PLEASE LOGIN TO KANNADANET.COM FOR REGULAR NEWS-UPDATES



- ಸನತ್‌ ಕುಮಾರ ಬೆಳಗಲಿ
ಸಿಂಧಗಿ ತಹಶೀಲ್ದಾರ ಕಚೇರಿ ಆವರಣದಲ್ಲಿ ಸಂಘ ಪರಿವಾರದ ಕೋಮುವಾದಿಗಳು ಪಾಕಿಸ್ತಾನ ಧ್ವಜ ಹಾರಿಸಿದಾಗ ನಾನು ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿದ್ದೆ. ಈಗ ಬಾಗಲಕೋಟೆ ಜಿಲ್ಲೆಗೆ ಸೇರಿರುವ ನನ್ನೂರು ಸಾವಳಗಿಗೆ ಹೋಗಿದ್ದೆ. ಅಲ್ಲಿ ನಡೆದ ಜಮಖಂಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಒಂದು ಗೋಷ್ಠಿಯ ಅಧ್ಯಕ್ಷತೆಗೆ ಆಮಂತ್ರಿತನಾಗಿದ್ದೆ. ಆಗಲೇ ಅಲ್ಲಿ ಈ ಧ್ವಜ ಹಾರಿಸಿದ ಸುದ್ದಿ ಬಂತು. ಇದನ್ನು ಅಲ್ಲಿ ಹಾರಿಸಿದವರೇ ಪ್ರತಿಭಟನೆಗೆ ಕರೆ ನೀಡಿದ್ದರು. ಸಿಂಧಗಿ ಮಾತ್ರವಲ್ಲ, ಇಂಡಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಬಿಜಾಪುರ ಮುಂತಾದ ಪಟ್ಟಣಗಳಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಆ ಭಾಗದ ಶಾಸಕರು ಮಹಾ ದೇಶಭಕ್ತರಂತೆ ತಾವೇ ರಾಷ್ಟ್ರಧ್ವಜ ಹಿಡಿದು ಪ್ರಹಸನ ನಡೆಸಿದ್ದರು.ಈ ಘಟನೆಯನ್ನು ವಿದ್ಯುನ್ಮಾನ ಮಾಧ್ಯಮಗಳು ರೋಚಕವಾಗಿ ವರದಿ ಮಾಡುತ್ತಿದ್ದವು. ರಾಜ್ಯಮಟ್ಟದ ದಿನಪತ್ರಿಕೆಗಳ ವಿಶ್ಲೇಷಣಾ ವರದಿಗಳೂ ಭಿನ್ನವಾಗಿರಲಿಲ್ಲ. ಈ ಹಿಂದಿನಂತೆ ಈ ದುಷ್ಕೃತ್ಯವನ್ನು ಅಲ್ಪಸಂಖ್ಯಾತರ ತಲೆಗೆ ಕಟ್ಟುವಂತೆ ಚರ್ವಿತ ಚರ್ವಣ ನಡೆದಿತ್ತು.
‘‘ಈ ಧ್ವಜ ಹಾರಿಸಿದವರು ಯಾರು?’’ ಎಂಬುದನ್ನು ಪೊಲೀಸರೇ ಪತ್ತೆ ಹಚ್ಚಬೇಕು’’ ಎಂದು ನನಗೆ ಭೇಟಿಯಾದ ಬಿಜೆಪಿ ಶಾಸಕರೊಬ್ಬರು ಹೇಳಿದಾಗ, ‘‘ಧ್ವಜ ಹಾರಿಸಿದವರು ಯಾರೆಂದು ನಿಮಗಲ್ಲದೆ ಇನ್ಯಾರಿಗೆ ಗೊತ್ತಿದೆ’’ ಎಂದು ನಾನು ಹೇಳಿದೆ. ಆಗ ಆತ ನಿಗೂಢ ನಗೆ ಬೀರಿದರು. ಮುಂದೆ ಎರಡೇ ದಿನದಲ್ಲಿ ಧ್ವಜ ಹಾರಿಸಿದವರ ಮೂಲ ಬಯಲಾಯಿತು. ಆಗ ಟಿವಿ ಚಾನಲ್‌ಗಳು ಒಂದು ಸಲ ಪ್ಲಾಶ್ ನ್ಯೂಸ್ ತೋರಿಸಿ ತಿಪ್ಪೆ ಸಾರಿಸಿದವು.

