ನವದೆಹಲಿ:‘ಮತ್ತೆ ಮುಖ್ಯಮಂತ್ರಿ ಮಾಡಿ,ಇಲ್ಲವೇ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ’ಎಂಬ ಬೇಡಿಕೆ ಮುಂದಿಟ್ಟುಕೊಂಡು ದೆಹಲಿಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಫಲಶ್ರುತಿ ಏನೆಂಬುದು ಸ್ಪಷ್ಟವಾಗಿಲ್ಲ.ಆದರೆ,ಪಕ್ಷದ ಉನ್ನತ ಮೂಲಗಳ ಪ್ರಕಾರ, ಪರಿಷತ್ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿಯೇ (ಸದಾನಂದಗೌಡ)ಪಕ್ಷದ ಅಭ್ಯರ್ಥಿ ಆಗಿರುವುದರಿಂದ ಚುನಾವಣಾ ಹಾದಿ ಸುಗಮ ಆಗಬೇಕಾದರೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸ ಬೇಕು ಎಂಬ ಎಚ್ಚರಿಕೆ ಸಹಿತ ಮನವಿಯನ್ನು ರಾಷ್ಟ್ರೀಯ ಅಧ್ಯಕ್ಷರ ಮುಂದಿಟ್ಟಿದ್ದಾರೆ.
ಅಲ್ಲದೇ,ಡಿನೋಟಿಫಿಕೇಷನ್ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ತಮ್ಮನ್ನು ಅಧಿಕಾರದಿಂದ ಇಳಿಸಿದ ರೀತಿ ಹಾಗೂ ಈಗ ಹಾಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದರೂ ಆ ಪ್ರಕರಣವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಕೈಗೆತ್ತಿಕೊಳ್ಳ ದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ ಯಡಿಯೂರಪ್ಪ ಮಾಧ್ಯಮಗಳಿಂದ ತಪ್ಪಿಸಿ ಕೊಂಡರು.ಇದಕ್ಕೂ ಮುನ್ನ ದೆಹಲಿಗೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾನು ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕನಾಗಿ ದೆಹಲಿಗೆ ಬಂದಿದ್ದೇನೆ. ಯಾರನ್ನೂ ಭೇಟಿಯಾಗುವ ಉದ್ದೇಶವಿಲ್ಲ’ ಎಂದಿದ್ದರು.
ದಿಢೀರ್ ಭೇಟಿ:ಯಡಿಯೂರಪ್ಪ ಮಂಗಳವಾರ ದಿಢೀರ್ ದೆಹಲಿಗೆ ಬಂದಿಳಿದರು. ಯಡಿಯೂರಪ್ಪ ಅವರೇ ಹೇಳಿಕೊಂಡ ಪ್ರಕಾರ,ಕರ್ನಾಟಕದ ಸಂಸದರಿಗೆ ವಸತಿ ಸಚಿವ ವಿ. ಸೋಮಣ್ಣ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಲು ಬಂದಿದ್ದಾರೆ.ಆದರೆ,ಪಕ್ಷದ ಮೂಲಗಳ ಪ್ರಕಾರ,ಬಳ್ಳಾರಿಯಲ್ಲಿ ಶ್ರೀರಾಮುಲು ಜಯಗಳಿಸಿದ್ದು ಹಾಗೂ ನಂತರದ ಬೆಳವಣಿಗೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಆಗಮಿಸಿದ್ದಾರೆ.ಅಲ್ಲದೇ,ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿ ಕಣಕ್ಕಿಳಿಸುವ ಇರಾದೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಖುದ್ದು ಪಕ್ಷದ ಅಧ್ಯಕ್ಷರೇ ಬರಹೇಳಿದ್ದರು ಎನ್ನಲಾಗಿದೆ.
