ಕುಷ್ಟಗಿ: ಪಠ್ಯ ಬೋಧನೆಯಲ್ಲಿ ತೊಡಗಿರುವ ಅನೇಕ ಶಿಕ್ಷಕರು ವಿಭಿನ್ನ ರೀತಿಯ ಕಲೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ, ಇನ್ನಷ್ಟು ಕ್ರಿಯಾಶೀಲರಾಗಿಸಲು ಅವರಲ್ಲಿನ ಕಲೆ ಅನಾವರಣಗೊಳ್ಳುವುದಕ್ಕೆ ಸೂಕ್ತ ವೇದಿಕೆ ಒದಗಿಸಿಕೊಡುವ ಅಗತ್ಯವಿದೆ ಎಂದು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಆರ್.ಎಂ.ಮುಲ್ಲಾ ಸೋಮವಾರ ಇಲ್ಲಿ ಹೇಳಿದರು.
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಮತ್ತು ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗಾಗಿ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಪಠ್ಯ ಚಟುವಟಿಕೆಗೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಬೋಧನೆ ಕ್ರಿಯೆಯ ಜೊತೆಗೆ ಸಹಪಠ್ಯ ಚಟುವಟಿಕೆಯನ್ನು ಅಳವಡಿಸಿಕೊಂಡರೆ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯವೂ ವೃದ್ಧಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸುರೇಂದ್ರ ಕಾಂಬಳೆ, ಸ್ಪರ್ಧೆಯ ನೋಡಲ್ ಅಧಿಕಾರಿಯಾಗಿರುವ ಶಿಕ್ಷಣ ಸಂಯೋಜಕ ಬಸವರಾಜ ಬಾಗಲಿ ಇತರರು ಮಾತನಾಡಿದರು. ಗಾಯನ, ಆಶು ಭಾಷಣ, ಪ್ರಬಂಧ, ಬೋಧನೋಪಕರಣಗಳ ತಯಾರಿಕೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗಳು ನಡೆದವು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕನಗೌಡ ದಾದ್ಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಗೌಡ ಹೊಸಗೌಡ್ರ, ಪ್ರೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಕೆ.ಸಂತೋಷಕುಮಾರ, ಉಪ ಪ್ರಾಚಾರ್ಯ ಎಂ.ಆರ್.ಹುನಗುಂದ, ಶಿಕ್ಷಕ ಅರವಿಂದಕುಮಾರ ದೇಸಾಯಿ, ಸಂತೋಷ, ಮುಖ್ಯಶಿಕ್ಷಕ ಸಿದ್ರಾಮಪ್ಪ ಅಮರಾವತಿ ಇತರರು ವೇದಿಕೆಯಲ್ಲಿದ್ದರು.\ ಎನ್.ಕೆ.ಬಿಳಿಯಪ್ಪನವರ ನಿರೂಪಿಸಿದರು. ಈಶಪ್ಪ ತಳವಾರ, ಮರ್ದಾನಪ್ಪ, ಎಂ.ಡಿ.ಮಕಾನದಾರ ನಿರ್ಣಾಯಕರಾಗಿದ್ದರು
0 comments:
Post a Comment