ಕರಾವಳಿಯಂತೆ ಉತ್ತರ ಕರ್ನಾಟಕವೂ ಆರೆಸ್ಸೆಸ್‌ನ ‘ಹಿಂದು ರಾಷ್ಟ್ರ’ ಪ್ರಯೋಗ ಶಾಲೆ ಆಗಿರುವುದರಿಂದ ಆ ಭಾಗದಲ್ಲಿ ಆಗಾಗ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಈಗ ಎರಡು ವಾರದ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಭಾವಚಿತ್ರಗಳಿರುವ ಟಿ ಶರ್ಟುಗಳನ್ನು ವ್ಯಾಪಾರಿಯೊಬ್ಬ ಮಾರಾಟ ಮಾಡುತ್ತಿದ್ದನೆಂದು ಬಜರಂಗದಳದವರು ಇದೇ ರೀತಿ ಗಲಾಟೆ ನಡೆಸಿ ಬಂದ್-ಹರತಾಳಗಳಿಗೆ ಕರೆ ನೀಡಿದ್ದರು. ಅಲ್ಲಿನ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಆ ವ್ಯಾಪಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಫೋನ್ ಮಾಡಿ ಹೇಳಿದ್ದರು.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಆರೆಸ್ಸೆಸ್ ಪುಂಡರ ಹಾವಳಿ ಎಷ್ಟು ತೀವ್ರವಾಗಿದೆ ಅಂದರೆ, ಅಲ್ಲಿನ ಯಾವ ಪೊಲೀಸಾಧಿಕಾರಿಯೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಇತ್ತೀಚೆಗೆ ಬಾಗಲಕೋಟದಲ್ಲಿ ದೊಂಬಿ ನಡೆಸಿದ ಬಜರಂಗಿಗಳನ್ನು ಬಂಧಿಸಿ ಖಟ್ಲೆ ಹಾಕಿದ ದಕ್ಷ ಪೊಲೀಸ್ ಅಧಿಕಾರಿ ಮಹಾಂತೇಶ ಹೊಸಪೇಟೆ ಅವರನ್ನು ವರ್ಗಾವಣೆ ಮಾಡಬೇಕೆಂದು ಚಡ್ಡಿಗಳು ಪ್ರತಿಭಟನೆ-ಬಂದ್ ನಡೆಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಿಂದು- ಮುಸಲ್ಮಾನ-ಕ್ರೈಸ್ತರು ಸಹಜವಾಗಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಅವರಲ್ಲಿ ದ್ವೇಷದ ಕಿಚ್ಚು ಹಚ್ಚಲು ಸಂಘ ಪರಿವಾರ ಕಳೆದ ಐದು ದಶಕಗಳಿಂದ ಯತ್ನಿಸುತ್ತಲೇ ಬಂದಿದೆ. ಅದರಲ್ಲೀ ಬಾಗಲಕೋಟ್-ಬಿಜಾಪುರ- ಧಾರವಾಡ ಜಿಲ್ಲೆಗಳು ನಿರಂತವಾಗಿ ಕೋಮು ಸಂಘರ್ಷ ಭೀತಿಯನ್ನು ಎದುರಿಸುತ್ತಲೇ ಇವೆ. ಗ್ರಾಮೀಣ ಪ್ರದೇಶದಲ್ಲಿ ಶತಮಾನಗಳಿಂದ ಹಿಂದು-ಮುಸಲ್ಮಾನರು ಜೊತೆಯಾಗಿ ಆಚರಿಸುತ್ತಿದ್ದ ಮೊಹರಂ ಈಗ ಅನೇಕ ಹಳ್ಳಿಗಳಲ್ಲಿ ನಿಂತು ಹೋಗಿದೆ. ಮೊಹರಂನಲ್ಲಿ ಹಿಂದುಗಳು ಭಾಗವಹಿಸದಂತೆ ಫ್ಯಾಸಿಸ್ಟ್ ಪರಿವಾರ ನಿರ್ಬಂಧ ಹೇರಿದೆ.
