PLEASE LOGIN TO KANNADANET.COM FOR REGULAR NEWS-UPDATES


: ಮಡೆಸ್ನಾನ ನಿಷೇಧಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಸಮಾವೇಶ



ದಾವಣಗೆರೆ, ಡಿ. 20: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿನ ‘ಮಡೆಸ್ನಾನ’ ಸೇರಿದಂತೆ ಅಸಹ್ಯ ಆಚರಣೆಗಳು ಹಾಗೂ ಅನಿಷ್ಟ ಪದ್ಧತಿಗಳ ಪತ್ತೆಗೆ ಎಲ್ಲ ಸಮುದಾಯದ ಪ್ರಜ್ಞಾವಂತರ ನ್ನೊಳ್ಳಗೊಂಡ ಸಮಿತಿ ರಚಿಸಲು ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ರೇಣುಕಾ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳು ಮಡೆಸ್ನಾನ ನಿಷೇಧಿಸಲು ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಪ್ರಜ್ಞಾವಂತರ ಸಮಿತಿ ರಚಿಸಿ, ಆ ಸಮಿತಿ ಮುಖೇನ ನಾಡಿನಲ್ಲಿರುವ ಅನಿಷ್ಟ ಪದ್ಧತಿಗಳನ್ನು ಪತ್ತೆ ಮಾಡಿ ಅವುಗಳನ್ನು ನಿಷೇಧಿಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದನ್ವಯ ಅಧಿಕಾರ ಪಡೆದು ಒಂದು ಧರ್ಮದ ಸೀಮಿತ ವ್ಯಾಪ್ತಿಗೆ ಅಂಟಿಕೊಂಡು ಮಾತನಾಡುವ ಸಚಿವರಾದ ಸುರೇಶ ಕುಮಾರ್, ವಿ.ಎಸ್.ಆಚಾರ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದರು.

ಮನುಷ್ಯ-ಮನುಷ್ಯರ ಮಧ್ಯೆ ಮೇಲು-ಕೀಳು ಭಾವನೆ ಮೂಡಿಸುವ, ಸಾಮಾಜಿಕ ಸಮಾನತೆ, ಏಕತೆಗೆ ಧಕ್ಕೆ ತರುವಂತಹ ‘ಮಡೆಸ್ನಾನ’ದಂತಹ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕು. ಸಂಪ್ರದಾಯ ವಾದಿಗಳು, ಸಮಾನತೆ ವಿರೋಧಿಗಳು, ವರ್ಣಾಶ್ರಮ ಸಮರ್ಥಿಸುವವರು ಪ್ರೊತ್ಸಾಹಿಸುವ ಪದ್ಧತಿಯಾಗಿದೆ ಮಡೆಸ್ನಾನ ಎಂದ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದರು.

ಕಾಗಿನೆಲೆ ಕನಕ ಗುರು ಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಮಡೆಸ್ನಾನ ಮತ್ತು ಮಡೆ ತಿನ್ನುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರಕಾರ ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧಿಸಿದಂತೆ ಮಡೆಸ್ನಾವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠದ ಚರ ಪೀಠಾಧಿಪತಿ ಶ್ರೀಸಿದ್ದಲಿಂಗೇಶ್ವರ ಸ್ವಾಮಿಗಳು, ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮಿಗಳು, ಪ್ರಗತಿಪರ ಸಂಘಟನೆಗಳ ಎಂ.ಶಿವಕುಮಾರ, ವಕೀಲ ಎಲ್.ಎಚ್.ಅರುಣಕುಮಾರ, ಬಿ.ಎಂ.ಹನು ಮಂತಪ್ಪ, ಪ್ರೊ.ಎಸ್.ಎಚ್.ಪಟೇಲ್, ಪ್ರೊ.ಬಿ.ವಿ. ವೀರಭದ್ರಪ್ಪ, ಎನ್.ಎಸ್.ರಾಜು, ಆವರಗೆರೆ ಎಚ್.ಜಿ.ಉಮೇಶ ಮತ್ತಿತರರು ಹಾಜರಿದ್ದರು.

ಅಡ್ಡಪಲ್ಲಕ್ಕಿ ಉತ್ಸವ ನಿಷೇಧಿಸಿ
ಮಡೆಸ್ನಾನದಂತೆಯೇ ವೀರಶೈವ ಲಿಂಗಾಯತ ಸಮುದಾಯದಲ್ಲೂ ಅಡ್ಡಪಲ್ಲಕ್ಕಿ ಉತ್ಸವದಂತಹ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದು, ಮಡೆ ಸ್ನಾನದ ಜೊತೆಗೆ ಅಡ್ಡಪಲ್ಲಕ್ಕಿ ಉತ್ಸವವನ್ನು ನಿಷೇಧ ಮಾಡಬೇಕೆಂದು ಪಂಚಮಸಾಲಿ ಪೀಠದ ಚರ ಪೀಠಾಧಿಪತಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಒತ್ತಾಯಿಸಿದರು.

ಅಡ್ಡಪಲ್ಲಕ್ಕಿ, ತಲೆ ಬೋಳಿಸಿಕೊಳ್ಳುವುದೂ ವೌಢ್ಯ: ಪಂಡಿತಾರಾಧ್ಯ ಸ್ವಾಮೀಜಿ ಕರೆ
ಬೆತ್ತಲೆ ಸೇವೆ, ಮಡೆಸ್ನಾನಗಳಷ್ಟೆ ಅನಿಷ್ಟ ಪದ್ಧತಿಗಳಲ್ಲ. ಅಡ್ಡಪಲ್ಲಕ್ಕಿ ಉತ್ಸವ, ತಲೆ ಬೋಳಿಸಿಕೊಳ್ಳುವುದು ಕೂಡಾ ಮೌಢ್ಯ ಪದ್ಧತಿಗಳು. ಅವುಗಳ ವಿರುದ್ಧ ಜನಜಾಗೃತಿ ಮೂಡಿಸಿ, ಅಂತಹ ಸ್ಥಳಗಳಿಗೆ ಸಾರ್ವಜನಿಕರು ಹೋಗುವುದನ್ನು ನಿಲ್ಲಿಸಬೇಕಾಗಿದೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಮಂಗಳವಾರ ನಗರದ ರೇಣುಕಾ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳು ಮಡೆಸ್ನಾನ ನಿಷೇಧಿಸಲು ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಡೆಸ್ನಾನ ಮಾಡುವವರಿಗೆ ಚರ್ಮ ಕಾಯಿಲೆ ವಾಸಿಯಾಗದು. ಬದಲಿಗೆ ಮೈ ಕಡಿತ ಹೆಚ್ಚಾಗಲಿದೆ ಎಂದು ಲೇವಡಿ ಮಾಡಿದರು.

ಈ ತಿಂಗಳ 31ರ ಒಳಗೆ ಮಡೆಸ್ನಾನದ ವಿರುದ್ಧ ಸರಕಾರ ಪ್ರಬಲ ಕಾನೂನು ರಚಿಸದಿದ್ದರೆ, ನನ್ನನ್ನು ಸೇರಿದಂತೆ ನಾಡಿನ ಹಲವು ಮಠಾಧೀಶರ ನೇತೃತ್ವದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಯಲಿದೆ. ಒಂದು ವೇಳೆ ಆನಂತರ ಆಗುವ ಪರಿಣಾಮವನ್ನು ಸರಕಾರವೇ ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿಗಳು ಇದೇ ವೇಳೆ ಸರಕಾರಕ್ಕೆ ಎಚ್ಚರಿಕೆ ನೀಡಿದರು

Advertisement

0 comments:

Post a Comment

 
Top