ಯಡಿಯೂರಪ್ಪ ಪಕ್ಷದ ಅಧ್ಯಕ್ಷರ ಕರೆಗೆ ಹೀಗೆ ದಿಢೀರ್ ಬರುವವರಲ್ಲ.ಅವರ ಭೇಟಿ ಉದ್ದೇಶವೇ ಬೇರೆ.ಪರಿಷತ್ ಚುನಾವಣೆಯಲ್ಲಿ ಪಕ್ಷ ಮುಖಭಂಗ ಅನುಭವಿಸದೇ ಇರಬೇಕಾದರೆ ತಮ್ಮ ಬೇಡಿಕೆಗೆ ಸ್ಪಂದಿಸಬೇಕೆಂಬ ಎಚ್ಚರಿಕೆ ನೀಡುವ ಉದ್ದೇಶ ಅವರದ್ದೆನ್ನಲಾಗಿದೆ.
ಮಾಜಿ ಸಿಎಂ ಆಗಿ ಮೊದಲ ಭೇಟಿ:ಹಿಂದೆ ಯಡಿಯೂರಪ್ಪ ದೆಹಲಿಗೆ ಬಂದಿದ್ದಾಗ ಮುಖ್ಯ ಮಂತ್ರಿಯಾಗಿದ್ದರು.ನಾಲ್ಕು ತಿಂಗಳ ನಂತರ ದೆಹಲಿಗೆ ಆಗಮಿಸಿದಾಗ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.ಜತೆಗೆ ಭ್ರಷ್ಟಾಚಾರ,ಸ್ವಜನಪಕ್ಷಪಾತ ಆರೋಪದ ಹಿನ್ನೆಲೆಯಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ.
ಮುಖ್ಯಮಂತ್ರಿ ಆಗಿದ್ದಾಗ ಇದ್ದ ಕಳೆ ಅವರ ಮುಖದಲ್ಲಿರಲಿಲ್ಲ.ಆದರೆ,ಅವರ ಸುತ್ತಮುತ್ತ ಹಿಂದಿನಷ್ಟೇ ಜನರಿದ್ದರು.ಮುಖ್ಯವಾಗಿ ಬಿಜೆಪಿ ಸಂಸದರು ಅವರೊಂದಿಗೆ ಇದ್ದರು.ಅವರೊಂದಿಗೆ ಮಾತುಕತೆ,ನಗು,ಹರಟೆಯೂ ಇತ್ತು.ವಸತಿ ಸಚಿವ ಸೋಮಣ್ಣ ಅವರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರ ಮುಖದಲ್ಲಿ ಹಿಂದಿನ ಗೆಲವು,ನಗು ಕಾಣಲಿಲ್ಲ.ಹೆಚ್ಚು ಮಾತೂ ಆಡಲಿಲ್ಲ. ಔಪಚಾರಿಕವಾಗಿ ಸೋಮಣ್ಣ ಅವರ ಸಾಧನೆಯನ್ನು ಶ್ಲಾಘಿಸಿದರಷ್ಟೆ.
ಬುಧವಾರವೂ ದೆಹಲಿಯಲ್ಲೇ ಬೀಡು ಬಿಡಲಿರುವ ಯಡಿಯೂರಪ್ಪ ನಡೆ ಇನ್ನೂ ನಿಗೂಢ. ಮಂಗಳವಾರ ಸಂಸತ್ತಿನ ಆವರಣಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಗೆ ಪ್ರತಿ ಪಕ್ಷಗಳ ನಾಯಕರಾದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರಿಬ್ಬರನ್ನು ಭೇಟಿ ಮಾಡಲಾಗಲಿಲ್ಲ. ಬುಧವಾರ ಭೇಟಿ ಮಾಡುವ ಸಾಧ್ಯತೆ ಇದೆ.
ವಿಶೇಷ ಎಂದರೆ ಬಹುತೇಕ ಬಿಜೆಪಿ ಸಂಸದರು ಯಡಿಯೂರಪ್ಪ ಅವರಿಗೆ ಬೆಂಬಲವಾಗಿದ್ದರು. ಈ ನಡುವೆ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂಬ ವದಂತಿಗಳೂ ಕರ್ನಾಟಕ ಭವನದ ಸುತ್ತ ಹರಿದಾಡಿದವು.
ಇನ್ಮೇಲಾದ್ರೂ ಆರಾಮಾಗಿರೋಣ ಬ್ರದರ್: ಕುಮಾರಗೆ ಬಿಎಸ್‌ವೈ
ದೆಹಲಿ ವಿಮಾನ ಹತ್ತಿದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಇಬ್ಬರಿಗೂ ಅಚ್ಚರಿ. ಇಬ್ಬರಿಗೂ ಅಕ್ಕಪಕ್ಕದ ಸೀಟುಗಳು ಮೀಸಲಾಗಿದ್ದವು.