ಈ ಜನಾಂಗ ವೈಷಮ್ಯದ ಕಿಚ್ಚಿನಲ್ಲಿ ತನ್ನ ಓಟಿನ ಬೆಳೆ ತೆಗೆದ ಬಿಜೆಪಿ ಆ ಭಾಗದ ಬಹುತೇಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿ ಗೆದ್ದು ಬಂದವರೆಲ್ಲ ನಾನಾ ಹಗರಣಗಳಲ್ಲಿ ಮೈತುಂಬ ಹೊಲಸು ಮೆತ್ತಿಕೊಂಡು ನಿಂತಿದ್ದಾರೆ. ಇತ್ತೀಚೆಗೆ ಸಚಿವ ಮುರುಗೇಶ ನಿರಾಣಿ ಅವರ ಸಕ್ಕರೆ ಕಾರ್ಖಾನೆಯ ಅನ್ಯಾಯದ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದಾಗ ಪೊಲೀಸರು ಆ ರೈತರನ್ನು ದನಕ್ಕೆ ಬಡಿದಂತೆ ಬಡಿದು ಜೈಲಿಗೆ ಅಟ್ಟಿದ್ದರು. ಗಣಿ ಹಗರಣ, ಡಿನೋಟಿಫಿಕೇಶನ್ ಬಾನಗಡಿ ಬಗ್ಗೆ ಈಗೀಗ ಜನ ಮಾತಾಡುತ್ತಿದ್ದಾರೆ. ನಿಧಾನವಾಗಿ ಆ ಭಾಗದ ಜನರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.
ಈ ಅಸಮಾಧನದ ತಳಮಳವನ್ನು ಸೂಕ್ಷ್ಮವಾಗಿ ಗುರುತಿಸಿದ ಸಂಘಪರಿವಾರಕ್ಕೆ ಜನತೆಯ ಸಂದೇಹ ನಿವಾರಿಸಬಲ್ಲ ಯಾವ ಮಂತ್ರದಂಡವೂ ಸಿಗಲಿಲ್ಲ. ಆಗ ಕೊನೆಯದಾಗಿ ಅದು ಬಳಸಿದ್ದು ಅದೇ ಹಳೆತಂತ್ರ. ಒಮ್ಮಿಂದೊಮ್ಮೆಲೆ ಸಿಂಧಗಿಯಂಥ ಪಟ್ಟಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಅದನ್ನು ಮುಸಲ್ಮಾನರ ತಲೆಗೆ ಕಟ್ಟಲು ಅದು ಷಡ್ಯಂತ್ರ ರೂಪಿಸಿತು. ಆದರೆ ಧ್ವಜವನ್ನೇನೋ ಹಾರಿಸಿದ್ದಾಯಿತು. ಆದರೆ ಅದನ್ನು ದಕ್ಕಿಸಿಕೊಳ್ಳಲು ಆಗಲಿಲ್ಲ. ಪೊಲೀಸರಿಂದ ಸತ್ಯಸಂಗತಿ ಕೊನೆಗೂ ಬಯಲಾಯಿತು.
ಪಾಕಿಸ್ತಾನ ಧ್ವಜ ಹಾರಿಸಿದ ರಾಕೇಶ ಮಠ ಆರೆಸ್ಸೆಸ್ ಕಾರ್ಯಕರ್ತ.ಆರೆಸ್ಸೆಸ್‌ನ ಅನೇಕ ಪಥಸಂಚಲನಗಳಲ್ಲಿ ಗಣವೇಷಧಾರಿಯಾಗಿ ಪಾಲ್ಗೊಂಡಿದ್ದಾನೆ. ಬಾಗಲಕೋಟದಲ್ಲಿ ಇತ್ತೀಚೆಗೆ ನಡೆದ ಹಿಂದು ಜಾಗರಣ ವೇದಿಕೆಯ ಸಭೆಯಲ್ಲೂ ಭಾಗವಹಿಸಿದ್ದ. ಈ ಪ್ರಕರಣದ ಉಳಿದ ಆರೋಪಿಗಳು ಸಂಘದ ಕಾರ್ಯಕರ್ತರು ಸ್ಥಳೀಯ ಬಿಜೆಪಿ ಶಾಸಕನ ಸಂಬಂಧಿಕರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರೆಸ್ಸೆಸ್, ಶ್ರೀರಾಮಸೇನೆ, ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ಹೆಸರಿನಲ್ಲಿ ಉತ್ತರ ಕರ್ನಾಟಕದ ನಾನಾಕಡೆ ಇಂಥ ಛಿದ್ರಕಾರಿ ಚಟುವಟಿಕೆಗಳು ನಡೆಯುತ್ತಲೇ ಇವೆ.
ವಾಸ್ತವವಾಗಿ ಶ್ರೀರಾಮಸೇನೆ ಎಂಬ ವಿಷಜಂತು ಹೊರಬಂದಿದ್ದೇ ಆರೆಸ್ಸೆಸ್ ಎಂಬ ಕಾಡುಮೃಗದ ಗರ್ಭದಿಂದ. ಇದನ್ನು ಸ್ಥಾಪಿಸಿದ ಹುಕ್ಕೇರಿಯ ಪ್ರಮೋದ್ ಮುತಾಲಿಕ್ ಮೂವತ್ತು ವರ್ಷ ಕಾಲ ಆರೆಸ್ಸೆಸ್ ಪ್ರಚಾರಕನಾಗಿ ರಾಜ್ಯದ ಅನೇಕ ಕಡೆ ಅಗ್ನಿಸ್ಪರ್ಶದ ಕಾಯಕ ನಡೆಸುತ್ತಲೇ ಬಂದಿದ್ದಾರೆ. ಆದರೆ ಹುಬ್ಬಳ್ಳಿಯ ‘ಹಿಂದು ಭವನ’ ನಿರ್ಮಾಣದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಹಣಕಾಸಿನ ವಿಷಯದಲ್ಲಿ ಮಾತೃ ಸಂಘಟನೆಯೊಂದಿಗೆ ಕಿತ್ತಾಡಿಕೊಂಡು ಹೊರಗೆ ಬಂದ ಮುತಾಲಿಕ ಕೂಡ ಸಾವರ್ಕರ್-ಗೊಳ್ವಲಕರ್ (ಅ)ವಿಚಾರ ಶಾಲೆಯಿಂದಲೇ (ಸ್ಕೂಲ್ ಆಫ್ ಥಾಟ್ಸ್) ಬಂದ ಮಹಾನುಭಾವ.
ಇದೇ ಆರೆಸ್ಸೆಸ್ ಮೂಲದಿಂದ ಬಂದ ನಾಥೂರಾಮ ಗೋಡ್ಸೆ ಗಾಂಧೀಜಿ ಎದೆಗೆ ಗುಂಡಿಕ್ಕಿದ. ಈ ಗೋಡ್ಸೆಯ ಹುತಾತ್ಮ ದಿನವನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾಲಿಂಗಪುರ, ಮುಧೋಳ, ಬನಹಟ್ಟಿ ಮುಂತಾದ ಕಡೆ ಇಂದಿಗೂ ಈ ಕೋಮುವಾದಿಗಳು ಆಚರಿಸುತ್ತಾರೆ. ನಾನು ಹುಟ್ಟಿ ಬೆಳೆದ ಜಮಖಂಡಿ ತಾಲೂಕಿನ ಸಾವಳಗಿ ಎಂಬ ಗ್ರಾಮ ನಲವತ್ತೆರಡರ ಸ್ವಾತಂತ್ರ ಚಳವಳಿಯಲ್ಲಿ ಅಗ್ರ ಪಾತ್ರ ವಹಿಸಿತ್ತು. ಇಡೀ ಉತ್ತರ ಕರ್ನಾಟಕದ ಭೂಗತ ಸ್ವಾತಂತ್ರ ಹೋರಾಟಗಾರರಿಗೆ ಆಶ್ರಯ ನೀಡಿದ ಊರು ಅದು. ಗಾಂಧೀಜಿ ಹತ್ಯೆಯಾದಾಗ ಸಿಹಿ ಹಂಚಿದ ಅಂದಿನ ಹಿಂದೂ ಮಹಾಸಭಾದ ಏಕೈಕ ಕಾರ್ಯಕರ್ತನನ್ನು ಆಗ ತಲೆ ಬೋಳಿಸಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗಿತ್ತು ಎಂದು ಊರಿನ ಹಿರಿಯರು ಹೇಳಿದ್ದನ್ನು ನಾನು ಕೇಳಿರುವೆ.
