ನನ್ನನ್ನು ಜೈಲಿಗಟ್ಟಿದ್ದು ಈಶ್ವರಪ್ಪ
ಕಂಪಿಸಿದ ಬಿಜೆಪಿ ಪಾಳಯ, ಉಲ್ಬಣಗೊಂಡ ಬಿಕ್ಕಟ್ಟು ♦ ರಾಜ್ಯ ಬಿಜೆಪಿ ಇಬ್ಭಾಗದತ್ತ
ಬೆಂಗಳೂರು, ಡಿ.29: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ನಡುವಿನ ರಾಜಕೀಯ ಸಂಘರ್ಷ ತೀವ್ರತೆ ಪಡೆದಿದ್ದು, ‘ತನ್ನನ್ನು ಜೈಲಿಗೆ ಕಳುಹಿಸಿದ್ದು ಈಶ್ವರಪ್ಪ’ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಪಕ್ಷದೊಳಗಿನ ಯಡಿಯೂರಪ್ಪ ಹಾಗೂ
ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈಶ್ವರಪ್ಪನವರೇ ಕಾರಣ, ಅವರಿಂದಲೇ ನಾನು ಸೆರೆಮನೆ ವಾಸ ಅನುಭವಿಸಿರುವುದು. ಈಶ್ವರಪ್ಪ ನಾಯಕತ್ವದ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಇನ್ನು ಮುಂದೆ ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ... ನಾನು ಕೇವಲ ಶಿಕಾರಿಪುರದ ಶಾಸಕನಾಗಿ ಮುಂದುವರಿಯುವೆ...
ಈಶ್ವರಪ್ಪ ಬಣದ ಮಧ್ಯೆ ತಿಕ್ಕಾಟಗಳು ನಡೆಯುತ್ತಲೇ ಬಂದಿದ್ದು, ಇದೀಗ ನಾಯಕತ್ವದ ಕುರಿತು ಎದ್ದಿರುವ ವಿವಾದ ಪಕ್ಷವನ್ನು ಇಬ್ಭಾಗದತ್ತ ಕೊಂಡೊಯ್ದಿದೆ. ಪಕ್ಷದ ನಾಯಕ ತಾನೇ ಎಂದು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೆ ನೀಡಿರುವುದರಿಂದ ಮತ್ತೆ ಬಿಜೆಪಿಯೊಳಗೆ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಕುರಿತು ನಿನ್ನೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಈಶ್ವರಪ್ಪ ವರಿಷ್ಠರಿಗೆ ದೂರು ನೀಡಿದ್ದರು.
ಇದರಿಂದ ಕೆಂಡಾಮಂಡಲವಾಗಿರುವ ಯಡಿಯೂರಪ್ಪ ಇಂದು ಬಹಿರಂಗವಾಗಿಯೇ ಈಶ್ವರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ನೇರ ಸಮರ ಸಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ತನ್ನೊಂದಿಗೆ ಹೆಗಲುಕೊಟ್ಟು ಶ್ರಮಿಸಿರುವ ಈಶ್ವರಪ್ಪರ ವಿರುದ್ಧವೇ ನೇರ ಬಾಂಬ್ ಸಿಡಿಸಿರುವ ಯಡಿಯೂರಪ್ಪ, ಮುಖ್ಯಮಂತ್ರಿ ಆಗುವುದಕ್ಕಾಗಿಯೇ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಹಿಗ್ಗಾಮುಗ್ಗಾ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಈಶ್ವರಪ್ಪರೇ ಕಾರಣ, ಅವರಿಂದಲೇ ನಾನು ಸೆರೆಮನೆ ವಾಸ ಅನುಭವಿಸಿರುವುದು ಎಂದು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಿಂದ ಈಶ್ವರಪ್ಪ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಅಪರಾಧಿ ಸ್ಥಾನದಲ್ಲಿಯೂ ನಿಲ್ಲಿಸಿದ್ದಾರೆ. ಈಶ್ವರಪ್ಪರಿಂದಲೇ ನಾನು ಜೈಲು ಸೇರಿ 24 ದಿನ ಜೈಲಲ್ಲಿರಬೇಕಾಯಿತು. ಆದರೂ ಅವರಿಗೆ ತೃಪ್ತಿಯಾದಂತಿಲ್ಲ ಎಂದು ಈಶ್ವರಪ್ಪರ ವಿರುದ್ಧವಿರುವ ಅಸಹನೆಯನ್ನು ಯಡಿಯೂರಪ್ಪ ಹೊರಹಾಕಿದರು.
ಈಶ್ವರಪ್ಪ ತನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ತಾನು ಅಪರಾಧಿ ಎಂಬಂತೆ ನಿರಂತರವಾಗಿ ಜನರ ಮುಂದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅನಗತ್ಯವಾಗಿ ತನ್ನ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ಇದು ತನ್ನನ್ನು ಸಂಪೂರ್ಣವಾಗಿ ಪಕ್ಷದಿಂದ ಹೊರದಬ್ಬುವ ಯತ್ನವೂ ಆಗಿದೆ. ಈ ಹುನ್ನಾರದ ಹಿಂದೆ ಈಶ್ವರಪ್ಪ ನಾಯಕತ್ವದ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.
