PLEASE LOGIN TO KANNADANET.COM FOR REGULAR NEWS-UPDATES


ಬಳ್ಳಾರಿ: ಹಣದ ಹೊಳೆಯಲ್ಲಿ ತೇಲುವವರಾರು? -
ಬಳ್ಳಾರಿ,   ವ್ಯಾಪಕ ಅಕ್ರಮ ಹಣ ಹಂಚಿಕೆ ಆರೋಪಗಳ ನಡುವೆಯೇ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಚುನಾವಣೆಗೆ ಸಿದ್ಧಗೊಂಡಿದೆ. ಬುಧವಾರ ಮತದಾನ ನಡೆಯಲಿದ್ದು, ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.
ಬಿಜೆಪಿ ಬೆಂಬಲಿಗರು ಮತದಾರರಿಗೆ ಹಂಚಲು ತಂದಿದ್ದ 12.62 ಲಕ್ಷ ರೂ. ನಗದನ್ನು ಕೌಲ್‌ಬಝಾರ್ ಪೊಲೀಸರುವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೃಷ್ಣ ಹಾಗೂ ನಂದೀಶ್ ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಬೆಂಬಲಿಗರಾಗಿದ್ದು, ಮತದಾರರಿಗೆ ಅಕ್ರಮವಾಗಿ ಹಂಚಲು ಹಣ ತಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಕೌಲ್ ಬಝಾರಿನ ವಿದ್ಯಾನಗರದಲ್ಲಿ ಮತದಾರರಿಗೆ ಹಣವನ್ನು ಹಂಚಲು ತಂದಿದ್ದು, ಈ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ಸ್ಥಳದಲ್ಲಿಯೇ ಬಂಧಿಸಿದುದು ಹಾಗೂ ಅವರ ಬಳಿ ಇದ್ದ ಬೈಕನ್ನು ಕೂಡಾ ವಶಪಡಿಸಿಕೊಂಡರು.
ಇನ್ನೊಂದೆಡೆ ರಾಮಾಂಜನೇಯ ನಗರದಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು, 15 ಸಾವಿರ ರೂ. ಹಾಗೂ ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಮತದಾನ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಲಾಗಿದ್ದು, ಕ್ಷೇತ್ರಾದ್ಯಂತ ಭದ್ರತೆ ಒದಗಿಸಲಾಗಿದೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆ ಬಿದ್ದಿದ್ದು, ರಾಜಕೀಯ ನಾಯಕರು ಕ್ಷೇತ್ರ ಬಿಟ್ಟು ತೆರಳಿರುವುದ ರಿಂದ ಅಭ್ಯರ್ಥಿಗಳೇ ಇಂದು ತಮ್ಮ ಪರ ಪ್ರಚಾರ ಕಾರ್ಯ ನಡೆಸಿದರು. ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್, ಬಿಜೆಪಿ ಅಭ್ಯರ್ಥಿ ಗಾದಿಲಿಂಗಪ್ಪ ಇಂದು ಕ್ಷೇತ್ರದ ವಿವಿಧ ಕಡೆಗಳಿಗೆ ತೆರಳಿ ಮತ ಯಾಚಿಸಿದರು. ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುವ ಮೂಲಕ ಕೊನೆಯ ಕ್ಷಣದ ಕಸರತ್ತು ನಡೆಸಿದರು.
ಕ್ಷೇತ್ರದಲ್ಲಿ ಯಾವುದೇ ರೀತಿಯ ಅಕ್ರಮ, ಅಶಾಂತಿ ಉಂಟಾಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ತಿಳಿಸಿದ್ದಾರೆ.
ಬಳ್ಳಾರಿ ಗಡಿನಾಡಾಗಿರುವುದರಿಂದ ಕ್ಷೇತ್ರಕ್ಕೆ ಆಂಧ್ರದಿಂದ ಮತದಾರರಿಗೆ ಹಂಚಲು ಅಕ್ರಮ ಹಣ, ಮದ್ಯ ತರುವುದನ್ನು ತಡೆಗಟ್ಟುವುದಕ್ಕಾಗಿ 13 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಕ್ಷೇತ್ರಕ್ಕೆ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಅವರು ಹೇಳಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 195 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, 950 ಮತಗಟ್ಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆದಿತ್ಯ ಆಮ್ಲಾ ಬಿಸ್ವಾಸ್ ತಿಳಿಸಿದ್ದಾರೆ. ಕ್ಷೇತ್ರಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ನಾಲ್ಕು ಅರೆಸೇನಾ ತುಕಡಿಗಳೊಂದಿಗೆ 2500 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 66 ಸಂಚಾರಿ ದಳ ಹಾಗೂ 500 ಹೋಮ್‌ಗಾರ್ಡ್‌ಗಳನ್ನು ಕೂಡಾ ಮತಗಟ್ಟೆಗಳ ಸುತ್ತಮುತ್ತ ನಿಯೋಜಿಸಲಾಗಿದೆ ಎಂದವರು ವಿವರಿಸಿದರು.
ಬಿಜೆಪಿ: ಗಾದಿ ಲಿಂಗಪ್ಪ
ಕಾಂಗ್ರೆಸ್: ರಾಮ್‌ಪ್ರಸಾದ್
ಪಕ್ಷೇತರ: ಶ್ರೀರಾಮುಲು

ಮತದಾರರ ಸಂಖ್ಯೆ: 1,72,050
ಮಹಿಳೆಯರು: 86,201
ಪುರುಷರು: 85,849


ಮತಗಟ್ಟೆ: 195, ಮತಗಟ್ಟೆ ಸಿಬ್ಬಂದಿ: 950
ಭದ್ರತೆ: 2500 ಪೊಲೀಸರು
4 ಅರೆಸೇನಾ ತುಕಡಿ
500 ಹೋಮ್‌ಗಾರ್ಡ್
66 ಸಂಚಾರಿ ದಳ
13 ಕಡೆ ಚೆಕ್‌ಪೋಸ್ಟ್
10 ಕೆಎಸ್‌ಆರ್‌ಪಿಯ ತುಕಡಿ
10 ಜಿಲ್ಲಾ ಮೀಸಲು ಪಡೆಯ ತುಕಡಿ
ಕಣದಲ್ಲಿರುವ ಅಭ್ಯರ್ಥಿಗಳು
ಕಣದಲ್ಲಿ ಒಟ್ಟು 8 ಮಂದಿ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಿಂದ ರಾಮಪ್ರಸಾದ್, ಬಿಜೆಪಿಯಿಂದ ಗಾದಿಲಿಂಗಪ್ಪ, ಪಕ್ಷೇತರರಾಗಿ ಶ್ರೀರಾಮುಲು, ಬಿ.ಆಂಜಿನಪ್ಪ, ಕೆ.ಚನ್ನಪ್ಪ, ನಾಗಪಳ್ಳಿ ಗಂಗಾಧರ್, ಬಿ.ಟಿ.ರಾಜು, ಬಿ.ರಾಮ್‌ಪ್ರಸಾದ್ ಕಣದಲ್ಲಿದ್ದಾರೆ

Advertisement

0 comments:

Post a Comment

 
Top