ಕೊಪ್ಪಳ ಡಿ. : ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಡಿ. ೧೮ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿರುವ ಪಿಡಿಓ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡುವ ಸಲುವಾಗಿ ನಡೆಯಲಿರುವ ಪರೀಕ್ಷೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಕರ್ನಾಟಕ ಲೋಕಸೇವಾ ಆಯೋಗ ಡಿ. ೧೮ ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದೆ. ಕೊಪ್ಪಳದ ೧೭ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಒಟ್ಟು ೪೩೨೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ ಒಟ್ಟು ೨೧೨೮೭೬ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಬಾರಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲು ಲೋಕಸೇವಾ ಆಯೋಗ ಸೂಚನೆ ನೀಡಿದೆ. ಅಲ್ಲದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್, ಬ್ಲೂಟೂಥ್ ಡಿವೈಸ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಬರುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಯನ್ನು ಪರೀಕ್ಷೆಯಿಂದ ಅನರ್ಹಗೊಳಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್ ತರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪರೀಕ್ಷೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕತೆಯಿಂದ ವ್ಯವಸ್ಥಿತವಾಗಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗದ ಸೂಚನೆಯಂತೆ ಪ್ರತಿ ನಾಲ್ಕರಿಂದ ಐದು ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ನೇಮಕ ಮಾಡಲಾಗುವ ಸಂವೀಕ್ಷಕರು, ಮುಖ್ಯ ಮೇಲ್ವಿಚಾರಕರು, ಹೆಚ್ಚುವರಿ ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು, ಸಮನ್ವಯ ಮೇಲ್ವಿಚಾರಕರು ಆಯೋಗದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು. ನಿಯಮ ಉಲ್ಲಂಘಿಸಿ, ಯಾವುದೇ ಅಕ್ರಮ ನಡೆಸುವವರ ವಿರುದ್ಧ ಅಥವಾ ಸೂಚನೆಗಳನ್ನು ಪಾಲಿಸದೇ ಇರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಎಚ್ಚರಿಕೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಯಲ್ಲಪ್ಪ ಪಂಡಿತ್ ಅವರು ಪರೀಕ್ಷೆ ಕುರಿತಂತೆ ವಿವರಣೆ ನೀಡಿ, ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯ, ಶ್ರೀ ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಶ್ರೀಮತಿ ಬಸಮ್ಮ ಕಾತರಕಿ ಪ.ಪೂ. ಕಾಲೇಜು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾನೂನು ಕಾಲೇಜು, ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಎಸ್.ಎಫ್.ಎಸ್. ಪ್ರೌಢಶಾಲೆ, ಕಾಳಿದಾಸ ಪ್ರೌಢಶಾಲೆ, ಶಾರದ ಪ್ರಾಥಮಿಕ ಮತ್ತು ಪ್ರೌಢಶಾಲೆ, ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ದದೇಗಲ್‌ನ ಮಿಲೇನಿಯಂ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೇರಿದಂತೆ ಒಟ್ಟು ೧೭ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ವಸ್ತುನಿಷ್ಟ ಬಹು ಆಯ್ಕೆ ಮಾದರಿಯಾಗಿದ್ದು, ಒಟ್ಟು ೧೫೦ ಅಂಕಗಳಿದ್ದು, ಏಕ ಪತ್ರಿಕೆಯ ಪರೀಕ್ಷೆ ಆಗಿರುತ್ತದೆ. ಇದರಲ್ಲಿ ಕಂಪ್ಯೂಟರ್ ಸಾಕ್ಷರತೆಗೆ ೩೦ ಅಂಕಗಳು, ಸಾಮಾನ್ಯ ಕನ್ನಡ- ೩೦, ಸಾಮಾನ್ಯ ಜ್ಞಾನ-೩೦, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯ- ೩೦ ಹಾಗೂ ಸಾಮಾನ್ಯ ಇಂಗ್ಲೀಷ್‌ಗೆ ೩೦ ಅಂಕಗಳು ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಪರೀಕ್ಷೆಗಾಗಿ ನೇಮಕ ಮಾಡಲಾಗಿರುವ ಮಾರ್ಗಾಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment