indira goswamy: ಜ್ಞಾನಪೀಠ ಪುರಸ್ಕೃತೆ, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ ) ಮತ್ತು ಕೇಂದ್ರದ ನಡುವೆ ಸಂಧಾನಕಾರ್ತಿ ಮತ್ತು ಭಾರತದ ಪ್ರಥಮ ಪ್ರತಿಷ್ಠಿತ ಪ್ರಿನ್ಸ್ ಕ್ಲಾಸ್ ಪ್ರಶಸ್ತಿ ಪುರಸ್ಕೃತೆ ಇಂದಿರಾ ಗೋಸ್ವಾಮಿ ಇಂದು ಮುಂಜಾನೆ 7:45ಕ್ಕೆ ನಿಧನ ಹೊಂದಿದ್ದಾರೆ. ಮಮೋನಿ ರಾಯ್‌ಸಂ ಗೋಸ್ವಾಮಿ ಎಂದೇ ಖ್ಯಾತಿ ಪಡೆದಿದ್ದ ಇಂದಿರಾ ಗೋಸ್ವಾಮಿ, ಕಳೆದ ಫೆಬ್ರವರಿಯಿಂದ ಹಾಸಿಗೆ ಹಿಡಿದಿದ್ದರು. ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ತನ್ನ 69ನೆ ವಯಸ್ಸಿನಲ್ಲಿ ಗೋಸ್ವಾಮಿ ನಿಧನರಾಗಿದ್ದಾರೆ. ಅವರ ಪತಿ ಮಾಧವನ್ ರಾಯ್‌ಸಂ ಅಯ್ಯಂಗಾರ್ 1965ರಲ್ಲಿ ವಿವಾಹವಾದ ಎರಡು ವರ್ಷಗಳಲ್ಲೇ ಅಪಘಾತವೊಂದರಲ್ಲಿ ಮರಣವನ್ನಪ್ಪಿದ್ದರು.
ಗೋಸ್ವಾಮಿ ಹಲವು ಅಸ್ಸಾಮಿ ಕಾದಂಬರಿಗಳಿಗಾಗಿ ಪ್ರಖ್ಯಾತರಾಗಿದ್ದರು. ಸಣ್ಣ ಕತೆಯಲ್ಲೂ ಅವರು ಪ್ರಸಿದ್ಧಿ ಪಡೆದಿದ್ದು, 1982ರಲ್ಲಿ ತನ್ನ ಪ್ರಭಾವಶಾಲಿಕಾದಂಬರಿ ‘ಮಮಾರೆ ಧಾರಾ ತರೋವಲ್, ಅರು ದೂಖಾನ್ ಉಪನ್ಯಾಸ’ಕ್ಕೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭ್ಯವಾಗಿತ್ತು ಮತ್ತು 2000ದಲ್ಲಿ ಅವರು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದರು. ಮೃತ ಸಾಹಿತಿಯ ಅಂತ್ಯ ಸಂಸ್ಕಾರ ಎಲ್ಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಅಸ್ಸಾಂ ಸರಕಾರ ಘೋಷಿಸಿದೆ. ಗೋಸ್ವಾಮಿಯವರ ನಿಧನಕ್ಕೆ ಮುಖ್ಯಮಂತ್ರಿ ತರುಣ್ ಗಗೋಯ್ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಆಸ್ಪತ್ರೆಗೆ ತೆರಳಿದ ಮುಖ್ಯಮಂತ್ರಿ, ಅಗಲಿದ ಗಣ್ಯ ಸಾಹಿತಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಗೋಸ್ವಾಮಿಯವರ ಪಾರ್ಥೀವ ಶರೀರವನ್ನು ಇಲ್ಲಿನ ಜಡ್ಜರ ಫೀಲ್ಡ್‌ನಲ್ಲಿ ಇರಿಸಲಾಗಿದ್ದು, ಅಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಗೋಸ್ವಾಮಿಯವರ ಅಂತ್ಯ ಸಂಸ್ಕಾರ ಬುಧವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಗೋಸ್ವಾಮಿಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಆಸ್ಪತ್ರೆಯ ಆವರಣದಲ್ಲಿ ಮತ್ತು ಅವರ ನಿವಾಸದಲ್ಲಿ ಪ್ರಖ್ಯಾತ ಸಾಹಿತಿಗಳು, ಲೇಖಕರು, ರಾಜಕೀಯ ನಾಯಕರುಗಳು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳ ಕಾರ್ಯಕರ್ತರು, ಅಸ್ಸಾಂ ಸಾಹಿತ್ಯ ಸಭಾ ಮತ್ತು ಬೋಡೊ ಸಾಹಿತ್ಯ ಸಭಾದ ಪ್ರತಿನಿಧಿಗಳು ಬೃಹತ್ ಪ್ರಮಾಣದಲ್ಲಿ ಸೇರಿದರು.
ಉಲ್ಫಾ ಉಗ್ರವಾದಿಗಳು ಮತ್ತು ಕೇಂದ್ರ ಸರಕಾರದ ನಡುವೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದ್ದ ಗೋಸ್ವಾಮಿ, ಉಲ್ಫಾ ಮಾತುಕತೆಗೆ ಬರುವಂತೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಥಾ ಪ್ರಶಸ್ತಿ, ಕರ್ನಾಟಕ ಸಂಘ ಸಮ್ಮಾನ್, ಮಾನಸ್ ಚತುಚೇತಿ ಸಮಿತಿ ಸಮ್ಮಾನ್, ಕಮಲ್ ಕುಮಾರಿ ಫೌಂಡೇಶನ್ ರಾಷ್ಟ್ರೀಯ ಪ್ರಶಸ್ತಿ, ಸೌಹಾರ್ಧ ಪ್ರಶಸ್ತಿ, ಭಾರತ್ ನಿರ್ಮಾಣ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಂದ ಗೋಸ್ವಾಮಿ ಪುರಸ್ಕೃತರಾಗಿದ್ದರು.
0 comments:
Post a Comment