PLEASE LOGIN TO KANNADANET.COM FOR REGULAR NEWS-UPDATES


  ತುಳಸಿ ಮದ್ದಿನೇನಿ
ಕೊಪ್ಪಳ   ಸದಾ ಒತ್ತಡದ ನಡುವೆ ಕೆಲಸ ನಿರ್ವಹಿಸುವವರ ಮನೋಸ್ಥೈರ್ಯ ಹೆಚ್ಚಿಸುವಲ್ಲಿ ಕ್ರೀಡೆಗಳು ಸಹಾಯಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಕೊಪ್ಪಳದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪೊಲೀಸರು ದಿನನಿತ್ಯ ಸಾರ್ವಜನಿಕರೊಂದಿಗೆ ಬೆರೆತು, ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ.  ಇಂತಹ ಸಂದರ್ಭದಲ್ಲಿ ಕ್ರೀಡೆಗಳು ಅಂತಹವರ ಮಾನಸಿಕ ಒತ್ತಡ ನಿವಾರಿಸುವಲ್ಲಿ ಸಹಾಯಕಾರಿಯಾಗಿದೆ.  ಅಲ್ಲದೆ ಪೊಲೀಸರ ಮನೋಸ್ಥೈರ್ಯ ವೃದ್ಧಿಸಲು ನೆರವಾಗಲಿದೆ.  ಪೊಲೀಸರಲ್ಲಿ ಕೇವಲ ದೈಹಿಕ ಕ್ಷಮತೆ ಇದ್ದರಷ್ಟೆ ಸಾಲದು, ಮಾನಸಿಕವಾಗಿಯೂ ಉತ್ತಮ ಕ್ಷಮತೆ ಹೊಂದಿರಬೇಕು.  ಕ್ರೀಡೆಗಳು ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಉಲ್ಲಾಸ ಹಾಗೂ ಹೊಸ ಚೈತನ್ಯ ತುಂಬಬಲ್ಲವು.  ಶಾಲಾ ಮಟ್ಟದಲ್ಲಿ ಕ್ರೀಡಾಕೂಟಗಳು ಆಗಾಗ್ಗೆ ಆಯೋಜಿಸುವುದರಿಂದ, ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಚುರುಕಿನಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ. ಅಲ್ಲದೆ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯಲು ಸಹಾಯಕಾರಿಯಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಭಿಪ್ರಾಯಪಟ್ಟರು.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಸ್ವಾಗತಿಸಿದರು, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಡಿವೈಎಸ್‌ಪಿ ಗಳಾದ ವಿಜಯ ಡಂಬಳ, ಡಿ.ಎಲ್. ಹಣಗಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು,  ಜಿಲ್ಲೆಯ ಎಲ್ಲ ತಾಲೂಕುಗಳಿಂದ ಪೊಲೀಸ್ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.  ಕ್ರೀಡಾಕೂಟ ಉದ್ಘಾಟನೆಗೂ ಮುನ್ನ ಕುಷ್ಟಗಿ ತಾಲೂಕು ಹನುಮಸಾಗರದ ಪೊಲೀಸ್ ಪೇದೆ ಆನಂದ ಕೊರಸರ್ ಅವರು ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಹಸ್ತಾಂತರಿಸಿದರು.  ಕ್ರೀಡಾಕೂಟ ಜ. ೦೪ ರವರೆಗೆ ನಡೆಯಲಿದ್ದು, ಅಂದು ಸಂಜೆ ೦೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.

Advertisement

0 comments:

Post a Comment

 
Top