PLEASE LOGIN TO KANNADANET.COM FOR REGULAR NEWS-UPDATES


ತೆರೆದದ್ದು ಪರಪ್ಪನ ಅಗ್ರಹಾರ ಜೈಲಿನ ಬಾಗಿಲು ಮಾತ್ರವಲ್ಲ, ಈವರೆಗೆ ಅದುಮಿಟ್ಟ ಬಿಜೆಪಿಯೊಳಗಿನ ಅಸಹನೆಯ ಬಾಗಿಲು ಜೊತೆ ಜೊತೆಗೇ ತೆರೆದಿದೆ. ಯಡಿಯೂರಪ್ಪ ಜೈಲಿನಿಂದ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿರಬಹುದು. ಆದರೆ ರಾಜ್ಯದ ಬಿಜೆಪಿಗಲ್ಲ. ನಿನ್ನೆ ತಾನೆ ಜೈಲಿನೊಳಗೇ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಜಟಾಪಟಿ ನಡೆದಿದೆಯೆನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜೈಲಿನೊಳಗೆ ಪಂಜರದ ಸಿಂಹದಂತೆ ಚಡಪಡಿಸುತ್ತಿದ್ದ ಯಡಿಯೂರಪ್ಪ, ಇನ್ನು ಹೊರಗೆ ಬಂದರೆ ಏನು ನಡೆಯಬಹುದು ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ. 24 ದಿನಗಳ ವನವಾಸ ಯಡಿಯೂರಪ್ಪ ಬದುಕಿನಲ್ಲಿ ಸಣ್ಣ ವಿಷಯವೇನೂ ಅಲ್ಲ. ತಾನು ಜೈಲು ಸೇರಲು, ಪಕ್ಷದ ನಾಯಕರೇ ಕಾರಣ ಎನ್ನುವ ಅಸಮಾಧಾನ ಅವರೊಳಗೆ ಕುದಿಯುತ್ತಿದೆ. ಅದು ಹೊರ ಬರುವುದಕ್ಕೆ ಶ್ರೀರಾಮುಲು ಸ್ಪರ್ಧೆ ಒಂದು ನೆಪವಾಗಲಿದೆಯೋ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಯಡಿಯೂರಪ್ಪ ಅವರಿಗೆ ಕಣ್ಣಿದೆ. ಸ್ಥಾನಕ್ಕಿಂತಲೂ ಮುಖ್ಯವಾಗಿ, ರಾಜ್ಯ ಬಿಜೆಪಿಯ ಮೇಲಿನ ಹಿಡಿತ ತನ್ನ ಕೈಯಿಂದ ಜಾರಿಹೋಗುವ ಭಯ ಯಡಿಯೂರಪ್ಪ ಅವರಿಗಿದೆ. ಅಧಿಕಾರವಿಲ್ಲದ ಬಾಳಿನ ಗೋಳನ್ನು ಅನುಭವಿಸಿದವರವರು. ಅಧಿಕಾರ ಕೈ ತಪ್ಪಿದರೆ ಕ್ರಮೇಣ ತನ್ನ ಸುತ್ತಲಿರುವವರೆಲ್ಲ ದೂರವಾಗುತ್ತಾ ಹೋಗುತ್ತಾರೆನ್ನುವ ಸಂಗತಿ ಅವರಿಗೆ ಚೆನ್ನಾಗಿ ಗೊತ್ತಿದೆ. ಈಗಾಗಲೇ ಎದುರಾಳಿಗಳು ಅವರನ್ನು ಶಾಶ್ವತವಾಗಿ ಮೂಲೆಗುಂಪಾಗಿಸಲು ಯತ್ನಿಸುತ್ತಿದ್ದಾರೆ. ಸದಾನಂದಗೌಡರು ಮುಖ್ಯಮಂತ್ರಿಯಾಗಿ ಬೇರೂರಿದರೆ, ಮತ್ತೆ ಅದು ತನ್ನ ಕೈಗೆ ಎಟುಕದು ಎನ್ನುವುದೂ ಅವರಿಗೆ ಸ್ಪಷ್ಟವಿದೆ. ಒಂದೆಡೆ ಅಧಿಕಾರವೂ ಇಲ್ಲ, ಪಕ್ಷದ ಮೇಲೆ ಹಿಡಿತವೂ ಇಲ್ಲ.
