ಬೆಂಗಳೂರು, ನ.8: ಭ್ರಷ್ಟಾಚಾರ ಮತ್ತು ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕಡೆಗೂ ‘ಮುಕ್ತಿ’ ದೊರೆತಿದೆ. ಲೋಕಾಯುಕ್ತ ಕೋರ್ಟ್‌ನಲ್ಲಿ ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ 2ನೆ ಖಾಸಗಿ ದೂರಿನ ಸಂಬಂಧ ಯಡಿಯೂರಪ್ಪಗೆ ಇತ್ತೀಚೆಗಷ್ಟೆ ಜಾಮೀನು ನೀಡಿದ್ದ ಹೈಕೋರ್ಟ್, 3ನೆ ದೂರಿಗೂ ಕೂಡ ಮಂಗಳವಾರ ಷರತ್ತುಬದ್ಧ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ 24ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೆೈದಿಯಾಗಿ ಬಂಧಿಯಾಗಿದ್ದ ಯಡಿಯೂರಪ್ಪ ಮಂಗಳವಾರ ಸಂಜೆ 6:35ಕ್ಕೆ ಬಿಡುಗಡೆಯಾದರು. ಇದರೊಂದಿಗೆ ಅವರ ಸೆರೆಮನೆ ವಾಸ ಅಂತ್ಯಗೊಂಡಿದೆ.
ಜತೆಗೆ ಯಡಿಯೂರಪ್ಪರೊಂದಿಗೆ ಜೈಲುವಾಸ ಅನುಭವಿಸುತ್ತಿದ್ದ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿಗೂ ಕೂಡ ಹೈಕೋರ್ಟ್, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ನ್ಯಾಯಾಂಗ ಬಂಧನದಿಂದ ಕಂಗೆಟ್ಟಿದ್ದ ಶೆಟ್ಟಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಷರತ್ತುಗಳೇನು?: ತಲಾ 5ಲಕ್ಷ ರೂ.ಮೊತ್ತದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಜಾಮೀನು ನೀಡಬೇಕು. ಯಾವುದೆ ಕಾರಣಕ್ಕೂ ಪ್ರಕರಣದ ದೂರುದಾರ ಅಥವಾ ಸಾಕ್ಷಿದಾರರನ್ನು ಸಂಪರ್ಕಿಸಬಾರದು. ಅವರ ಮೇಲೆ ಒತ್ತಡ ಹೇರುವ, ಬೆದರಿಸುವ ಅಥವಾ ಸಾಕ್ಷಾಧಾರಗಳ ನಾಶಕ್ಕೆ ಯತ್ನಿಸಬಾರದು. ಲೋಕಾಯುಕ್ತ ಕೋರ್ಟ್‌ನ ಅನುಮತಿಯಿಲ್ಲದೆ ದೇಶಬಿಟ್ಟು ಹೋಗಬಾರದು, ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರು ಹಾಗೂ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಗೆ ಜಾಮೀನು ಮಂಜೂರು ಮಾಡಿರುವ ನ್ಯಾ.ಬಿ.ವಿ.ಪಿಂಟೋ ಅವರು, ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನ್ಯಾ.ಬಿ.ವಿ.ಪಿಂಟೋರ ಆದೇಶವೇನು?: ಯಡಿಯೂರಪ್ಪ ಡಿನೋಟಿಫೈ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿ ಜಮೀನು ಡಿನೋಟಿಫೈ ಮಾಡಿದ್ದಾರೆ. ಶಾಸಕ ಕೃಷ್ಣಯ್ಯ ಶೆಟ್ಟಿಯು ಕೃಷಿ ಭೂಮಿಯನ್ನು ವಸತಿ ಭೂಮಿಯಾಗಿ ಪರಿವರ್ತಿಸಿ, ನಂತರ ನಿವೇಶನಗಳನ್ನು ರಚಿಸಿ ಮಾರಾಟ ಮಾಡಿದ್ದಾರೆ. ಇವು ಗಂಭೀರ ಅಪರಾಧಗಳೆಂದು ಅರ್ಜಿಯಲ್ಲಿ ದೂರಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) 