ಹೊಸದಿಲ್ಲಿ, ಜ.14: ಯೋಗಗುರು ಬಾಬಾ ರಾಮ್‌ದೇವ್ ಹೊಸದಿಲ್ಲಿಯಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯೊಂದು ದೊಡ್ಡ ಪ್ರಹಸನಕ್ಕೆ ಸಾಕ್ಷಿಯಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಮ್‌ದೇವ್ ಮೇಲೆ ಒಬ್ಬಾತ ಶಾಯಿಯನ್ನು ಚೆಲ್ಲಿದಾಗ ಯೋಗಗುರುವಿನ ಬೆಂಬಲಿಗರು ಆತನ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ರಾಮ್‌ದೇವ್ ಮೇಲೆ ಶಾಯಿಯನ್ನು ಚೆಲ್ಲಲೆತ್ನಿಸಿದ ಯುವಕನನ್ನು ಕಮ್ರಾನ್ ಎಂದು ಗುರುತಿಸಲಾಗಿದೆ. ರಾಮ್‌ದೇವ್ ಬೆಂಬಲಿಗರಿಂದ ತೀವ್ರವಾಗಿ ಥಳಿಸಲ್ಪಟ್ಟ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ನಗರದ ‘ಕಾನ್‌ಸ್ಟಿಟ್ಯೂಶನ್ ಕ್ಲಬ್’ನಲ್ಲಿ ರಾಮ್‌ದೇವ್ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತನಿದ್ದ ಕಮ್ರಾನ್ ಕಾಶ್ಮೀರದ ಬಗ್ಗೆ ಪ್ರಶಾಂತ್ ಭೂಷಣ್ ನೀಡಿದ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳ ಬಯಸಿದ್ದ. ಆದರೆ ಅದಕ್ಕೆ ರಾಮ್‌ದೇವ್ ಉತ್ತರಿಸಲು ನಿರಾಕರಿಸಿದರು.
ಇದರಿಂದ ಕೆರಳಿದ ಕಮ್ರಾನ್, ರಾಮ್‌ದೇವ್ ಮೇಲೆ ಮಸಿ ಚೆಲ್ಲಲು ಯತ್ನಿಸಿದನೆನ್ನಲಾಗಿದೆ.ರಾಮ್‌ದೇವ್ ಮೇಲೆ ಮಸಿ ಚೆಲ್ಲಲೆತ್ನಿಸಿದ ಘಟನೆಯು ಪೂರ್ವಯೋಜಿತವಲ್ಲವೆಂದು ಕಮ್ರಾನ್‌ನ ಸಹೋದರ ಮುಹಮ್ಮದ್ ಯೂನುಸ್ ಸಿದ್ದೀಕಿ ತಿಳಿಸಿದ್ದಾರೆ. ‘‘ಕಮ್ರಾನ್ ತಪ್ಪು ಮಾಡಿದ್ದಾನೆ. ಆದರೆ ಬಾಬಾ ರಾಮ್‌ದೇವ್ ಬೆಂಬಲಿಗರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದಿತ್ತು. ಯೋಗಗುರುವಿನ ಬೆಂಬಲಿಗರು ಕಮ್ರಾನ್‌ನ ಮೂಗು ಹಾಗೂ ಹಲ್ಲನ್ನು ಮುರಿದಿದ್ದಾರೆ. ರಾಮ್‌ದೇವ್ ದೇಶವನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಸ್ವತಃ ಅವರೇ ವಿದೇಶದಲ್ಲಿ ಭಾರೀ ಮೊತ್ತದ ಹಣವನ್ನು ಕೂಡಿಹಾಕಿದ್ದಾರೆ’’ ಎಂದು ಯೂನುಸ್ ಸಿದ್ದೀಕಿ ಆಪಾದಿಸಿದ್ದಾರೆ.
ಏತನ್ಮಧ್ಯೆ ಬಾಬಾ ರಾಮ್‌ದೇವ್ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ,ಇಂತಹ ಪ್ರಯತ್ನಗಳು ಕಪ್ಪು ಹಣದ ವಿರುದ್ಧ ಆಂದೋಲನವನ್ನು ಮುಂದುವರಿಸುವುದರಿಂದ ತನ್ನನ್ನು ಹಿಮ್ಮೆಟ್ಟಿಸಲಾರದು ಎಂದು ಹೇಳಿದ್ದಾರೆ.
‘‘ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸಲಿದ್ದೇನೆ. ಇಂತಹ ಪ್ರಯತ್ನಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರದು. ಕಪ್ಪು ಹಣವನ್ನು ಮರಳಿ ತರುವಂತೆ ಕೇಳಿದ ನನಗೆ ಕಪ್ಪು ಮಸಿ ದೊರೆತಿದೆ. ಜನತೆಯ ಕ್ಷೇಮಾಭಿವೃದ್ಧಿಗಾಗಿಯೇ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಯಾರು ಸತ್ಯಕ್ಕಾಗಿ ಹೋರಾಡುವರೋ ಅವರದಕ್ಕೆ ಬೆಲೆಯನ್ನು ತೆರಲೇಬೇಕಾಗುತ್ತದೆ’’ ಎಂದು ರಾಮ್‌ದೇವ್ ಹೇಳಿದ್ದಾರೆ.
0 comments:
Post a Comment