ಕೊಪ್ಪಳ : ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಜಂಟಿಯಾಗಿ ನೀಡುವ ಮಾಧ್ಯಮ ಫೆಲೋಷಿಪ್‌ಗೆ ಕೊಪ್ಪಳದ ಪತ್ರಕರ್ತ ಬಸವರಾಜ ಕರುಗಲ್ ಹಾಗೂ ಹೊಸಪೇಟೆಯ ಆಕಾಶವಾಣಿ ಎಫ್ ಎಂ ಕೇಂದ್ರದ ಪ್ರಸಾರ ನಿರ್ವಾಹಕ ಮಂಜುನಾಥ ಡಿ.ಡೊಳ್ಳಿನ್ ಆಯ್ಕೆಯಾಗಿದ್ದಾರೆ ಎಂದು ರಂಗಸೇತುವಿನ ಸಂಚಾಲಕ ಸಜ್ಜಾದ್ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಲಾ ೨೦ ಸಾವಿರ ರು.ಗಳ ನಗದು ಪುರಸ್ಕಾರವನ್ನು ಈ ಫೆಲೋಷಿಪ್ ಒಳಗೊಂಡಿದೆ. ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ, ಬಾಲ್ಯವಿವಾಹ ತಡೆಗಟ್ಟುವಿಕೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕುರಿತ ಜಾಗೃತಿ, ಶಿಕ್ಷಣ, ಆರೋಗ್ಯ ಮತ್ತಿತರ ಮಕ್ಕಳ ಹಕ್ಕುಗಳ ಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಕೈಗೊಳ್ಳಲು ಯುನಿಸೆಫ್ ಮತ್ತು ಕೆಸಿಆರ್‌ಓ ಫೆಲೋಷಿಪ್ ನೀಡುತ್ತಿವೆ.
ರಾಜ್ಯದ ವಿವಿಧ ಭಾಗಗಳಿಗೆ ಸೇರಿದ ಐವರು ಕನ್ನಡ ಹಾಗೂ ಇಬ್ಬರು ಇಂಗ್ಲಿಷ್ ಪತ್ರಕರ್ತರು, ಹವ್ಯಾಸಿ ಬರಹಗಾರರು ಮಾಧ್ಯಮ ಫೆಲೋಷಿಪ್‌ಗೆ ಆಯ್ಕೆಯಾಗಿದ್ದಾರೆ. ಬರಹಗಾರರ ಪ್ರಕಟಿತ ಬರಹಗಳು, ಮಕ್ಕಳ ಹಕ್ಕುಗಳ ರಕ್ಷಣೆಯ ಅಗತ್ಯತೆ ಬಗೆಗೆ ಸಲ್ಲಿಸಿದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಫೆಲೋಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಡಾ.ಆರ್.ಪದ್ಮಿನಿ, ವಾಸುದೇವ ಶರ್ಮಾ, ನಾಗಸಿಂಹ ಮತ್ತಿತರರು ಆಯ್ಕೆ ಮಂಡಳಿಯಲ್ಲಿದ್ದರು.
ಕೊಪ್ಪಳದ ಮಾಧ್ಯಮ ಪ್ರತಿನಿಽಗಳು ಈ ಪ್ರತಿಷ್ಠಿತ ಮಾಧ್ಯಮ ಫೆಲೋಷಿಪ್‌ಗೆ ಆಯ್ಕೆಯಾಗಿರುವುದಕ್ಕೆ ಶರಣಬಸವರಾಜ ಗದಗ, ಮಂಜುನಾಥ ಉಮಚಗಿ, ಅಬ್ದುಲ್ ರಜಾಕ್ ಸಬರದ. ಮಂಜುನಾಥ ಸಾಲಿಮಠ, ರಾಜಶೇಖರ ಅಂಗಡಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.
0 comments:
Post a Comment