ಇಂಥ ನನ್ನ ಸಾವಳಗಿ ನಿಧಾನವಾಗಿ ಗೋಡ್ಸೆವಾದಿಗಳ ತಾಣವಾಗತೊಡಗಿದೆ. ನಾನು ಈ ಬಾರಿ ಊರಿಗೆ ಹೋದ ಒಂದು ವಾರದ ಹಿಂದೆ ಈ ಹಳ್ಳಿಯಲ್ಲಿ ಆರೆಸ್ಸೆಸ್ ಪಥ ಸಂಚಲನ ನಡೆದಿತ್ತು. ಐದುನೂರು ಮಂದಿ ಚಡ್ಡಿಧಾರಿಗಳು ಲಾಠಿ ತಿರುಗಿಸುತ್ತ ಊರಿನಲ್ಲಿ ಮಾರ್ಚ್ ನಡೆಸಿದ್ದರು. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಯಾರೂ ಈಗ ಬದುಕಿಲ್ಲ. ಅವರ ಪೀಳಿಗೆಗೆ ಸೇರಿದ ಮಕ್ಕಳಿಗೆ ಗಾಂಧಿ-ನೆಹರೂ-ಆಝಾದ್ ಗೊತ್ತಿಲ್ಲ. ಗಾಂಧಿ ಹೆಸರು ಹೇಳುವ ಕಾಂಗ್ರೆಸ್-ಜನತಾದಳಗಳು ಇಲ್ಲಿ ಕಾಣಿಸಿಕೊಳ್ಳುವುದು ಚುನಾವಣೆಯಲ್ಲಿ ಮಾತ್ರ. ಉಳಿದ ಸಂದರ್ಭದಲ್ಲಿ ಇವರೆಲ್ಲ ತಮ್ಮ ದಂಧೆಗಳಲ್ಲಿ ತೊಡಗಿರುತ್ತಾರೆ. ಸಿದ್ದು ನ್ಯಾಮ ಗೌಡರಂಥವರು ಕಾಂಗ್ರೆಸ್‌ನಲ್ಲಿದ್ದರೂ ಆರೆಸ್ಸೆಸ್‌ನ ಗುಪ್ತ ಆರಾಧಕರು.
ಇನ್ನು ಕೋಮುವಾದವನ್ನು ಸೈದ್ಧಾಂತಿಕವಾಗಿ ಎದುರಿಸುವ ಎಡಪಕ್ಷಗಳು ಇಲ್ಲಿ ವಿಳಾಸಕ್ಕೂ ಸಿಗುವುದಿಲ್ಲ. ಈ ಪಕ್ಷಗಳಿಗೆ ಸೇರಿದ ಅಂಗನವಾಡಿ, ಪಂಚಾಯತ್, ಬಿಸಿಯೂಟ, ಬ್ಯಾಂಕ್, ಜೀವ ವಿಮಾದಂಥ ನೌಕರರ ಸಂಘಟನೆಗಳಿದ್ದರೂ ಅವೆಲ್ಲ ಸಂಬಳ ಹೆಚ್ಚಳ... ಸಂಗ್ರಹಕ್ಕೆ ಸೀಮಿತವಾಗಿವೆ. ಇನ್ನು ದಲಿತ ಸಂಘರ್ಷ ಸಮಿತಿ ಅಲ್ಲಲ್ಲಿ ಅವಾಜ್ ಮಾಡುತ್ತಿದ್ದರೂ, ಅದು ಹಲವಾರು ಬಣಗಳಾಗಿ ಒಡೆದು ಹೋಗಿದೆ. ಪ್ರಜ್ಞಾವಂತರೆಂದು ಕರೆದುಕೊಳ್ಳುವ ಸಾಹಿತಿಗಳಿದ್ದರೂ ಅವರೆಲ್ಲ ತಮ್ಮ ಕೆಲಸಗಳಿಗಾಗಿ ಅದೇ ಬಿಜೆಪಿ ಶಾಸಕರ ಬಳಿ ಕೈಹೊಸೆಯುತ್ತ ನಿಲ್ಲುವ ಸ್ವಾಭಿಮಾನ ಶೂನ್ಯಗಳಾಗಿದ್ದಾರೆ. ಉಭಯ ಕಮ್ಯುನಿಸ್ಟ್ ಪಕ್ಷಗಳು (ಸಿಪಿಐ-ಸಿಪಿಎಂ) ಈಗ ರಾಜ್ಯ ಸಮ್ಮೇಳನ ನಡೆಸುತ್ತಿವೆ.