ಈಶ್ವರಪ್ಪ ಹೈಕಮಾಂಡ್ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಇನ್ನು ಮುಂದೆ ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ ಎಂದು ಲೇವಡಿ ಮಾಡಿದ ಯಡಿಯೂರಪ್ಪ, ತಾನೇ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದವರಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಗಾರಿದರು. ತಾನೇನು ಈಶ್ವರಪ್ಪರ ಬಳಿ ಸ್ಥಾನಕ್ಕಾಗಿ ಅಂಗಲಾಚಿಲ್ಲ. ಆದರೂ ಅವರು ಜನರಲ್ಲಿ ಗೊಂದಲ ಮೂಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ನಡವಳಿಕೆಗಳಿಂದ ತಾನು ಪಕ್ಷ ತೊರೆಯುವುದಿಲ್ಲ. ಪಕ್ಷದಲ್ಲಿದ್ದೇ ಹೋರಾಟ ನಡೆಸುತ್ತೇನೆ. ನಾನು ಕಟ್ಟಿ ಬೆಳೆಸಿದ ಪಕ್ಷ ಬಿಡುವ ಪ್ರಶ್ನೆ ತನ್ನ ಮುಂದಿಲ್ಲ ಎಂದರು.
ಜ.15ರ ವರೆಗೆ ತನಗೆ ಸೂಕ್ತ ಸ್ಥಾನಮಾನ ನೀಡುವಂತೆ ಅವಕಾಶ ನೀಡಿದ್ದೇನೆ. ಅದರ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ. ಈ ವೇಳೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಅನಂತರ ತಮ್ಮ ತೀರ್ಮಾನದ ಕುರಿತು ಚಿಂತಿಸುತ್ತೇನೆ ಎಂದರು. ಇನ್ನು ಮುಂದೆ ಕೇವಲ ಪಕ್ಷದ ಶಿಕಾರಿಪುರದ ಶಾಸಕನಾಗಿ ಕಾರ್ಯನಿರ್ವಹಿಸುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದರು. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸರಕಾರದ ವಿಷಯದಲ್ಲಿ ತಲೆ ಹಾಕಗುವುದಿಲ್ಲ. ತನ್ನ ಆಪ್ತರಿಗೆ ಸಚಿವ ಸ್ಥಾನ ನೀಡುವಂತೆಯೂ ಒತ್ತಡ ಹಾಕಲ್ಲ. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಸಿಎಂ ಸದಾನಂದ ಗೌಡ ಹಾಗೂ ಈಶ್ವರಪ್ಪ ನಿರ್ಧರಿಸುತ್ತಾರೆ ಎಂದರು.
ವರಿಷ್ಠರಿಂದ ಇತ್ಯರ್ಥ
ಬೆಂಗಳೂರು, ಡಿ.29: ಪಕ್ಷದೊಳಗೆ ಉಂಟಾಗಿರುವ ನಾಯಕತ್ವದ ವಿವಾದವನ್ನು ಪಕ್ಷದ ವರಿಷ್ಠರೇ ಇತ್ಯರ್ಥ ಗೊಳಿಸುತ್ತಾರೆ ಎಂದು ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಇಂದು ಬೆಳಗ್ಗೆ ರೇಸ್‌ಕೋರ್ಸ್ ರಸ್ತೆ ಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪನವರ ನಿವಾ ಸಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಾಯಕತ್ವದ ಕುರಿತಂತೆ ತೀರ್ಮಾನ ವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ.
ಈ ಸಂಬಂಧ ನಿನ್ನೆ ದಿಲ್ಲಿಗೆ ಹೋಗಿರುವುದು ಫಲನೀಡಿದೆ ಎಂದ ಸದಾನಂದ ಗೌಡ, ವರಿಷ್ಠರಿಗೆ ಈ ವಿಷಯದ ಕುರಿತು ಮನವರಿಕೆ ಮಾಡಿಕೊಳ್ಳಲಾಗಿದೆ ಎಂದರು. ದಿಲ್ಲಿ ಪ್ರವಾಸದ ಕುರಿತು ಯಡಿಯೂರಪ್ಪರಿಗೆ ವಿಷಯ ತಿಳಿಸಲು ಭೇಟಿ ನೀಡಿದ್ದೆ. ಜೊತೆಗೆ ರಾಜಕೀಯದ ಕುರಿತು ಕೂಡಾ ಚರ್ಚಿಸಿದ್ದೇನೆ ಎಂದರು. ಸಚಿವ ಸಂಪುಟ ವಿಸ್ತರಣೆಯ ಕುರಿತು ಕೋರ್‌ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. varthaharathi
0 comments:
Post a Comment