ಸುಮಾರು ಎರಡೂಮುಕ್ಕಾಲು ಗಂಟೆ ಪಯಣದಲ್ಲಿ ರಾಜಕೀಯ ಚರ್ಚೆ ಮಾಡಿದರಾ?ಅವರಿಬ್ಬ ರೂ ಬಾಯಿಬಿಟ್ಟಿಲ್ಲ.ಆದರೆ,ಪರಸ್ಪರ ಮುಗುಳ್ನಗೆ ವಿನಿಮಯದೊಂದಿಗೆ ಪ್ರಯಾಣ ಆರಂಭಿಸಿ ದ್ದಾರೆ. ಯಡಿಯೂರಪ್ಪ ಅವರೇ ಮಾತುಕತೆಗೆ ಎಳೆದಿದ್ದಾರೆ.
’ಇನ್ನು ಮೇಲಾದ್ರೂ ಆರಾಮಾಗಿ ಇರೋಣ.ದ್ವೇಷ ಬೇಡ.ಸದಾನಂದಗೌಡರಿಗೆ ಬೆಂಬಲ ನೀಡಿ’ ಎಂಬ ಬೇಡಿಕೆಯನ್ನೂ ಕುಮಾರಸ್ವಾಮಿ ಅವರ ಮುಂದೆ ಇಟ್ಟರಂತೆ.
ನಡುನಡುವೆ ತೂಕಡಿಸುತ್ತಿದ್ದ ಕುಮಾರಸ್ವಾಮಿ ಅವರನ್ನು ಎಚ್ಚರಿಸುತ್ತಿದ್ದ ಯಡಿಯೂರಪ್ಪ ಮುನಿಸಿನಿಂದ ಕೇಳಿದರಂತೆ-‘ಏನು ನನ್ನ ಜತೆ ಮಾತನಾಡಲಾರಷ್ಟು ಮುನಿಸೇ?ತೂಕಡಿಸು ತ್ತಿದ್ದೀರಲ್ಲಾ?’ ಎಂದು.
ದೆಹಲಿಯಲ್ಲಿ ಯಡಿಯೂರಪ್ಪ ರಹಸ್ಯ ಕಾರ್ಯಾಚರಣೆ
ನವದೆಹಲಿ:ಹೈಕೋರ್ಟ್ ಜಾಮೀನಿಗೆ ಸುಪ್ರೀಂ ಕೋರ್ಟ್ `ಮುದ್ರೆ`ಬಿದ್ದ ಬಳಿಕ ಮೈಕೊಡವಿ ಎದ್ದು ದೆಹಲಿಯಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸದ್ಯಕ್ಕೆ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕತ್ವ ಸ್ಪಷ್ಟಪಡಿಸಿದೆ.
ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕ ಎರಡನೇ ಸಲ ಮಂಗಳವಾರ ರಾಜಧಾನಿಗೆ ಆಗಮಿಸಿರುವ ಯಡಿಯೂರಪ್ಪ ಸಂಜೆ ಸುಮಾರು ಒಂದೂವರೆ ಗಂಟೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಜತೆ ಮಾತುಕತೆ ನಡೆಸಿದರು.ಮಾಜಿ ಮುಖ್ಯಮಂತ್ರಿಗೆ `ನಿಷ್ಠ`ರಾಗಿರುವ ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಮಾತ್ರ ಜತೆಗಿದ್ದರು.
`ರಾಜ್ಯದಲ್ಲಿ ನಾನು ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಸೊನ್ನೆಯಿಂದ ಆರಂಭಿಸಿದ ರಾಜಕೀಯ ಹೋರಾಟವನ್ನು ಅಧಿಕಾರಕ್ಕೆ ಬರುವವರೆಗೆ ಮುಂದುವರಿಸಿದ್ದೇನೆ.ನನ್ನಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದೆ.ಜನ ನಾಯಕನಾಗಿರುವ ನನ್ನನ್ನು ರಾಜಕೀಯವಾಗಿ ಬಲಿಪಶು ಮಾಡಲಾಗಿದೆ ಎಂದು ಯಡಿಯೂರಪ್ಪ ಅಧ್ಯಕ್ಷರ ಮುಂದೆ ಅಲವತ್ತುಕೊಂಡರು ಎಂದು` ವಿಶ್ವಸನೀಯ ಮೂಲಗಳು ತಿಳಿಸಿವೆ.
