Bangalore: ದೇಶದಲ್ಲಿಯೇ ಮೊದಲ ಬಾರಿ ಕರ್ನಾಟಕದಲ್ಲಿ ಆಯೋಜಿಸಲಾಗಿರುವ ಮಹತ್ವಾಕಾಂಕ್ಷಿ ‘ಜಾಗತಿಕ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣ ಸಮ್ಮೇಳನ’ಕ್ಕೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಮ್ಮೇಳನದ ಮೊದಲ ದಿನವೇ ದೇಶದ ಪ್ರಮುಖ ಸುಮಾರು 10ಕ್ಕೂ ಹೆಚ್ಚು ಸಂಸ್ಥೆಗಳು, ಕೃಷಿ ಮೂಲಭೂತ ಸೌಕರ್ಯ, ಆಹಾರ ಸಂಸ್ಕರಣೆ, ತೋಟಗಾರಿಕೆ ಮತ್ತು ರೇಷ್ಮೆ ಉದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಸುಮಾರು 53 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದು, ಈ ಸಂಬಂಧ ರಾಜ್ಯ ಸರಕಾರದ ಜೊತೆಗೆ ಒಡಂಬಡಿಕೆಗಳಿಗೆ ಸಹಿ ಹಾಕಿವೆ.
ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಸ್ರೇಯಿ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿ. 15 ಸಾವಿರ ಕೋಟಿ, ವಾಧ್ವಾನ್ ಮೆಗಾ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. 10 ಸಾವಿರ ಕೋ, ವೆಲ್‌ಸ್ಪನ್ ಇನ್ಫ್ರಾಟೆಕ್ ಲಿ. 5 ಸಾವಿರ ಕೋ, ಮಾರ್ಗ್ ಲಿ. 4 ಸಾವಿರ ಕೋ, ಸಿದ್ಧಿ ವಿನಾಯಕ ಲಾಜಿಸ್ಟಿಕ್ ಲಿ. 7 ನೂರು ಕೋ, ಅಕ್ಷಯಕಲ್ಪ ಫಾರ್ಮ್ಸ್ ಆ್ಯಂಡ್ ಫುಡ್ ಪ್ರೈ.ಲಿ. 1 ಸಾವಿರ ಕೋ, ಬಿವಿಜಿ ಇಂಡಿಯಾ ಲಿ. 500 ಕೋಟಿ, ಕರಟೂರಿ ಗ್ಲೋಬಲ್ ಲಿ. 450 ಕೋಟಿ ಮತ್ತು ರಾಯ್ ಫೌಂಡೇಷನ್ 100 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಸಂಬಂಧ ಒಡಂಬಡಿಕೆ ಮಾಡಿಕೊಂಡಿವೆ.
ಲಕ್ಷ ಕೋಟಿ ಮೀರುವ ಸಾಧ್ಯತೆ: ಈ ಸಮ್ಮೇಳನದಲ್ಲಿ 53 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ನೀರಿಕ್ಷಿಸಲಾಗಿದೆ. ಆದರೆ ಮೊದಲ ದಿನದ ಬೆಳವಣಿಗೆ ಗಮನಿಸಿದರೆ ಬಂಡವಾಳ ಹೂಡಿಕೆಯ ಪ್ರಮಾಣ 1 ಲಕ್ಷ ಕೋಟಿ ಮೀರುವ ಸಾಧ್ಯತೆಯಿದೆ. ಸಮ್ಮೇಳನದ ಎರಡನೆ ದಿನವಾದ ಶುಕ್ರವಾರ 15ಕ್ಕೂ ಹೆಚ್ಚು ಕಂಪನಿಗಳು ಒಡಂಬಡಿಕೆಗಳಿಗೆ ಸಹಿ ಹಾಕಲಿವೆ.
ಎಸ್‌ಬಿಐ 40 ಸಾವಿರ ಕೋಟಿ ಸಾಲದ ಭರವಸೆ: ಇದಲ್ಲದೆ ಕರ್ನಾಟಕದಲ್ಲಿ ಕೃಷಿ ವಾಣಿಜ್ಯ ಯೋಜನೆಗಳ ಅನುಷ್ಠಾನಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ) ರಾಜ್ಯ ಸರಕಾರಕ್ಕೆ ಒಟ್ಟು 40,000 ಕೋಟಿ ರೂ.ಗಳ ಸಾಲ ನೀಡಲು ಒಪ್ಪಿಕೊಂಡಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಸಚಿವರ ಸಮ್ಮುಖದಲ್ಲಿ ಎಸ್‌ಬಿಐನ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಆಯುಕ್ತ ಸುಬೀರ್ ಹರಿಸಿಂಗ್ ಪರಸ್ಪರ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
0 comments:
Post a Comment