PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ.  ರೈತರು ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುವಂತೆ ಹೆಚ್ಚು ಆದಾಯದಾಯಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ರೈತರಲ್ಲಿ ಮನವಿ ಮಾಡಿದರು.
  ಜಲಾನಯನ ಅಭಿವೃದ್ಧಿ ಇಲಾಖೆಯು ಸಮಗ್ರತ ಜಲಾನಯನ ನಿರ್ವಹಣೆ ಕಾರ್ಯಕ್ರಮ ಯೋಜನೆಯಡಿ ಕೊಪ್ಪಳ ತಾಲೂಕು ಮೆತಗಲ್ ಗ್ರಾಮದ ಶ್ರೀ ಆದಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಜಲಾನಯನ ಮೇಳ ಕಾರ್ಯಕ್ರಮ ಹಾಗೂ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
  ಜಲಸಂರಕ್ಷಣೆ, ಮಣ್ಣು ಫಲವತ್ತತೆಯ ರಕ್ಷಣೆ, ಚೆಕ್ ಡ್ಯಾಂ, ನಾಲಬದು ಮುಂತಾದ ಕಾರ್ಯಕ್ರಮಗಳ ಮೂಲಕ ಜಲಾನಯನ ಅಭಿವೃದ್ಧಿ ಇಲಾಖೆಯು ರೈತೋಪಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.  ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳಿಂದ ಅಂತರ್ಜಲ ಅಭಿವೃದ್ಧಿಗೆ ಸಹಾಯಕಾರಿಯಾಗುತ್ತಿದೆ.  ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯು ಕೇವಲ ಇಲಾಖೆಯಿಂದ ಸಫಲವಾಗಲು ಸಾಧ್ಯವಿಲ್ಲ.  ಇದಕ್ಕೆ ರೈತ ಬಂಧುಗಳು ಕೈಜೋಡಿಸುವುದು ಅಗತ್ಯವಾಗಿದೆ.  ಸ್ವಸಹಾಯ ಗುಂಪುಗಳು, ಬಳಕೆದಾರರ ಗುಂಪುಗಳು ಅಲ್ಲದೆ ಜಲಾನಯನ ಸಮಿತಿಯ ಸದಸ್ಯರುಗಳು ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಆರ್ಥಿಕ ಅಭಿವೃದ್ಧಿ ಹೊಂದಬೇಕು.  ಪದೇ ಪದೇ ತಲೆದೋರುವ ಬರಪರಿಸ್ಥಿತಿಯನ್ನು ರೈತರು ಸಮರ್ಥವಾಗಿ ಎದುರಿಸಲು ಹಾಗೂ ಸ್ವಾವಲಂಬಿ ಬದುಕು ಸಾಗಿಸಲು ಆರ್ಥಿಕಾಭಿವೃದ್ಧಿ ಕೃಷಿ ಚಟುವಟಿಕೆಗಳು ಸಹಾಯಕಾರಿಯಾಗಬಲ್ಲದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಹೇಳಿದರು.
  ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಮಲ್ಲಿಕಾರ್ಜುನ ಅವರು, ಯೋಜನೆಯನ್ನು ೨೦೦೯ ರಿಂದ ಪ್ರಾರಂಭಿಸಲಾಗಿದ್ದು, ಮಣ್ಣು ಮತ್ತು ನೀರು ಸಂರಕ್ಷಣೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಇಲಾಖೆಯು ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ ಹಾಗೂ ನಿಲ್ಲುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವುದು ಜಲಾನಯನ ಅಭಿವೃದ್ಧಿಯ ಪ್ರಮುಖ ಉದ್ದೇಶ. ಯೋಜನೆ ಯಶಸ್ವಿಯಾಗಲು ಜನರ ಸಹಭಾಗಿತ್ವ, ಜನರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.  ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೆ ಇಲಾಖೆಯು ಭೂ-ಹಿಡುವಳಿ ವಿವರ, ಕಸುಬು, ಮೂಲ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸಮೀಕ್ಷಾ ವರದಿ ಆಧಾರ ಹಾಗೂ ಅಗತ್ಯಕ್ಕನುಗುಣವಾಗಿ ಚೆಕ್ ಡ್ಯಾಂ, ನಾಲಾಬದು ನಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.  