`ನನಗೆ ಅನ್ಯಾಯ ಮಾಡಲಾಗಿದೆ.ಅಕ್ರಮ ಗಣಿಗಾರಿಕೆ ಆರೋಪಕ್ಕೆ ಭಾಗಿಯಾಗಿರುವ ವಿದೇ ಶಾಂಗ ಸಚಿವ ಎಸ್.ಎಂ.ಕೃಷ್ಣ ಅಧಿಕಾರದಲ್ಲಿ ಮುಂದುವರಿದಿದ್ದಾರೆ.ಕಾಂಗ್ರೆಸ್ ಅವರಿಗೆ ರಕ್ಷಣೆ ನೀಡಿದೆ.ಆದರೆ,ಬಿಜೆಪಿ ನನ್ನ ರಾಜೀನಾಮೆ ಪಡೆದು `ತಲೆದಂಡ` ಪಡೆಯಲಾಗಿದೆ. ಇದು ಯಾವ ನ್ಯಾಯ?` ಎಂದು ಮಾಜಿ ಮುಖ್ಯಮಂತ್ರಿ ಅಧ್ಯಕ್ಷರನ್ನು ಪ್ರಶ್ನಿಸಿದರು.
`ಪಕ್ಷದೊಳಗೆ ಕೆಲವರು ನನ್ನ ಮೇಲೆ ಅಪ ಪ್ರಚಾರ ಮಾಡುತ್ತಿದ್ದಾರೆ.ಹೊರಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಷಡ್ಯಂತ್ರ ಮಾಡುತ್ತಿದ್ದಾರೆ.ಶೆಟ್ಟರ್,ರೆಡ್ಡಿ ಬಣವೂ ವಿರುದ್ಧವಾಗಿದೆ.ವಿವಿಧ ರಾಜ್ಯಗಳಲ್ಲಿ ಬಿಜೆಪಿ ಕೆಲವು ನಾಯಕರನ್ನು ತ್ಯಾಗ ಮಾಡಿದಂತೆ ನನ್ನನ್ನು ಕೈಬಿಟ್ಟರೆ ಎಂಬ ಆತಂಕವಿದೆ`ಎಂದು ಯಡಿಯೂರಪ್ಪ ವಿವರಿಸಿದರು.
ಯಡಿಯೂರಪ್ಪ ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡ ಗಡ್ಕರಿ `ನೀವು ನಮ್ಮ ಪಕ್ಷದ ನಾಯಕರು.ಆ ಬಗ್ಗೆ ಯಾರ ತಕರಾರೂ ಇಲ್ಲ.ಈಗ ನಿಮಗೆ ಆಗಿರುವುದು ತಾತ್ಕಾಲಿಕ ಹಿನ್ನಡೆ. ಬಿಜೆಪಿ ಕಟ್ಟಿ ಬೆಳೆಸಿ ಸರ್ಕಾರ ಅಧಿಕಾರ ತರುವಲ್ಲಿ ನಿಮ್ಮ ಪರಿಶ್ರಮ ಅಗಾಧ.ಅದರ ಬಗ್ಗೆ ನಮಗೆ ಗೌರವವಿದೆ`.
