ಹಲ್ಲೆಗೆ ಆಕ್ರೋಶ,
ಬೆಂಗಳೂರು, ಡಿ.೧- : ಕುಕ್ಕೆ ಸುಬ್ರಮಣ್ಯದಲ್ಲಿ ಬುಧವಾರ ನಡೆದ ಮಡೆ ಮಡಸ್ನಾನ ಹಾಗೂ ಸತ್ಯಶೋಧನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮ ಮೇಲೆ ನಡೆದ ಹಲ್ಲೆಗೆ ಗುರುವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮಡೆ ಮಡಸ್ನಾನ ಪದ್ಧತಿಯನ್ನು ನಿಷೇಧಿಸಬೇಕು. ಶಿವರಾಮ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಸಾಂಕೇತಿಕ ಉಪವಾಸ: ಅನಾದಿ ಕಾಲದಿಂದಲೂ ದಲಿತರ ಮೇಲೆ ಸವರ್ಣೀಯರ ದಬ್ಬಾಳಿಕೆ ಹೆಚ್ಚಾಗಿದೆ. ಬ್ರಾಹ್ಮಣರು ತಿಂದು ಬಿಟ್ಟ ಎಂಜಲು ಎಲೆಯ ಮೇಲೆ ಉರುಳು ಸೇವೆ ಮಾಡುವುದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅನಿಷ್ಠ ಪದ್ಧತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಧಾರವಾಡ ತಾಲೂಕಿನ ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು. ಧಾರವಾಡ, ಹುಬ್ಬಳ್ಳಿ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳದಲ್ಲೂ ದಲಿತ ಸಂಘರ್ಷ ಸಮಿತಿ, ಸಮತಾ ಸೇನೆ, ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ಪ್ರತಿಭಟನೆ: ಮೈಸೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ವಿವಿಧ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಸನದಲ್ಲಿ ಛಲವಾದಿ ಮಹಾಸಭಾ ಹಾಗೂ ಸಿಪಿಐ ಕಾರ್ಯಕರ್ತರು ಮಡೆ ಮಡಸ್ನಾನ ನಿಷೇಧಿಸುವಂತೆ ಆಗ್ರಹಿಸಿದರು. ಪಿರಿಯಾಪಟ್ಟಣ, ಚಾಮರಾಜನಗರ, ಕೋಲಾರ, ಮಂಡ್ಯ, ತುಮಕೂರು, ರಾಮನಗರದಲ್ಲೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹೈ-ಕ ಭಾಗದಲ್ಲೂ ಪ್ರತಿಭಟನೆ: ಯಾದಗಿರಿ, ಸುರಪುರ, ಗುಲ್ಬರ್ಗ, ಬೀದರ್, ರಾಯಚೂರು, ಸಿಂಧನೂರಿನಲ್ಲೂ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸಮಾನತೆ ಹಾಗೂ ಮಾನವೀಯತೆ ನೆಲೆಯಲ್ಲಿ ಮಡೆ ಮಡಸ್ನಾನ ನಿಷೇಧಿಸಬೇಕು ಎಂದು ಆಗ್ರಹಿಸಿದವು.
ಕಡೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಭಾರಿ ವಿರೋಧ ವ್ಯಕ್ತಪಡಿಸಲಾ ಯಿತು.
ನಿಷೇಧಕ್ಕೆ ವಾರದ ಗಡುವು: ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪಿ.ಆನಂದ, ಒಂದು ವಾರದಲ್ಲಿ ಮಡೆ ಮಡಸ್ನಾನ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗು ವುದು ಎಂದು ಎಚ್ಚರಿಸಿದರು.
