;ಮಡೆಸ್ನಾನ ವಿರುದ್ಧ ಜನಜಾಗೃತಿಗಾಗಿ ಬೆಂಗಳೂರಿನಿಂದ ಉಡುಪಿಗೆ ಪಾದಯಾತ್ರೆ
ಮೈಸೂರು, ಡಿ. 16: ‘ಮಡೆಸ್ನಾನ ನಿಷೇಧಿಸಿದರೆ ಹಾನಿಯಿಲ್ಲ; ನಿಷೇಧಿಸದಿದ್ದರೆ ನಷ್ಟವೂ ಇಲ್ಲ’ ಎಂಬ ಹೇಳಿಕೆ ಮೂಲಕ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಮಾಜವನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ನಿಡುಮಾಮಿಡಿ ಮಹಾಸಂಸ್ಥಾನ ಮಠ ಹಾಗೂ ಮಾನವ ಧರ್ಮಪೀಠದ ಅಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಡೆಸ್ನಾನ-ಮಡೆಸೇವನೆ-ಪಂಕ್ತಿಭೇದ ಮುಂತಾದ ಅನಿಷ್ಟ ಪದ್ಧತಿಗಳ ನಿಷೇಧಕ್ಕಾಗಿ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನಗರದ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅನಿಷ್ಟ ಪದ್ಧತಿಯ ಆಚರಣೆ ಅಥವಾ ನಿಷೇಧವನ್ನು ಸಮಾಜ ಸ್ವಾಸ್ಥ್ಯದ ದೃಷ್ಟಿಯಿಂದ ನೋಡಬೇಕೇ ಹೊರತು ಲಾಭ-ನಷ್ಟದ ದೃಷ್ಟಿಯಿಂದಲ್ಲ ಎಂಬುದನ್ನು ಪೇಜಾವರ ಸ್ವಾಮೀಜಿ ಹಾಗೂ ಸರಕಾರ ಅರಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಹಿಂದೂಧರ್ಮದ ಇಬ್ಬಂದಿ ನೀತಿ ಹಾಗೂ ವಿರೋಧಭಾಸದ ಪ್ರತೀಕದಂತಿರುವ ಪೇಜಾವರ ಸ್ವಾಮೀಜಿ ಇಂತಹ ಗೊಂದಲಕಾರಿ ಹೇಳಿಕೆ ನೀಡುವ ಮೂಲಕ ತಾನು ‘ಧರ್ಮಾಚಾರ್ಯ ಅಲ್ಲ’; ‘ದ್ವಂದ್ವಾಚಾರ್ಯ’ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಅವರು ಟೀಕಿಸಿದರು.
ಕಳೆದ ನಲವತ್ತು ವರ್ಷಗಳಿಂದ ತಾನು ಪೇಜಾವರ ಸ್ವಾಮೀಜಿಯವರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದಲಿತರ ಸಮಸ್ಯೆಗಳು ಮತ್ತು ಅಸ್ಪಶತೆ ನಿವಾರಣೆ ಕುರಿತು ಬೂಟಾಟಿಕೆಯ ಕೆಲಸವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಅದರಿಂದ ದಲಿತರಿಗೆ ಯಾವ ಪ್ರಯೋಜನವೂ ಆಗಿಲ್ಲ ಎಂದರು.
ಮಡೆಸ್ನಾನ ಮತ್ತು ಮಡೆಸೇವನೆಯಂತಹ ಸಾಮಾಜಿಕ ಅನಿಷ್ಟಗಳಿಗೆ ಪಂಕ್ತಿ ಭೇದವೇ ತಾಯಿಬೇರು. ಆದುದರಿಂದ ಬ್ರಾಹ್ಮಣ ಮಠ ಮತ್ತು ಕ್ಷೇತ್ರಗಳಲ್ಲಿ ಆಚರಣೆಯಲ್ಲಿರುವ ಪಂಕ್ತಿಭೇದವನ್ನು ಮೊದಲು ನಿಷೇಧಿಸಬೇಕು. ಮೈಸೂರಿನ ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುವ ಪೇಜಾವರ ಸ್ವಾಮೀಜಿ ಉಡುಪಿ ಕ್ಷೇತ್ರ ಮತ್ತು ಮಠಗಳಲ್ಲಿನ ಪಂಕ್ತಿ ಭೇದ ನಿಷೇಧಕ್ಕೆ ಹೋರಾಟ ಮಾಡಲಿ ಎಂದು ಅವರು ಸವಾಲು ಹಾಕಿದರು.
‘ನಂಬಿಕೆಗಳನ್ನು ಬಲಾತ್ಕಾರದಿಂದ ನಿಷೇಧಿಸು ವುದು ಸರಿಯಲ್ಲ’ ಎಂಬ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಹೇಳಿಕೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ನಿಡುಮಾಮಿಡಿ ಸ್ವಾಮೀಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರವೊಂದರ ಪ್ರತಿನಿಧಿಯಾಗಿ ರುವ ಸಚಿವರಿಗೆ ಸಂವಿಧಾನ ಮಾರ್ಗದರ್ಶಿ ಯಾಗಬೇಕೇ ಹೊರತು, ಧರ್ಮಗ್ರಂಥಗಳಲ್ಲ ಎಂಬ ಸಲಹೆ ನೀಡಿದರು.
ಮಡೆಸ್ನಾನ ನಿಷೇಧ ವಿಷಯದಲ್ಲಿ ರಾಜ್ಯದ ಬಹುತೇಕ ಮಠಗಳ ಸ್ವಾಮೀಜಿಗಳಿಗೆ ಸಹಮತ ವಿದೆ. ಆದರೆ ಆ ಬಗ್ಗೆ ಬಹಿರಂಗವಾಗಿ ಮಾತನಾ ಡಿದರೆ ತಮ್ಮ ಮಠ ಮತ್ತು ಸಂಸ್ಥೆಗಳ ಬೆಳವಣಿಗೆಗೆ ಅದರಿಂದ ತೊಂದರೆಯಾಗಬಹುದು ಎಂಬ ಆತಂಕದಿಂದ ವೌನ ತಾಳಿದ್ದಾರೆ. ಆದುದರಿಂದ ಇಂತಹ ಪರ್ಯಾಯ ಚಿಂತನೆಯುಳ್ಳ ಸ್ವಾಮೀಜಿ ಗಳನ್ನು ಸಂಘಟಿಸುವ ಸಲುವಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಇದೇ ಡಿ.20ರಂದು ದಾವಣಗೆರೆ ಯಲ್ಲಿ ಮಠಾಧಿಪತಿಗಳ ಸಮ್ಮೇಳನ ಏರ್ಪಡಿಸ ಲಾಗಿದೆ ಎಂದು ಅವರು ತಿಳಿಸಿದರು.
ಮಾನವ ಘನತೆಗೆ ಧಕ್ಕೆಯಾಗಿರುವ ಮಡೆಸ್ನಾನವನ್ನು ಸರಕಾರ ಕೂಡಲೇ ನಿಷೇಧಿಸ ಬೇಕು. ಇಲ್ಲವಾದಲ್ಲಿ ನಾಡಿನ ವಿವಿಧ ಮಠಾಧಿ ಪತಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಶ್ರೀಸಾಮಾನ್ಯರ ಜತೆಗೂಡಿ ಜನವರಿ ಮೊದಲ ವಾರದಲ್ಲಿ ಬೆಂಗಳೂರಿನಿಂದ ಉಡುಪಿಗೆ ಪ್ರತಿಭಟನಾರ್ಥ ಪಾದಯಾತ್ರೆ ಹಮ್ಮಿಕೊಳ್ಳುವು ದಾಗಿ ಸ್ವಾಮೀಜಿ ಎಚ್ಚರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಣೆ ಯಲ್ಲಿರುವ ಮಡೆಸ್ನಾನಕ್ಕೆ ಧಾರ್ಮಿಕ ತಳಪಾಯ ವಿಲ್ಲ. ಪುರೋಹಿತಶಾಹಿಗಳು ಇತರ ಜನಾಂಗ ದವರನ್ನು ಅಡಿಯಾಳು ಮಾಡಿಕೊಂಡು ತಮ್ಮ ಸ್ವಾರ್ಥವನ್ನು ಮೆರೆಯಲು ಸೃಷ್ಟಿಸಿಕೊಂಡಿರುವ ವೌಢ್ಯದ ಪರಮಾವಧಿ. ಧಾರ್ಮಿಕ ಆಚರಣೆ ಗಳು ಜ್ಞಾನದ ಬೆಳಕು ಚೆಲ್ಲುವಲ್ಲಿ ವಿಫಲವಾಗಿ ರುವ ಕಾರಣ ವೌಢ್ಯತೆ ಎಲ್ಲೆಡೆ ಉಲ್ಬಣಿಸಿದೆ ಎಂದರು.
ಪಾದ ನಮಸ್ಕಾರ ನಿಷೇಧವಾಗಲಿ...
ದೈನಂದಿನ ಬದುಕಿನಲ್ಲಿ ಎಲ್ಲರಲ್ಲೂ ಸಮಾನತೆ ಮೂಡಬೇಕಾದರೆ ಮೊದಲ ಹೆಜ್ಜೆಯಾಗಿ ಒಬ್ಬರು ಇನ್ನೊಬ್ಬರಿಗೆ ಪಾದ ನಮಸ್ಕಾರ ಮಾಡುವುದನ್ನು ನಿಷೇಧಿಸಬೇಕು. ಅದು ಸ್ವಾಮೀಜಿಗಳಿಂದಲೇ ಆಚರಣೆಗೆ ಬರಬೇಕು ಎಂದು ಸಾಹಿತಿ ಡಾ. ಮಳಲಿ ವಸಂತ ಕುಮಾರ್ ಹೇಳಿದರು.ಶನಿವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ
ಮಡೆಸ್ನಾನ ಮತ್ತು ಮಡೆಸೇವನೆಯಂತಹ ಅನಿಷ್ಟ ಪದ್ಧತಿಗಳನ್ನು ನಿಷೇಧಿಸುವವರೆಗೂ ರಾಜ್ಯಾದ್ಯಂತ ಸರಕಾರದ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.
ಶನಿವಾರ ಮೈಸೂರಿನಲ್ಲಿ ಪ್ರತಿಭಟನೆ ಪ್ರಾರಂಭವಾಗಲಿದ್ದು, ನಗರದ ಎಲ್ಲ ಶಾಲೆ-ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗಾವಡಗೆರೆಯ ಗುರುಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ವಾಟಾಳು ಸೂರ್ಯಸಿಂಹಾಸನ ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಉಪಸ್ಥಿತರಿದ್ದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಎಂ. ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು
0 comments:
Post a Comment