ಆದರೆ,`ಸದ್ಯಕ್ಕೆ ನಿಮಗೆ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಹೊಣೆಗಾರಿಕೆ ಕೊಡಲು ಸಾಧ್ಯವಿಲ್ಲ. ನಾವು ರೇಡಿಯೋ ತರಂಗಾಂತರ,ಕಪ್ಪುಹಣ ಮೊದಲಾದ ಹಗರಣ ಎತ್ತಿಕೊಂಡು ಕಾಂಗ್ರೆಸ್ ಮೇಲೆ ಬಿದ್ದಿದ್ದೇವೆ.ಸಂಸತ್ ಅಧಿವೇಶನ ನಡೆಯುತ್ತಿದೆ.ಕಪ್ಪು ಹಣ ಕುರಿತು ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನಿಮಗೆ ರಾಜಕೀಯ ಪುನರ್ವಸತಿ ಕಲ್ಪಿಸಿ ನಾವು ಮುಖ ಉಳಿಸಿಕೊಳ್ಳುವುದು ಕಷ್ಟ`ಎಂದು ಬಿಜೆಪಿ ಅಧ್ಯಕ್ಷರು ಮನವರಿಕೆ ಮಾಡಿಕೊಡಲು ಯತ್ನಿಸಿದರು.
`ಆರೋಪಗಳಿಂದ ಮುಕ್ತರಾಗಿ ಹೊರಬನ್ನಿ.ಖಂಡಿತಾ ನಿಮ್ಮ ಸೇವೆಯನ್ನು ನಾವು ಬಳಸಿಕೊಳ್ಳು ತ್ತೇವೆ.ಈಗ ವಿಧಾನ ಪರಿಷತ್ ಚುನಾವಣಾ ಕಣದಲ್ಲಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಬೆಂಬಲಿಸಿ.ಯಾವುದೇ ಕಾರಣಕ್ಕೂ ಅವರ ವಿರುದ್ಧ ಹೋಗಬೇಡಿ`ಎಂದು ಕಿವಿ ಮಾತು ಹೇಳಿದರು ಎನ್ನಲಾಗಿದೆ.ಅಧ್ಯಕ್ಷರ ಸಲಹೆಗೆ ಯಡಿಯೂರಪ್ಪ ಅವರ ತಕ್ಷಣದ ಪ್ರತಿಕ್ರಿಯೆ ಗೊತ್ತಾಗಿಲ್ಲ.
ಇದಕ್ಕೂ ಮೊದಲು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಕರ್ನಾಟಕ ಭವನದಲ್ಲಿ ಬಿಜೆಪಿ ಸಂಸದರ ಜತೆ ರಹಸ್ಯ ಚರ್ಚೆ ನಡೆಸಿದರು.ತಮಗೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಬೇರೆ ದಾರಿ ತುಳಿಯುವುದು ಅನಿವಾರ್ಯ ಆಗಬಹುದು ಎಂಬ ಇಂಗಿತ ನೀಡಿದರು.ಯಡಿಯೂರಪ್ಪ ಅವರ `ನಿಷ್ಠ`ರ ಗುಂಪು ಎನ್‌ಸಿಪಿ ಮುಖಂಡ ಶರದ್ ಪವಾರ್ ಜತೆ ಸಂಪರ್ಕ ಬೆಳೆಸಲು ಪ್ರಯತ್ನ ನಡೆಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಬೆಳಿಗ್ಗೆ ದೆಹಲಿಗೆ ಹೊರಟ ವಿಮಾನದಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಚಲುವರಾಯಸ್ವಾಮಿ ಅವರೂ ಇದ್ದರು. ಕುಮಾರಸ್ವಾಮಿ ಪಕ್ಕದ ಸೀಟಿನಲ್ಲಿ ಬಂದು ಕುಳಿತ ಬಿಜೆಪಿ ನಾಯಕ ಕುಶಲೋಪರಿ ವಿಚಾರಿಸಿದರು.ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ನಿಲುವು ತಳೆಯಲಿದೆ ಎಂದು ತಿಳಿಯಬಯಸಿದರು. ಆದರೆ, ಕುಮಾರಸ್ವಾಮಿ ಗುಟ್ಟು ಬಿಡದೆ ಜಾಣ್ಮೆಯಿಂದ ನುಣುಚಿಕೊಂಡರು ಎನ್ನಲಾಗಿದೆ.