ಸಿಪಿಎಂ ಜನವರಿ 8ರಿಂದ 10ರವರೆಗೆ ಚಿಕ್ಕಬಳ್ಳಾಪುರದಲ್ಲಿ, ಸಿಪಿಐ ಜ.12 ರಿಂದ 15ರವರೆಗೆ ಬೆಂಗಳೂರಿನಲ್ಲಿ ನಡೆಸುವ ಸಮ್ಮೇಳನಗಳಲ್ಲಿ ಈ ಗಂಭೀರ ಸವಾಲಿನ ಬಗ್ಗೆ ಚರ್ಚಿಸಬೇಕಿದೆ. ಇಂಥ ನಿರೀಕ್ಷೆ ಪ್ರಜ್ಞಾವಂತರಲ್ಲಿ ಇದುದ್ದರಿಂದ ಈ ಪಕ್ಷಗಳು ಫ್ಯಾಸಿಸ್ಟ್ ಕೋಮುವಾದದ ಸವಾಲಿನ ಬಗ್ಗೆ ಚರ್ಚಿಸಿ ಒಂದು ಕಾರ್ಯಕ್ರಮ ರೂಪಿಸಬೇಕಾಗಿದೆ. ಸಂಘಪರಿವಾರ ಕಳೆದ ಹದಿನೈದು ವರ್ಷಗಳಿಂದ ಈ ಭಾಗದಲ್ಲಿ ನಾನಾ ವಿಧ್ವಂಸಕ ಚಟುವಟಿಕೆ ನಡೆಸಿದ್ದರೂ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ನಾಯಕನೂ ಪ್ರತಿರೋಧ ಒಡ್ಡುವುದು ಹೋಗಲಿ, ಪತ್ರಿಕಾ ಹೇಳಿಕೆಯನ್ನು ನೀಡಿ ಖಂಡಿಸಿಲ್ಲ. ಬಂಡಾಯ ಲೇಖಕ ಬಸವರಾಜ ಸೂಳಿಬಾವಿ ಬಾಗಲಕೋಟದಲ್ಲಿ ಫ್ಯಾಸಿಸ್ಟರ ವಿರುದ್ಧ ಪ್ರತಿಭಟನೆ ನಡೆಸಿದಾಗ ಅವರನ್ನು ಬಂಧಿಸಲಾಗಿತ್ತು. ಆಗಲೂ ಕಾಂಗ್ರೆಸ್-ದಳ ನಾಯಕರು ಪ್ರಜ್ಞೆ ತಪ್ಪಿದವರಂತೆ ಬಿದ್ದಿದ್ದರು. ಈಗ ಸೂಳಿಬಾವಿ ಅವರು ಸುಸ್ತಾದವರಂತೆ ಕಾಣುತ್ತಾರೆ.
ಸಂಘಪರಿವಾರಕ್ಕೆ ಪ್ರತಿರೋಧವೇ ಇಲ್ಲದ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಸಿಂಧಗಿಯಂಥ ಘಟನೆಗಳು ನಿರಾತಂಕವಾಗಿ ನಡೆಯುತ್ತಲೇ ಹೋಗುತ್ತವೆ.ಇಂಥ ದುಷ್ಕೃತ್ಯಗಳ ಮೂಲಕವೇ ಭಾರತೀಯರನ್ನು ವಿಭಜಿಸಿ ಗುಜರಾತನ್ನು ಆರೆಸ್ಸೆಸ್ ಸ್ವಾಧೀನಪಡಿಸಿಕೊಂಡಿತು.ಈಗ ಕರ್ನಾಟಕ ಅಂಥ ಅಪಾಯದ ಅಂಚಿನಲ್ಲಿದೆ.ಹಾಗೆಂದು ಕೈಚೆಲ್ಲಿ ಕೂರಬೇಕಾಗಿಲ್ಲ. ಇದು ಮನುಷ್ಯತ್ವದ ಅಳಿವು-ಉಳಿವಿನ ಸವಾಲು. ಈ ಸವಾಲನ್ನು ಸ್ವೀಕರಿಸಿ ಎದಿರೇಟು ನೀಡಿದಾಗಲೇ ಬಸವಣ್ಣ, ಕನಕದಾಸ, ಟಿಪ್ಪು ಸುಲ್ತಾನ್, ಶಿಶುನಾಳ ಶರೀಫ, ಕುವೆಂಪು, ಬೇಂದ್ರೆ ಇಂಥವರ ಕರ್ನಾಟಕ ಸುರಕ್ಷಿತವಾಗಿ ಉಳಿಯುತ್ತದೆ.

Advertisement

0 comments:

Post a Comment

 
Top