ತುಮಕೂರು, ಜ:. 8 ಕೇಸರಿ ಬಾವುಟ, ಕಮಲದ ಚಿಹ್ನೆ ನಾಡಿನಲ್ಲಿ ಭಯೋತ್ಪಾದನೆ, ರಾಜಕೀಯ ಅಸ್ಥಿರತೆ ಉಂಟಾಗಲು ಕಾರಣವಾಗಿದೆ ಎಂದು ಕವಿ, ವಿಮರ್ಶಕ ಡಾ.ವಿಠಲಭಂಡಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಸಿದ್ಧಗಂಗಾ ಕಾಲೇಜಿನ ಸಭಾಂಗಣದಲ್ಲಿ ಅನನ್ಯ ಪ್ರಕಾಶನ, ಲೇಖಕಿಯರ ಸಂಘದ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ದಿವಂಗತ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ,ಲೇಖಕಿಯರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಇಂತಹ ಘಟನೆಗಳಿಂದ ಮನುಷ್ಯ ಇಂದು ಮನುಷ್ಯನಾಗಿ ಬಾಳದಂತಹ ಹಲವಾರು ಕಂದಕ, ವಿಘಟನೆಗಳು ಸೃಷ್ಟಿಯಾಗುತ್ತಿವೆ ಎಂದರು.
ಇಂದು ವ್ಯಾಪಾರೀಕರಣ ಎಲ್ಲೆಡೆ ಹೆಚ್ಚುತ್ತಿದೆ. ಪುಸ್ತಕ ಪ್ರಕಾಶಕರು ಲೇಖಕರನ್ನು ವಂಚಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಸಾಂಸ್ಕೃತಿಕ ಮೌಲ್ಯಗಳಿಗೆ ಮನ್ನಣೆ ದೊರೆಯದಂತಾಗಿದೆ. ದಾನ ಮಾಡಿದ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಪುರಾಣ, ಚರಿತ್ರೆ ಇರುವ ನಮ್ಮ ದೇಶದಲ್ಲಿ ವ್ಯಾಪಾರೀಕರಣದ ಸಂದರ್ಭದಲ್ಲೂ ಜನಮುಖಿ ಸಾಹಿತ್ಯವನ್ನು ಸೃಷ್ಟಿಸಬೇಕು. ಜನರೇ ಆಸಕ್ತಿ ಪಟ್ಟು ಓದುವಂತಹ ಪುಸ್ತಕಗಳನ್ನು ಬರೆಯಬೇಕು. ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಅಸಮಾನತೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಬರಹಗಳು ಹೊರಹೊಮ್ಮಬೇಕು ಎಂದರು.
ಕವಿ ವೀರಣ್ಣ ಮಡಿವಾಳ ಅವರಿಗೆ ದಿ.ಕೆ.ಸಾಂಬಶಿವಪ್ಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸ್ಕೃತಿ ಚಿಂತಕಿ ಡಾ.ವಿಜಯ, ಗ್ಯಾಟ್ ಒಪ್ಪಂದದ ಸಂದರ್ಭದಲ್ಲಿ ಅದರ ಜಾರಿಯ ಸ್ಪಷ್ಟ ಕಲ್ಪನೆಗಳು ಮಹಿಳೆಯರಿಗೆ ಇರಲಿಲ್ಲ. ಆದರೂ ಮಹಿಳಾ ಶೋಷಣೆಗೆ ಅವಕಾಶವಾಗುತ್ತದೆ ಎಂದು ನಾವೆಲ್ಲಾ ಲೇಖಕಿಯರ ಸಂಘದ ಮೂಲಕ ಪ್ರತಿಭಟಿಸಿದ್ದೆವು. ಇಂದು ಜಾಗತೀಕರಣದಿಂದಾಗಿ ಗ್ರಾಮೀಣ ಜನರಲ್ಲಿ ಧೈರ್ಯ, ವಂಚನೆ ವಿರುದ್ಧ ಧ್ವನಿ ಇಲ್ಲವಾಗಿದೆ. ಯಾವುದೇ ಆಧುನಿಕ ಸೌಲಭ್ಯ ಆರಂಭದಲ್ಲಿ ಹಲವಾರು ಟೀಕೆ, ತಿರಸ್ಕಾರಕ್ಕೆ ಕಾರಣವಾಗುತ್ತದೆ. ಕಾಲಾನಂತರ ಅಂತಹ ಸೌಲಭ್ಯ ಮತ್ತು ಸವಲತ್ತುಗಳು ಸಮುದಾಯಕ್ಕೆ ಹಿತವಾಗುತ್ತವೆ. ಯಾವುದೇ ವ್ಯಕ್ತಿ ಅಧುನಿಕ ಪರಿಣಾಮಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಸಾಂಸ್ಕೃತಿಕ ಎಚ್ಚರದ ಪ್ರಜ್ಞೆ ಎಂದಿಗಿಂತ ಇಂದು ಅವಶ್ಯಕ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಭೂಪತಿ ಅಧ್ಯಕ್ಷತೆ ವಹಿಸಿ, ಕವಿ ವೀರಣ್ಣಮಡಿವಾಳರ ಕಾವ್ಯ ಕುರಿತು ಪ್ರಶಂಸಿಸಿ ದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತಾ, ಪತ್ರಿಕೋದ್ಯಮಿ ಎಸ್.ನಾಗಣ್ಣ, ಹಿರಿಯ ಕವಯಿತ್ರಿಯರಾದ ಲಲಿತಸಿದ್ಧಬಸವಯ್ಯ, ರೂಪಾಹಾಸನ್, ವಸಂತಗೀತ, ಶಾಂತಕಂಪಾರ್ಲಹಳ್ಳಿ, ಡಾ.ಬೂದಾಳ್ ನಟರಾಜ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
0 comments:
Post a Comment