ರಾತ್ರಿ ದೆಹಲಿಯಲ್ಲಿ ತಂಗಿರುವ ಯಡಿಯೂರಪ್ಪ ಬುಧವಾರ ಇನ್ನೂ ಕೆಲವು ಮುಖಂಡರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ನೀವೇ ಮುಂದಿನ ಸಿಎಂ, ಬಿಎಸ್ ವೈಗೆ ಗಡ್ಕರಿ ಪ್ರಾಮೀಸ್
ಬೆಂಗಳೂರು,ಡಿ.13:ಕರ್ನಾಟಕ ರಾಜಕೀಯದಲ್ಲಿ ಈಗ ಕಿಂಗ್ ಗಳಿಗಿಂತ ಕಿಂಗ್ ಮೇಕರ್ ಗಳದ್ದೇ ಕಾಲ.ಮೇಲ್ಮನೆಗೆ ಸಿಎಂ ಡಿವಿ ಸದಾನಂದ ಗೌಡರು ನಿರಾಯಾಸವಾಗಿ ಗೆಲ್ಲುವಂತೆ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿ ಯಡಿಯೂರಪ್ಪ ಅವರು ಕಿಂಗ್ ಮೇಕರ್ ಆಗುವ ಆಸೆ ಹೊತ್ತಿದ್ದಾರೆ.
ಶ್ರೀರಾಮುಲು ಗೆಲ್ಲಿಸಿದ ನಂತರ ಕಿಂಗ್ ಮೇಕರ್ ಪಟ್ಟ ಪಡೆದ ಎಚ್ ಡಿ ಕುಮಾರಸ್ವಾಮಿ ಮತ್ತೆ ಚುನಾವಣೆ ಸ್ಪರ್ಧಿಸುವ ಮಾತಾಡಿದ್ದಾರೆ.ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ.ತಮ್ಮ ಬೆಂಬಲಿಗರ ಸಹಿ ಸಂಗ್ರಹಿಸಿ(ಸುಮಾರು 70ಶಾಸಕರು)ಹೈಕಮಾಂಡ್ ಮುಂದಿಟ್ಟಿರುವ ಯಡಿಯೂರಪ್ಪ ಆಗಲೇ ಗೆಲುವಿನ ನಗೆ ಬೀರಿದ್ದಾರೆ.
ಯಡಿಯೂರಪ್ಪ ಮುಂದಿರುವ ಸವಾಲು:ಇನ್ನೆರಡು ವಾರಗಳಲ್ಲಿ ಕೋರ್ಟ್ ಕೇಸ್ ಗಳನ್ನು ಮುಗಿಸಿಕೊಳ್ಳವುದು.ಸದಾನಂದ ಗೌಡರನ್ನು ಎಂಎಲ್ ಸಿಯಾಗಿ ಮಾಡುವುದು.ನಂತರ ಮುಖ್ಯಮಂತ್ರಿ ಪಟ್ಟವನ್ನು ಪುನಃ ಪಡೆಯುವುದು.
ಕೇಂದ್ರದಲ್ಲಿ ಆರೋಪ ಹೊತ್ತಿರುವ ಎಸ್.ಎಂ.ಕೃಷ್ಣ,ದೆಹಲಿಯಲ್ಲಿ ಶೀಲಾ ದೀಕ್ಷಿತ್, ತಮಿಳುನಾಡಿನಲ್ಲಿ ಜಯಲಲಿತಾ ಅಧಿಕಾರದಲ್ಲಿರುವಾಗ ನಾನು ಮಾತ್ರ ಏಕೆ ಆರೋಪ ಹೊತ್ತುಕೊಂಡ ಮಾತ್ರಕ್ಕೆ ಅಧಿಕಾರದಿಂದ ವಂಚಿತನಾಗಬೇಕು ಎಂದು ಗಡ್ಕರಿ ಟೀಂ ಮೇಲೆ ಯಡಿಯೂರಪ್ಪ ಪ್ರಶ್ನೆಗ ಸುರಿಮಳೆ ಗೈದಿದ್ದಾರೆ.
ಯಡಿಯೂರಪ್ಪ ತಮ್ಮ ಆಪ್ತ ಶಾಸಕ ಲೆಹರ್ ಸಿಂಗ್ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿರುವುದು ಅನೇಕ ಗುಮಾನಿಗೆ ಕಾರಣವಾಗಿದೆ.ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಗಡ್ಕರಿ ಅವರು ಸ್ವಲ್ಪ ದಿನ ಕಾಯುವಂತೆ ಹೇಳಿದ್ದಾರೆ
0 comments:
Post a Comment