ಬರೇ ಲಿಂಗಾಯತ ಸ್ವಾಮೀಜಿಗಳ ಆಶೀರ್ವಾದದ ಬಲದಿಂದ ಪಕ್ಷದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಮಾತ್ರವಲ್ಲ, ಅಧಿಕಾರವಿಲ್ಲದ ತನ್ನನ್ನು ಲಿಂಗಾಯತ ಸ್ವಾಮೀಜಿಗಳು ಬಹಳ ದಿನ ಸಹಿಸುವುದು ಕಷ್ಟ ಎನ್ನುವುದೂ ರಾಜಕೀಯದಲ್ಲಿ ಪಳಗಿದ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಆದುದರಿಂದ, ತಾತ್ಕಾಲಿಕವಾಗಿ ಪಕ್ಷದಲ್ಲಿ ತನ್ನನ್ನು ತಾನು ಚಲಾವಣೆಯಲ್ಲಿಟ್ಟುಕೊಳ್ಳಲು ಯಾವುದಾದರೊಂದು ಪದವಿಯ ಅಗತ್ಯವಿದೆ. ಆದುದರಿಂದಲೇ ಅವರು ಮುಖ್ಯಮಂತ್ರಿ ಕುರ್ಚಿ ಮತ್ತೆ ತನ್ನ ಕೈವಶವಾಗುವವರೆಗೆ ರಾಜ್ಯಾಧ್ಯಕ್ಷ ಪದವಿಯನ್ನು ಬಯಸಿದ್ದಾರೆ. ಆ ಮೂಲಕ, ಬಿಜೆಪಿಯ ನಿಯಂತ್ರಣ ತನ್ನ ಕೈಯಲ್ಲಿರಬೇಕು ಎಂದು ಯೋಚಿಸುತ್ತಿದ್ದಾರೆ. ಆದರೆ ಈಶ್ವರಪ್ಪ ಬಣ ಅದಕ್ಕೆ ಅವಕಾಶ ಕೊಡುವುದು ಕಷ್ಟ. ಆದುದರಿಂದ, ಯಡಿಯೂರಪ್ಪ-ಈಶ್ವರಪ್ಪ ನಡುವಿನ ಜಂಗೀಕುಸ್ತಿಯನ್ನು ನೋಡಲು ಕರ್ನಾಟಕದ ಜನತೆ ಸಿದ್ಧರಾಗಬೇಕಾಗಿದೆ.
ಹಾಗೆ ನೋಡಿದರೆ ಯಡಿಯೂರಪ್ಪ ಬಿಜೆಪಿಯೊಳಗೆ ಇನ್ನೂ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಅತ್ಯಧಿಕ ಸಂಖ್ಯೆಯ ಶಾಸಕರು ಯಡಿಯೂರಪ್ಪ ಜೊತೆಗಿದ್ದಾರೆ. ಯಡಿಯೂರಪ್ಪ ಮಾತನ್ನು ಮೀರುವಷ್ಟರ ಮಟ್ಟಿಗೆ ಸದಾನಂದ ಗೌಡರು ಇನ್ನೂ ಬೆಳೆದಿಲ್ಲ. ಸದ್ಯಕ್ಕೆ ಈ ಸರಕಾರ ಉಳಿದು ಯಡಿಯೂರಪ್ಪ ಅವರಿಗೆ ಆಗಬೇಕಾದದ್ದು ಏನೂ ಇಲ್ಲ. ಯಾಕೆಂದರೆ, ಸದ್ಯಕ್ಕೆ ಮುಖ್ಯಮಂತ್ರಿಯಾಗುವುದು