ಕೃಷ್ಣಾ ಮೇಲ್ದಂಡೆ ಮೂರನೆ ಹಂತದ ವಿಸ್ತ್ರತ ಯೋಜನೆಗೆ ಕಳೆದ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ, ಸರ್ಕಾರ ರೈತರ ಭವಿಷ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಶಾಸಕರುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಗುರುವಾರ ಭೇಟಿಯಾದ ಜಿಲ್ಲೆಯ ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯನ್ನು ೧೭೨೦೭ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲು ಜ. ೦೩ ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಸರ್ಕಾರ ರೈತರ ಭವಿಷ್ಯಕ್ಕೆ ಶಕ್ತಿ ತುಂಬುವಂತಹ ಕೆಲಸ ಮಾಡಿದೆ, ಇತ್ತೀಚೆಗೆ ಸರ್ಕಾರ ರೈತ ಪರ ಕೈಗೊಂಡಿರುವ ನಿರ್ಣಯಗಳ ಪೈಕಿ ಕೃಷ್ಣ ಮೇಲ್ದಂಡೆ ಮೂರನೆ ಹಂತದ ಯೋಜನೆಗೆ ಅನುಮೋದನೆ ನೀಡಿರುವ ನಿರ್ಣಯವು ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯಿಂದ ಬಾಗಲಕೋಟೆ, ಬಿಜಾಪುರ, ಕೊಪ್ಪಳ, ಗುಲಬರ್ಗಾ, ಯಾದಗಿರಿ, ರಾಯಚೂರು ಮತ್ತು ಗದಗ ಸೇರಿದಂತೆ ೦೭ ಜಿಲ್ಲೆಗಳ ರೈತರ ಬದುಕು ಹಸನಾಗಲಿದೆ. ಕೊಪ್ಪಳ ಜಿಲ್ಲೆಯ ಬರಪೀಡಿತ ತಾಲೂಕುಗಳೆಂದೆ ಬಿಂಬಿತವಾಗಿರುವ ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ರೈತರಿಗೆ ವರವಾಗಿ ಪರಿಣಮಿಸಲಿದೆ. ಈ ಯೋಜನೆಯಡಿ ಜಿಲ್ಲೆಗೆ ೧೧. ೫ ಟಿ.ಎಂ.ಸಿ. ನೀರು ಲಭ್ಯವಾಗಲಿದ್ದು, ಸರ್ಕಾರ ಆದಷ್ಟು ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ಇದೆ. ಈ ಯೋಜನೆ ಅನುಮೋದನೆಗೊಳ್ಳಲು ಶ್ರಮಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಗಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ಅಮರೇಗೌಡ ಬಯ್ಯಾಪುರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
0 comments:
Post a Comment