ಇದೇ ವೇಳೆ ಶಿವರಾಮ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಸುಳ್ಯ ಶಾಸಕ ಎಸ್.ಅಂಗಾರ ವಿಷಾದ ವ್ಯಕ್ತಪಡಿಸಿದ್ದಾರೆ. ಮಡೆಸ್ನಾನ ವೈಯಕ್ತಿಕ ನಂಬಿಕೆ. ಇಲ್ಲಿ ಬಲತ್ಕಾರ ಇಲ್ಲ. ಹರಕೆ ಹೇಳಿಕೊಂಡವರಿಗೆ ಮಾತ್ರ ಅನ್ವಯ. ಹಾಗಿದ್ದೂ ಇವತ್ತಿನ ಸಂದರ್ಭದಲ್ಲಿ ಇಂತಹ ಸಂಪ್ರದಾಯ ನಿಲ್ಲಬೇಕಿದ್ದರೆ ಇಂಥ ಹರಕೆ ಹೊರುವವರಲ್ಲಿ ಜಾಗೃತಿ ಮೂಡಬೇಕು. ಇದನ್ನು ವಿರೋಧಿಸುವವರು ಮೌಢ್ಯತೆ ಹೊಂದಿರುವವರಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಆದರೆ, ಬೇರೆ ಎಲ್ಲಿಂದಲೋ ಬಂದು ಏಕಾಏಕಿ ಇದನ್ನು ನಿಲ್ಲಿಸಬೇಕು ಎಂದು ಹೇಳುವಾಗ ಗೊಂದಲವುಂಟಾಗುತ್ತದೆ ಎಂದರು.
ಚಿಕ್ಕಬಳ್ಳಾಪುರದಲ್ಲೂ ಮಡೆ ಮಡಸ್ನಾನ: ಒಂದೆಡೆ ವಿರೋಧ ವ್ಯಕ್ತವಾಗುತ್ತಿದ್ದರೆ ಚಿಕ್ಕಬಳ್ಳಾ ಪುರದ ಸುಬ್ಬರಾಯನ ಪೇಟೆಯಲ್ಲಿರುವ ಸುಬ್ರಮಣೇಶ್ವರ್ ಸ್ವಾಮಿ ದೇವಾಲಯದಲ್ಲೂ ಮಡೆ ಮಡಸ್ನಾನ ಆಚರಿಸಲಾಯಿತು. ಸುಬ್ರಮಣೇಶ್ವರ ಸ್ವಾಮಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಮಡೆ ಮಡಸ್ನಾನ ಪೂರೈಸಿದರು.
ನಾಗೇಶ್ ನಾಪತ್ತೆ
ಮಂಗಳೂರು: ಶಿವರಾಮ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಮಲೆಕುಡಿ ಜನಾಂಗದ ನಾಗೇಶ್ ಪರಾರಿಯಾಗಿದ್ದಾನೆ. ಶಿವರಾಮ ತಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ನಾಗೇಶ್ ಕಡಬ ಆಸ್ಪತ್ರೆಗೆ ದಾಖಲಾಗಿದ್ದ. ಬುಧವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಶಿವರಾಮ ಅವರು ಹಲ್ಲೆಗೆ ಸಂಬಂಧಿಸಿದಂತೆ ನಾಗೇಶ್ ಸೇರಿದಂತೆ ೨೫ ಜನರ ವಿರುದ್ಧ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಾಗೇಶ್ ಕೂಡ ಶಿವರಾಮ ಅವರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಪೈಕಿ ಶಿವರಾಮ ಅವರು ನೀಡಿದ ದೂರು ಮಾತ್ರ ಸುಬ್ರಮಣ್ಯ ಠಾಣೆಯಲ್ಲಿ ದಾಖಲಾಗಿದೆ.
ಮಲ ಸ್ನಾನಕ್ಕಿಂತ ಹೊರತಲ್ಲ: ನಿಡುಮಾಮಿಡಿ
ಮಂಗಳೂರು: ಇಂದು ಮಡೆ ಮಡಸ್ನಾನ ಸಮರ್ಥಿಸುವವರು ನಾಳೆ ಮಲ ಸ್ನಾನವನ್ನೂ ಸಮರ್ಥಿಸುತ್ತಾರೆ. ಹಾಗಾಗಿ ಈ ಪದ್ಧತಿ ನಿಷೇಧವಾಗಲೇಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಂಜೇಶ್ವರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡೆ ಮಡಸ್ನಾನ ಮಲ ಸ್ನಾನಕ್ಕಿಂತ ಹೊರತಾಗಿಲ್ಲ. ಮಡೆ ಮಡಸ್ನಾನದ ಬಗ್ಗೆ ಸತ್ಯಶೋಧನೆಗೆ ಬಂದ ಶಿವರಾಮ ಮೇಲೆ ನಡೆಸಿದ ಹಲ್ಲೆ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರು, ಹಲ್ಲೆಗೆ ಪ್ರೇರೇಪಿಸಿದವರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. madesnana
0 comments:
Post a Comment