ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಬೆಳಿಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಆಂಧ್ರದಲ್ಲಿರುವ ಚಂಚಲಗುಡ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿದ್ದ ಬಿ.ಶ್ರೀರಾಮುಲು, ತಮ್ಮ ಆಪ್ತಸ್ನೇಹಿತ ಗಾಲಿ ಜನಾರ್ದನರೆಡ್ಡಿ ಅವರನ್ನು ಭೇಟಿಯಾಗಿ ಚರ್ಚಿಸಿ, ಪಕ್ಷೇತರರಾಗಿ ಸ್ಪರ್ಧಿಸುವಂತೆ ಸೂಚನೆ ದೊರೆತ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ನಡುವೆ, ಆಡಳಿತಾರೂಢ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಚರ್ಚಿಸಲು ಜಿಲ್ಲೆಯ ಪಕ್ಷದ ಮುಖಂಡರನ್ನು ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಂದ ಆಹ್ವಾನ ಬಂದಿದ್ದು, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಗುರುಲಿಂಗನಗೌಡ, ಯರಂಗಳಿಗಿ ತಿಮ್ಮಾರೆಡ್ಡಿ ಇತರರೊಂದಿಗೆ ರಾತ್ರಿ ಬೆಂಗಳೂರಿಗೆ ತೆರಳುವುದಾಗಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಿಗೌಡ ತಿಳಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಆಯ್ಕೆಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ ವಾಪಸ್: ಮಾಜಿ ಸಚಿವರಾದ ಜಿ.ಜನಾರ್ದನರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರ ನಿವಾಸಗಳಿಗೆ ನಿಯೋಜಿಸಿದ್ದ ಪೊಲೀಸ್ ಭಧ್ರತಾ ಸಿಬಂದಿಯನ್ನು ರಾಜ್ಯ ಸರ್ಕಾರ ಮಂಗಳವಾರದಿಂದ ಹಿಂದಕ್ಕೆ ಪಡೆದುಕೊಂಡಿದೆ.
ಜನಾರ್ದನರೆಡ್ಡಿ ಸಚಿವ ಸ್ಥಾನ ಕಳೆದುಕೊಂಡಿದ್ದು, ಬಿ.ಶ್ರೀರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲದೆ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಪಡೆಯಲಾಗಿದೆ.
2 ನಿವಾಸಗಳ ನಡುವೆ ಮೂರು ಗೇಟ್‌ಗಳಿದ್ದು, ಪ್ರತಿ ಮೂರು ಗಂಟೆಗೊಮ್ಮೆ ನಾಲ್ಕು ಮಂದಿಯಂತೆ ಒಟ್ಟು 12 ಪೊಲೀಸರು ಈ ಎರಡು ನಿವಾಸಗಳಿಗೆ ಭದ್ರತೆ ಒದಗಿಸಿದ್ದರು.
ಇದೇ ತಿಂಗಳು 30 ರಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಚುನಾವಣೆ ಭದ್ರತೆಗೆ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಈ ಕ್ರಮಗೊಳ್ಳಲಾಗಿದೆ. ಶ್ರೀರಾಮುಲು ಅವರಿಗೆ ನೀಡಿರುವ ವೈಯಕ್ತಿಕ ಭದ್ರತೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಬಿಜೆಪಿ ನಾಯಕರ ಭಾವಚಿತ್ರಕ್ಕೆ ಅರ್ಧಚಂದ್ರ
ನಗರದ ಎಸ್.ಪಿ ಕಚೇರಿ ವೃತ್ತದಲ್ಲಿನ ಬಿಜೆಪಿ ಕಚೇರಿಯಲ್ಲಿ ಇದ್ದ ಪಕ್ಷದ ರಾಷ್ಟ್ರೀಯ ನಾಯಕರ ಭಾವಚಿತ್ರಗಳು, ಪಕ್ಷದ ಚಿಹ್ನೆ, ಬಾವುಟಗಳನ್ನು ಮಾಜಿ ಸಚಿವ ಶ್ರೀರಾಮುಲು ಅವರ ಬೆಂಬಲಿಗರು ತೆಗೆದು ಹಾಕಿದ್ದಾರೆ.
ಈ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರಗಳು ಇದ್ದವು. ಕಚೇರಿಯ ಕಟ್ಟಡ ರೆಡ್ಡಿ ಸೋದರರಿಗೆ ಸೇರಿದೆ ಎನ್ನಲಾಗಿದ್ದು, ಅಲ್ಲಿದ್ದ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ತೆಗೆಯಲಾಗಿದೆ ಎನ್ನಲಾಗಿದೆ. - ಕೃಪೆ : ಪ್ರಜಾವಾಣಿ
0 comments:
Post a Comment