವರಗೇರಾ-ಕನಕಗಿರಿ-ಗಂಗಾವತಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಹಾಗೂ ಚಿಕ್ಕಬೆಣಕಲ್ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಗಂಗಾವತಿಯಲ್ಲಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ, ನಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳು ಸೇರಿದಂತೆ ಒಟ್ಟು ೭೨೫೪ ಕಿ.ಮೀ. ರಸ್ತೆಯನ್ನು ೨೦೯೭ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಈಗಾಗಲೆ ಪ್ರಸ್ತಾವನೆಯನ್ನು ತಯಾರಿಸಿ ಆರ್ಥಿಕ ಇಲಾಖೆಗೆ ಅನುಮೋನೆಗೆ ಕಳುಹಿಸಿದೆ. ಸದ್ಯದಲ್ಲಿ ಆರ್ಥಿಕ ಇಲಾಖೆ ಅನುಮೋದನೆ ನೀಡುವ ಸಾಧ್ಯತೆ ಇದ್ದು, ಶೀಘ್ರದಲ್ಲೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಸದ್ಯ ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿರುವ ಯೋಜನೆಯು ಒಟ್ಟು ೦೯ ಪ್ಯಾಕೇಜ್ ಅನ್ನು ಒಳಗೊಂಡಿದ್ದು, ಈಗಾಗಲೆ ೫ ಪ್ಯಾಕೇಜ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸದ್ಯ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಯೋಜನೆಯಡಿ ಮುದಗಲ್-ತಾವರಗೇರಾ- ೩೦ಕಿ.ಮೀ., ತಾವರಗೇರಾ-ಗಂಗಾವತಿ- ೪೯ ಕಿ.ಮೀ. ಸೇರಿದಂತೆ ಒಟ್ಟು ೭೯ ಕಿ.ಮೀ. ರಸ್ತೆಯನ್ನು ೧೫೨ ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಮಗಾರಿಗೆ ೩೬ ತಿಂಗಳ ಅವಧಿ ನಿಗದಿಪಡಿಸಲಾಗಿದ್ದು, ನಿಗದಿತ ಅವಧಿಗಿಂತ ಮುನ್ನವೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಗಂಗಾವತಿ ಯಿಂದ ಹೇರೂರುವರೆಗೂ ರಸ್ತೆಯನ್ನು ನಾಲ್ಕು ಲೈನ್ ನಿರ್ಮಿಸುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ವಿಶ್ವಬ್ಯಾಂಕ್‌ನಿಂದ ೪೫೦೦ ಕೋಟಿ ರೂ. ಹಣದ ನೆರವು ಪಡೆದು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸಲು ಅಗತ್ಯ ಕ್ರಮ ಕೈಗೊಂಡಿದೆ. ಈ ಹಿಂದಿನ ಸರ್ಕಾರಗಳಿಗಿಂತಲೂ ಎರಡು ಪಟ್ಟು ಹಣವನ್ನು ನಮ್ಮ ಸರ್ಕಾರ ವೆಚ್ಚ ಮಾಡಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ೩೨೦೦೦ ಕೋಟಿ ರೂ. ಇದ್ದ ರಾಜ್ಯದ ಆದಾಯವನ್ನು ಯಾವುದೇ ಹೊಸ ತೆರಿಗೆ ವಿಧಿಸದೆಯೇ, ಈಗ ೮೬೦೦೦ ಕೋಟಿ ರೂ.ಗೆ ಆದಾಯ ಹೆಚ್ಚಿಸಲಾಗಿದೆ. ಗುಲಬರ್ಗಾ-ಚೌಡಾಪುರ, ತಿಂಥಣಿ-ಕಲ್ಮಲಾ ಮುಂತಾದ ಮಾರ್ಗಗಳ ರಸ್ತೆ ಅಭಿವೃದ್ಧಿಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಅದೇ ರೀತಿ ಸಿಂಧನೂರು-ಲಿಂಗಸುಗೂರು ರಸ್ತೆಯನ್ನು ೧೦೯ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಿಂಗಸುಗೂರು ಶಾಸಕ ಮಾನಪ್ಪ ಡಿ. ವಜ್ಜಲ ಅವರು ಮಾತನಾಡಿ, ಮೈಸೂರು, ಬೆಂಗಳೂರು ಭಾಗಗಳ ಅಭಿವೃದ್ಧಿಯನ್ನು ಹೋಲಿಸಿದಾಗ ಹೈದ್ರಾಬಾದ್-ಕರ್ನಾಟಕ ಪ್ರದೇಶಗಳು ಬಹಳಷ್ಟು ಹಿಂದುಳಿದಿವೆ. ಈ ಭಾಗದ ಹೆಚ್ಚಿನ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಪಕ್ಷಬೇಧ ಮರೆತು ಶ್ರಮಿಸಬೇಕಿದೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಮುಂತಾದ ಸೌಕರ್ಯಗಳು ಸಮರ್ಪಕವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೂ, ದೀಪದ ಕೆಳಗೆ ಕತ್ತಲು ಎಂಬಂತೆ ಈ ಭಾಗದ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ. ಈ ಭಾಗದಲ್ಲಿ ದಿನದ ೨೪ ತಾಸು ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಉತ್ತರ ಕರ್ನಾಟಕ ಭಾಗದ ಎಲ್ಲ ಶಾಸಕರು ಅನೇಕ ಸಲ ಒಂದೆಡೆ ಸೇರಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡಿದ್ದೇವೆ ಎಂದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕನಕಗಿರಿ ಶಾಸಕ ಶಿವರಾಜ ತಂಗಡಗಿ ಕಾರ್ಯಕ್ರಮ ಕುರಿತು ಮಾತನಾಡಿದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆಶಿಪ್) ಅಧೀಕ್ಷಕ ಅಭಿಯಂತರ ಮಸೂದ್ ಶರೀಫ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್. ಪ್ರಭಾಕರ, ಎ.ಪಿ.ಎಂ.ಸಿ. ಅಧ್ಯಕ್ಷ ಅಮರೇಗೌಡ ಪೊಲೀಸ್ ಪಾಟೀಲ, ಕಾರಟಗಿ ಎಪಿಎಂಸಿ ಅಧ್ಯಕ್ಷ ಅರಳಿ ಬಸಪ್ಪ, ಗಣ್ಯರಾದ ಗಿರೀಗೌಡರ, ಮನೋಹರ ಹೇರೂರು ಮುಂತಾದ ಗಣ್ಯರು ಭಾಗವಹಿಸಿದ್ದರು. ಕೆಶಿಪ್ ರಾಯಚೂರಿನ ಕಾರ್ಯಪಾಲಕ ಅಭಿಯಂತರ ಬಿ. ಶ್ರೀನಿವಾಸ್ ಅವರು ಸ್ವಾಗತಿಸಿ, ವಂದಿಸಿದರು.
೨೧ ಕೋಟಿ ರೂ. ವೆಚ್ಚದಲ್ಲಿ ಆನೆಗೊಂದಿ ಸೇತುವೆಗೆ ಕ್ರಮ- ಸಿ.ಎಂ. ಉದಾಸಿ
: ಹಂಪಿ ಹಾಗೂ ಆನೆಗೊಂದಿಗೆ ಸಂಪರ್ಕ ಸಾಧಿಸಲು ೨೧ ಕೋಟಿ ರೂ. ವೆಚ್ಚದಲ್ಲಿ ಕಡೇಬಾಗಿಲು ಬಳಿ ನೂತನ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಯೋಜನೆಯಡಿ ಮುದಗಲ್-ತಾವರಗೇರಾ-ಕನಕಗಿರಿ-ಗಂಗಾವತಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಹಾಗೂ ಚಿಕ್ಕಬೆಣಕಲ್ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಗಂಗಾವತಿಯಲ್ಲಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗೊಂದಿ ಬಳಿಯ ತೂಗುಸೇತುವೆ ಕುಸಿತವಾಗಿ ಹಲವು ವರ್ಷ ಕಳೆದಿವೆ. ಹಂಪಿ ಹಾಗೂ ಆನೆಗೊಂದಿಗೆ ನೇರ ಸಂಪರ್ಕ ಸಾಧಿಸಲು ಸೂಕ್ತ ಸೇತುವೆ ನಿರ್ಮಿಸಬೇಕು ಎಂಬುದು ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಕಡೇಬಾಗಿಲು ಗ್ರಾಮದ ಬಳಿ ನೂತನ ಸೇತುವೆ ನಿರ್ಮಿಸಲು ೨೧ ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಪಡೆಯಲಾಗುವುದು. ಅನುಮೋದನೆ ದೊರೆತ ಕೂಡಲೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ನಡೆಯುವ ಯಾವುದೇ ರಸ್ತೆ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ವಿಶೇಷ ಆಸಕ್ತಿ ವಹಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕನಕಗಿರಿ ಶಾಸಕ ಶಿವರಾಜ ತಂಗಡಗಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment