PLEASE LOGIN TO KANNADANET.COM FOR REGULAR NEWS-UPDATES





ಕೊಪ್ಪಳ, ಡಿ.೪, ಚಲನಚಿತ್ರಗಳಿಂದ ಮಕ್ಕಳ ಮನೋವಿಕಾಸಕ್ಕೆ ಸ್ಪೂರ್ತಿಯಾಗುತ್ತವೆ, ಇಂದಿನ ಜಾಗತೀಕರಣದ ಭರಾಟೆಯಲ್ಲಿ ಮಾದ್ಯಮಗಳಿಂದ ಅಶ್ಲೀಲ ಮತ್ತು ಪ್ರಚೋದನಾತ್ಮಕ ಸನ್ನಿವೇಶಗಳನ್ನು ಕಾಣುತ್ತಿರುವುದು ಆತಂಕಕಾರಿ ಎಂದು ವಿನೂತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ಧಲಿಂಗಯ್ಯ ಹಿರೇಮಠ ಖೇದ ವ್ಯಕ್ತಪಡಿಸಿದರು.
ಅವರು ಭಾನುವಾರ ಇಲ್ಲಿಯ ಶ್ರೀ ಗವಿಸಿದ್ಧೇಶ್ವರ ಸಾವಿರ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂಬೆಳ್ಳಿಮಂಡಲ ಜಿಲ್ಲಾ ಶಾಖೆ ಆಯೋಜಿಸಿದ್ದ ೨ ದಿನಗಳ ಅಂತರ್ ರಾಷ್ಟ್ರೀಯ ಮಕ್ಕಳ ಚಿತ್ರೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಚಲನಚಿತ್ರೀಕರಣಕ್ಕೆ ಎಲ್ಲರೀತಿಯ ಸಂಪನ್ಮೂಲವಿದೆ, ಆದರೆ ಪ್ರಾದೇಶಿಕ ತಾರತಮ್ಯದಿಂದ ಈಭಾಗವನ್ನು ನಿರ್ಲಕ್ಷಿಸುವುದು ಸರಿಯಲ್ಲ, ಮಕ್ಕಳ ಮನೋವಿಕಾಸಕ್ಕೆ ಉತ್ತಮಚಲನಚಿತ್ರಗಳ ಮೂಲಕ ತಿಳಿವಳಿಕೆನೀಡಿ ಚಿತ್ರಗಳ ವೀಕ್ಷಣೆಗೆ ಹೊಸತನ ತರಲು ಪ್ರಯತ್ನಿಸಬೇಕೆಂದು ನುಡಿದರಲ್ಲದೇ ಗಂಗಾವತಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಕೇವಲ ರಾಜಕಾರಣಿಗಳ ಸಮ್ಮೇಳನ ಜೊತೆಗೆ ಕೊಪ್ಪಳವನ್ನು ಸಂಪೂರ್ಣ ಕಡೆಗಣಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಮುಖ್ಯ ಅತಿಥಿಯಾಗಿದ್ದ ಮಕ್ಕಳ ತಜ್ಞ ಡಾ.ಬಸವರಾಜ ಬಣ್ಣದಬಾವಿ ಮಾತನಾಡಿ, ಮಕ್ಕಳು ಇಂದು
 ಕೊಲೆ, ಕಳ್ಳತನ ಮತ್ತು ಪ್ರಚೋದನಾಕಾರಿ ದೃಶ್ಯಗಳನ್ನು ನೋಡುವ ಮೂಲಕ  ಅವರ ಮನಸ್ಸು ಕಲುಷಿತವಾಗುತ್ತಿದೆ, ಇದರ ನಿವಾರಣೆಗೆ ಸದಭಿರುಚಿಯ ಚಿತ್ರಗಳ ಪ್ರದರ್ಶನ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ್ ಮಾತನಾಡಿ, ಒಂದು ಕಾಲದಲ್ಲಿ ಚಲನಚಿತ್ರಗಳ ಬಗ್ಗೆ ಪೂಜ್ಯ ಭಾವವಿತ್ತು, ಈಗ ಇದಕ್ಕೆ ವ್ಯತಿರಿಕ್ತವಾಗಿರುವುದು ವಿಪರ್ಯಾಸ ಎಂದರು.
ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸೈಯದ್ , ಬೆಳ್ಳಿ ಸಾಕ್ಷಿ ಸಂಚಾಲಕ, ಕಲಾವಿದ ರಂಗನಾಥ ಕೋಳೂರು ಮಾತನಾಡಿದರು.ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ,ಬೆಳ್ಳಿಮಂಡಲವನ್ನು  ಸಿನಿಮಾ ಪರದೆಯ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಶುಭಕೋರಿದರು.ಯಂಕನಗೌಡ ಪಾಟೀಲ ಹೊರತಟ್ನಾಳ, ಕಸಾಪ ಅಧ್ಯಕ್ಷ ಜಿ.ಎಸ್. ಗೋನಾಳ, ಅಂದಪ್ಪ ಮೋರನಾಳ,ಬಸವರಾಜ ಕೊಪ್ಪಳ, ವಿಠ್ಠಲ ಮಾಲೀಪಾಟೀಲ,  ಉಮಾ ಜನಾದ್ರಿ, ಹನುಮೇಶ ಪ್ರಜಾರ ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ಅಕ್ಷತಾ ಬಣ್ಣದಬಾವಿ, ಜೀವನಸಾಬ ಬಿನ್ನಾಳ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


Advertisement

0 comments:

Post a Comment

 
Top