ಅಲ್ಲದೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಗಾಗಿ ಬಳಕೆದಾರರ ಗುಂಪು ರಚನೆ, ಸ್ವ-ಸಹಾಯ ಗುಂಪು ರಚನೆ ಕೈಗೊಳ್ಳಲಾಗಿದೆ.  ಇದು ೫ ವರ್ಷಗಳ ಕಾರ್ಯಕ್ರಮವಾಗಿದ್ದು, ಹಂತ- ಹಂತವಾಗಿ ಅನುಷ್ಠಾನ ಮಾಡಲಾಗುವುದು.  ಭೂ-ರಹಿತರಿಗೆ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಲು ಸ್ವ-ಸಹಾಯ ಗುಂಪುಗಳಿಗೆ ಸುತ್ತು ನಿಧಿ ನೀಡಲಾಗುತ್ತಿದೆ. ಜನಸಂಖ್ಯಾ ಹೆಚ್ಚಳದಿಂದಾಗಿ ಸಾಗುವಳಿ ಭೂಮಿ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು, ಜಲಾನಯನ ಅಭಿವೃದ್ಧಿ ಇಲಾಖೆಯ ಜಿಲ್ಲಾ ತಾಂತ್ರಿಕ ಅಧಿಕಾರಿ ವಿ.ಕೆ. ಕಮತರ್ ಅವರು ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ರೂಪರೇಷೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಇದೇ ಸಂದರ್ಭದಲ್ಲಿ ತಾಲೂಕಿನ ಸುಮಾರು ೨೬ ಸ್ವ-ಸಹಾಯ ಗುಂಪುಗಳಿಗೆ ತಲಾ ೫೦೦೦೦ ರೂ.ಗಳಂತೆ ಒಟ್ಟು ೧೩ ಲಕ್ಷ ರೂ.ಗಳ ಸುತ್ತು ನಿಧಿ ಚೆಕ್ ಅನ್ನು ಆಯಾ ಸ್ವ-ಸಹಾಯ ಗುಂಪುಗಳಿಗೆ ವಿತರಿಸಲಾಯಿತು.  
  ಹಾಸಗಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಪ್ಪ ತಿಮ್ಮಪ್ಪ ಜೋಗಿನರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ತಾ.ಪಂ. ಸದಸ್ಯೆ ಲಲಿತಾ ಜಗದೀಶ ಗೌಡ್ರ, ಹಾಸಗಲ್ ಗ್ರಾ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ಹನುಮಂತಪ್ಪ,  ಚಿಕ್ಕಬೊಮ್ಮನಾಲ ಗ್ರಾ.ಪಂ. ಅಧ್ಯಕ್ಷೆ ನಿಂಗಮ್ಮ ಭಜಂತ್ರಿ, ಉಪಾಧ್ಯಕ್ಷ ಬಸಯ್ಯ ನಿರಂಜನಮಠ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಮಾಯಣ್ಣ, ಜಂಟಿಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಪಶುಪಾಲನೆ ಮತ್ತು ಪಶು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ನಿಂಬರಗಿ ಮುಂತಾದ ಗಣ್ಯರು, ಅಧಿಕಾರಿಗಳು ಭಾಗವಹಿಸಿದ್ದರು.  ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಷಯ ತಜ್ಞ ಡಾ. ಪಿ.ಆರ್. ಬದ್ರಿಪ್ರಸಾದ್, ಹಿರಿಯ ವಿಜ್ಞಾನಿ ಡಾ. ಪಿ.ಜಿ. ಮಸ್ತಾನರೆಡ್ಡಿ, ಎಸ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ಹೆಚ್.ಎಸ್. ಹೊನ್ನುಣಸಿ ಅವರು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ತಾಲೂಕಾ ಜಲಾನಯನ ಅಭಿವೃದ್ಧಿ ಅಧಿಕಾರಿ ಜಂಬಣ್ಣ ಐಲಿ ಅವರು ಸ್ವಾಗತಿಸಿದರು.  ಸಮಾರಂಭದಲ್ಲಿ ಹಾಸಗಲ್ ಮತ್ತು ಚಿಕ್ಕಬೊಮ್ಮನಾಳ ಜಲಾನಯನ ಉಪಸಮಿತಿಯ ಸದಸ್ಯರು, ಗ್ರಾ.ಪಂ. ಸದಸ್ಯರುಗಳು, ಸ್ವ-ಸಹಾಯ ಗುಂಪು, ಬಳಕೆದಾರರ ಗುಂಪಿನ ಸದಸ್ಯರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top