405, 120(ಬಿ) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 13(1)(ಇ), 13(1)(ಡಿ) ಪ್ರಕಾರ ಡಿನೋಟಿಫಿಕೇಷನ್ ಅಪರಾಧಕ್ಕೆ ಕೇವಲ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಕರ್ನಾಟಕ ಭೂ ಸ್ವಾಧೀನ ಕಾಯ್ದೆ ಕಲಂ 12ರಡಿ 6-7 ವರ್ಷ ಜೈಲು ಶಿಕ್ಷೆಯಾಗುತ್ತದೆ. ಆದರೆ, ಯಡಿಯೂರಪ್ಪ ಮತ್ತು ಕೃಷ್ಣಯ್ಯಶೆಟ್ಟಿ ವಿರುದ್ಧದ ಆರೋಪ ಜೀವಾವಧಿ ಅಥವಾ ಮರಣ ದಂಡನೆಗೆ ಅರ್ಹವಲ್ಲ ಮತ್ತು ಡಿನೋಟಿಫಿಕೇಷನ್ ಒಂದು ಅಪರಾಧವೇನಲ್ಲ. ಡಿನೋಟಿಫಿಕೇಷನ್ ಆರೋಪ ಹೊರತು ಪಡಿಸಿದರೆ, ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಯು ಈ ಹಿಂದೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಮತ್ತು ಅವರು ಕ್ರಿಮಿನಲ್ ಇತಿಹಾಸ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಮತ್ತು ಕೃಷ್ಣಯ್ಯಶೆಟ್ಟಿ ಜಾಮೀನಿಗೆ ಅರ್ಹರು ಎಂದು ನ್ಯಾ.ಬಿ.ವಿ.ಪಿಂಟೊ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ತಾನು ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳೆಲ್ಲವೂ ದೃಢೀಕೃತ ದಾಖಲೆಗಳೆಂದು ದೂರುದಾರ ತನ್ನ ದೂರಿನಲ್ಲಿ ಎಲ್ಲಿಯೂ ತಿಳಿಸಿಲ್ಲ. ಅಲ್ಲದೆ 3ನೆ ದೂರಿನ ಸಂಬಂಧ ಸಲ್ಲಿಸಿರುವ 40 ದಾಖಲಾತಿಗಳೆಲ್ಲವೂ ದೃಢೀಕರಣಗೊಂಡ ದಾಖಲೆಗಳು ಎನ್ನಲಾಗುವುದಿಲ್ಲ. ದೂರುದಾರ ಕಚೇರಿಯಲ್ಲಿ ಕುಳಿತು ದೂರನ್ನು ಸಿದ್ಧಪಡಿಸಿದ್ದಾನೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಧೀನ ನ್ಯಾಯಾಲಯ ಕೇವಲ ದೂರುದಾರನ ವೌಖಿಕ ಹೇಳಿಕೆಯನ್ನು ಪರಿಗಣಿಸಿ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಯನ್ನು ಜೈಲಿಗೆ ಕಳುಹಿಸಿದೆ. ಕೇವಲ ದೂರುಗಳನ್ನು ಆಧರಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವುದಾದರೆ, ದೇಶದ ಎಲ್ಲ ಆರೋಪಿಗಳ ಪೈಕಿ ಶೇ.50ರಷ್ಟು ಜನರು ಜೈಲು ಸೇರಬೇಕಾಗುತ್ತದೆ. ಅಧೀನ ನ್ಯಾಯಾಲಯ ಪ್ರಕರಣದ ದಾಖಲಾತಿಗಳನ್ನು ಸೂಕ್ತವಾಗಿ ಪರೀಕ್ಷಿಸದೆ ಮತ್ತು ಡಿನೋಟಿಫಿಕೇಷನ್ ಸಮಿತಿಯು ಶಿಫಾರಸುಗಳನ್ನು ತಿರಸ್ಕರಿಸಿ ಭೂ ಡಿನೋಟಿಫೈ ಮಾಡಲಾಗಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಅರ್ಜಿದಾರರಿಗೆ ಜಾಮೀನು ನಿರಾಕರಿಸಿರುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ನಗರದ ರಾಚೇನಹಳ್ಳಿ ಭೂ ಮಾಲಕರಿಗೆ ಅನಗತ್ಯವಾಗಿ 9ಎಕರೆ ಮತ್ತು ಬೇನಾಮಿ ಕಂಪೆನಿಗೆ 1.23 ಎಕರೆಯನ್ನು ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಉತ್ತರಹಳ್ಳಿಯಲ್ಲಿ ಶಾಸಕ ಹೇಮಚಂದ್ರ ಸಾಗರ್‌ಗೆ 10 ಎಕರೆ ಡಿನೋಟಿಫಿಕೇಷನ್ ಮತ್ತು ಶಿವಮೊಗ್ಗ ಹಾಗೂ ಹೊಸದುರ್ಗದಲ್ಲಿ 430 ಎಕರೆಯನ್ನು ತಮ್ಮ ಪುತ್ರರ ಒಡೆತನದ ಸಹ್ಯಾದ್ರಿ ಹೆಲ್ತ್‌ಕೇರ್ ಮತ್ತು ಡಯೋಗ್ನೋಟಿಕ್ಸ್‌ನ ಷೇರುದಾರ ಪ್ರವೀಣ್ ಚಂದ್ರಗೆ ನಿಯಮ ಉಲ್ಲಂಘಿಸಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ವಕೀಲ ಸಿರಾಜಿನ್ ಬಾಷಾ 2011ರ ಜ.24ರಂದು ದೂರು ಸಲ್ಲಿಸಿದ್ದರು.
ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಧವಳಗಿರಿ ಪ್ರಾಪರ್ಟೀಸ್ ಮಾಲಕರಾದ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಆರ್.ಎನ್.ಸೋಹನ್ ಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಪ್ರಮುಖ ಆರೋಪಿಗಳಾಗಿದ್ದರು. ಲೋಕಾಯುಕ್ತ ವಿಶೇಷ ಕೋರ್ಟ್ ಫೆ.26ರಂದು ದೂರನ್ನು ವಿಚಾರಣೆಗೆ ಅಂಗೀಕರಿಸಿ, ಬಾಷಾರ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಿತ್ತು. ನಂತರ ಆ.8ರಂದು ಯಡಿಯೂರಪ್ಪ ಮತ್ತಿತರ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆ.29ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಯಡಿಯೂರಪ್ಪ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ.15ರಂದು ಜಾಮೀನು ಅರ್ಜಿ ವಜಾಗೊಳಿಸಿದ್ದ ಲೋಕಾಯುಕ್ತ ವಿಶೇಷ ಕೋರ್ಟ್, ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು. ಅ.18ರಂದು ಜಾಮೀನು ಕೋರಿ ಯಡಿಯೂರಪ್ಪ ಹೈಕೋರ್ಟ್‌ಮೆಟ್ಟಿಲೇರಿದ್ದರು.
ಸುಪ್ರೀಂಗೆ ಮೇಲ್ಮನವಿ
ಯಡಿಯೂರಪ್ಪಮತ್ತು ಕೃಷ್ಣಯ್ಯ ಶೆಟ್ಟಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಾರ ಪ್ರಶ್ನಿಸಲಾಗುವುದು.
ವಕೀಲ ಸಿರಾಜಿನ್ ಬಾಷಾ (ದೂರುದಾರ)
ಲೋಕಾಯುಕ್ತ ಕೋರ್ಟ್‌ನಲ್ಲಿ ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ 1, 4 ಮತ್ತು 5ನೆ ಖಾಸಗಿ ದೂರುಗಳ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ ಅವರು, ವಾದ-ಪ್ರತಿವಾದ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿದ್ದಾರೆ
0 comments:
Post a Comment