ಕನಸಿನ ಮಾತು ಎನ್ನುವುದು ಅವರಿಗೆ ಗೊತ್ತು. ಆದುದರಿಂದ, ತನ್ನ ಬೇಡಿಕೆ ಈಡೇರದೇ ಇದ್ದರೆ ಸರಕಾರವನ್ನು ಉರುಳಿಸುವ ಬೆದರಿಕೆಯನ್ನು ಒಡ್ಡಬಹುದು. ಈ ಬೆದರಿಕೆ ಬಿಜೆಪಿಯನ್ನು ವಿಭಜಿಸುವ ಮಟ್ಟಕ್ಕೆ ಹೋದರೆ ಅದರಲ್ಲಿ ಅಚ್ಚರಿಯಿಲ್ಲ. ಈಗಾಗಲೇ ಬಹುಸಂಖ್ಯಾತ ಶಾಸಕರ ಬೆಂಬಲವನ್ನು ವರಿಷ್ಠರಿಗೆ ಸಾಬೀತು ಪಡಿಸಿರುವ ಯಡಿಯೂರಪ್ಪ, ಒಂದಿಷ್ಟು ಶಾಸಕರೊಂದಿಗೆ ಹೊರಬಂದು ಜೆಡಿಎಸ್ ಜೊತೆಗೆ ಕೈ ಜೋಡಿಸಿದರೆ ಅಲ್ಲಿಗೆ ಬಿಜೆಪಿಯ ಕತೆ ಮುಗಿದಂತೆ. ಇದರ ಜೊತೆಗೆ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಬೇಕೋ ಬೇಡವೋ ಎನ್ನುವುದು ಇನ್ನೂ ಇತ್ಯರ್ಥವಾಗಿಲ್ಲ. ಒಂದು ವೇಳೆ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದ್ದೇ ಆದರೆ ಅದೂ ವಿವಾದಕ್ಕೆ ಕಾರಣವಾಗಲಿದೆ. ನೀಡದೇ ಇದ್ದರೆ ಶ್ರೀರಾಮುಲು ತಂಡ ಬಿಜೆಪಿಯಿಂದ ಹೊರಬರುವುದು ನಿಚ್ಚಳ.
ಒಂದು ರೀತಿಯಲ್ಲಿ ಬಿಜೆಪಿ ಸರಕಾರ ಯಾವ ಕ್ಷಣಕ್ಕೂ ಕುಸಿದು ಬೀಳುವ ಹಂತದಲ್ಲಿದೆ. ಹೀಗಿರುವಾಗ ಈ ಸರಕಾರದಿಂದ ಎಂತಹ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಬಿಜೆಪಿ ವರಿಷ್ಠರಿಗೆ ಸದ್ಯಕ್ಕಿರುವುದು ಒಂದೇ ಒಂದು ಮಾರ್ಗ ಎಂದರೆ, ಕುಸಿದು ಬೀಳುವ ಮೊದಲೇ ಸರಕಾರವನ್ನು ವಿಸರ್ಜಿಸುವುದು. ಹೊಸ ಚುನಾವಣೆಗೆ ಸಿದ್ಧವಾಗುವುದು. ಇದರಿಂದ ಬಿಜೆಪಿಗೆ ಮಾತ್ರವಲ್ಲ, ನಾಡಿನ ಜನತೆಯೂ ಒಂದಿಷ್ಟು ನಿರಾಳವಾಗಬಹುದು. ಬಿಜೆಪಿಯನ್ನು ಪುನರ್ ಸಂಘಟಿಸಿ ಮತ್ತೆ ಚುನಾವಣೆಗಿಳಿಯದ ಹೊರತು, ಸದ್ಯದ ಸಂದಿಗ್ಧದಿಂದ ಪಾರಾಗುವುದಕ್ಕೆ ಬೇರೆ ದಾರಿಯೇ ಇಲ್ಲ.   - ಸಂಪಾದಕೀಯ ವಾರ್ತಾಭಾರತಿ

Advertisement

0 comments:

Post a Comment

 
Top